ಮುಪ್ಪಾನೆ ಲಾಂಚ್‌ ಸೇವೆ ಪುನಾರಂಭ, 22 ದಿನದ ಬಳಿಕ ನಿಟ್ಟುಸಿರು ಬಿಟ್ಟ ದ್ವೀಪದ ಜನ

ಸಾಗರ: ಕಳೆದ 22 ದಿನಗಳಿಂದ ಸ್ಥಗಿತಗೊಂಡಿದ್ದ ಹಲ್ಕೆ – ಮುಪ್ಪಾನೆ ಮಾರ್ಗದ ಲಾಂಚ್‌ ಸೇವೆ ಪುನಾರಂಭವಾಗಿದೆ. ಮಾಜಿ ಸಚಿವ ಹರತಾಳು ಹಾಲಪ್ಪ ಸೇರಿ ಹಲವರು ಶನಿವಾರ ಲಾಂಚ್‌ನಲ್ಲಿ ಸಂಚರಿಸಿದರು.

ಕರೂರು ಹಾಗೂ ಭಾರಂಗಿ ಹೋಬಳಿ ಸಂಪರ್ಕ ಸೇತುವೆಯಾದ ಶರಾವತಿ ಹಿನ್ನೀರಿನ ಹಲ್ಕೆ ಮತ್ತು ಮುಪ್ಪಾನೆ ಮಾರ್ಗದ ಲಾಂಚ್ ಸಂಚಾರ ಶನಿವಾರದಿಂದ ಮತ್ತೆ ಆರಂಭಗೊಂಡಿದೆ. ಹಾಳಾದ ಲಾಂಚ್‌ ಬದಲು ಇನ್ನೊಂದು ಲಾಂಚ್‌ ವ್ಯವಸ್ಥೆ ಮಾಡಲಾಗಿದೆ ಎಂದು ಹರತಾಳು ಹಾಲಪ್ಪ ತಿಳಿಸಿದ್ದಾರೆ.

Muppane-Launch-Restarts-Former-Minister-Haratalu-Halappa-visits

ಮುಪ್ಪಾನೆ ಲಾಂಚ್‌ ಸ್ಥಗಿತವಾಗಿದ್ದೇಕೆ?

ದುರಸ್ಥಿ ಕಾರ್ಯದ ಹಿನ್ನೆಲೆ ಹಲ್ಕೆ – ಮುಪ್ಪಾನೆ ಮಾರ್ಗದ ಲಾಂಚ್‌ ಸೇವೆಯನ್ನು ಆಗಸ್ಟ್‌ 29 ರಿಂದ ಸ್ಥಗಿತಗೊಳಿಸಲಾಗಿತ್ತು. ಸಿಗಂದೂರು ಭಾಗದಲ್ಲಿ ಲಾಂಚ್‌ ನಿಲುಗಡೆಗೆ ಇರುವಂತಹ ಪ್ಲಾಟ್ ಫಾರ್ಮ್ ವ್ಯವಸ್ಥೆ ಹಲ್ಕೆ – ಮುಪ್ಪಾನೆ ಮಾರ್ಗದಲ್ಲಿ ಇಲ್ಲ. ಹಾಗಾಗಿ ಮಣ್ಣಿನ ದಂಡೆಯ ಮೇಲೆ ಲಾಂಚ್‌ ನಿಲ್ಲಿಸುವ ಅನಿವಾರ್ಯತೆ ಇದೆ. ಹೀಗೆ ನಿಲುಗಡೆ ಮಾಡಿದಾಗ ನೀರಿನಲ್ಲಿದ್ದ ಮರದ ದಿಮ್ಮಿಗಳು ಲಾಂಚ್‌ ತಳಭಾಗಕ್ಕೆ ತಗುಲಿದ್ದವು. ಇದರಿಂದ ಲಾಂಚ್ ತಾಂತ್ರಿಕ ದೋಷಕ್ಕೆ ಒಳಗಾಗಿದೆ. ಎಂಜಿನ್‌ಗೆ ಸಮಸ್ಯೆಯಾಗಿತ್ತು. ರಿಪೇರಿಗೆ ಇನ್ನಷ್ಟು ಸಮಯ ಹಿಡಿಯುವುದರಿಂದ ಈಗ ಬದಲಿ ಲಾಂಚ್‌ ವ್ಯವಸ್ಥೆ ಮಾಡಲಾಗಿದೆ.

ಇನ್ನು, ಕರೂರು ಹೋಬಳಿಗೆ ಮುಪ್ಪಾನೆ ಮಾರ್ಗವು ವಿವಿಧ ಕಾರಣಗಳಿಂದ ಮಹತ್ವದ್ದಾಗಿದೆ. ಕಾರ್ಗಲ್‌ ಪೊಲೀಸ್‌ ಠಾಣೆ ಹಾಗೂ ಜೋಗದ ವಿದ್ಯುತ್‌ ಕೇಂದ್ರಗಳಿಗೆ ತುಮರಿ – ಸಿಗಂದೂರು ವ್ಯಾಪ್ತಿಯ ಜನರಿಗೆ ಇದು ಹತ್ತಿರದ ಮಾರ್ಗ. ಆದ್ದರಿಂದ ಈ ಮಾರ್ಗದಲ್ಲಿ ನಿತ್ಯ ಜನ ಸಂಚಾರ ಇರಲಿದೆ.

ವರ್ಷದಲ್ಲಿ ಎರಡನೆ ಬಾರಿ ಸ್ಥಗಿತ

ಈ ವರ್ಷ ಬೇಸಿಗೆಯಲ್ಲಿ ಶರಾವತಿ ಹಿನ್ನೀರು ಗಣನೀಯವಾಗಿ ಕುಸಿದ ಹಿನ್ನೆಲೆ ಜೂನ್‌ ತಿಂಗಳಲ್ಲಿ ಲಾಂಚ್‌ ಸೇವೆ ಸ್ಥಗಿತಗೊಂಡಿತ್ತು. ಮಳೆ ಪ್ರಾರಂಭವಾಗಿ ನೀರು ಏರಿಕೆಯಾದ ಬಳಿಕ ಲಾಂಚ್‌ ಸೇವೆ ಪುನಾರಂಭವಾಗಿತ್ತು. ಅಷ್ಟರಲ್ಲಿ ತಾಂತ್ರಿಕ ಸಮಸ್ಯೆಯಿಂದ ಪುನಃ ಸ್ಥಗಿತವಾಗಿತ್ತು. ಈಗ ಲಾಂಚ್‌ ಸೇವೆ ಪುನಾರಂಭವಾಗಿರುವುದು ಈ ಭಾಗದ ಜನರು ನಿಟ್ಟುಸಿರು ಬಿಡುವಂತೆ ಮಾಡಿದೆ.

ಲಾಂಚ್‌ ಪುನಾರಂಭದ ವೇಳೆ ದೇವೇಂದ್ರಪ್ಪ ಯಲಕುಂಡ್ಲಿ, ಬಿ.ಸಿ.ಲಕ್ಷ್ಮೀನಾರಾಯಣ, ರಾಜೇಶ್ ಯಲಕೋಡು, ದಿನೇಶ್ ಆರೋಡಿ, ಮಂಜಯ್ಯ ಜೈನ್, ಓಂಕಾರ್ ಜೈನ್, ಪ್ರಸನ್ನ ಇಡುವಾಣಿ, ನಾಗರಾಜ್ ವಾಟೇಮಕ್ಕಿ ಇತರರಿದ್ದರು.