ಮುಪ್ಪಾನೆ ಲಾಂಚ್‌ ಸೇವೆ ಸ್ಥಗಿತ, ಕಾರಣವೇನು?

ತುಮರಿ: ದುರಸ್ಥಿ ಕಾರ್ಯದ ಹಿನ್ನೆಲೆ ಹಲ್ಕೆ – ಮುಪ್ಪಾನೆ ಮಾರ್ಗದ ಲಾಂಚ್‌ ಸೇವೆಯನ್ನು ಶನಿವಾರದಿಂದ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ಲಾಂಚ್‌ಗೆ ಏನಾಗಿದೆ?

ಸಿಗಂದೂರು ಭಾಗದಲ್ಲಿ ಲಾಂಚ್‌ ನಿಲುಗಡೆಗೆ ಇರುವಂತಹ ಪ್ಲಾಟ್ ಫಾರ್ಮ್ ವ್ಯವಸ್ಥೆ ಹಲ್ಕೆ – ಮುಪ್ಪಾನೆ ಮಾರ್ಗದಲ್ಲಿ ಇಲ್ಲ. ಹಾಗಾಗಿ ಮಣ್ಣಿನ ದಂಡೆಯ ಮೇಲೆ ಲಾಂಚ್‌ ನಿಲ್ಲಿಸುವ ಅನಿವಾರ್ಯತೆ ಇದೆ. ಹೀಗೆ ನಿಲುಗಡೆ ಮಾಡಿದಾಗ ನೀರಿನಲ್ಲಿದ್ದ ಮರದ ದಿಮ್ಮಿಗಳು ಲಾಂಚ್‌ ತಳಭಾಗಕ್ಕೆ ತಗುಲಿವೆ. ಇದರಿಂದ ಲಾಂಚ್ ತಾಂತ್ರಿಕ ದೋಷಕ್ಕೆ ಒಳಗಾಗಿದೆ. ಎಂಜಿನ್‌ಗೆ ಸಮಸ್ಯೆಯಾಗಿದೆ ಎಂದು ತಿಳಿದು ಬಂದಿದೆ.

Muppane-Launch-in-Sagara-Sharavathi-River.

ಈ ಮಾರ್ಗಕ್ಕೆ ಲಾಂಚ್‌ ಅನಿವಾರ್ಯ

ಕರೂರು ಹೋಬಳಿಗೆ ಮುಪ್ಪಾನೆ ಮಾರ್ಗವು ವಿವಿಧ ಕಾರಣಗಳಿಂದ ಮಹತ್ವದ್ದಾಗಿದೆ. ಕಾರ್ಗಲ್‌ ಪೊಲೀಸ್‌ ಠಾಣೆ ಹಾಗೂ ಜೋಗದ ವಿದ್ಯುತ್‌ ಕೇಂದ್ರಗಳಿಗೆ ತುಮರಿ – ಸಿಗಂದೂರು ವ್ಯಾಪ್ತಿಯ ಜನರಿಗೆ ಇದು ಹತ್ತಿರದ ಮಾರ್ಗವಾಗಿದೆ. ಈ ವರ್ಷ ಹಿನ್ನೀರು ಗಣನೀಯವಾಗಿ ಕುಸಿದ ಹಿನ್ನೆಲೆ ಲಾಂಚ್‌ ಸೇವೆ ಸ್ಥಗಿತಗೊಂಡಿತ್ತು. ಮಳೆ ಪ್ರಾರಂಭವಾಗಿ ನೀರು ಏರಿಕೆಯಾದ ಬಳಿಕ ಲಾಂಚ್‌ ಸೇವೆ ಪುನಾರಂಭವಾಗಿತ್ತು.

ಒಂದು ವಾರ ಸಮಯ ಹಿಡಿಯಲಿದೆ

ಈಗ ತಾಂತ್ರಿಕ ಕಾರಣದಿಂದ ಮತ್ತೊಮ್ಮೆ ಲಾಂಚ್‌ ಸೇವೆ ಸ್ಥಗಿತಗೊಂಡಿದೆ. ತಾಂತ್ರಿಕ ಪರಿಣತರು ಲಾಂಚ್‌ ದುರಸ್ತಿ ಕಾರ್ಯ ನಡೆಸಬೇಕಿದೆ. ಹಾಗಾಗಿ ಲಾಂಚ್‌ ಸೇವೆ ಪುನಾರಂಭವಾಗಲು ಕನಿಷ್ಠ ಒಂದು ವಾರ ಸಮಯ ಹಿಡಿಯಲಿದೆ ಎಂದು ಬಂದರು ಮತ್ತು ಒಳನಾಡು ಜಲ ಸಾರಿಗೆ ಅಧಿಕಾರಿಗಳು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಲಾಂಚ್ ದುರಸ್ತಿ ಕಾರ್ಯ ವಿಳಂಬವಾಗಲಿದ್ದು, ಸಾರ್ವಜನಿಕರು ಹಾಗೂ ಪ್ರವಾಸಿಗರು ಸಮೀಪದ ಸಿಗಂದೂರು ಸೇತುವೆ ಮೂಲಕ ಪ್ರಯಾಣಿಸಬೇಕು ಎಂದು ತುಮರಿ ಗ್ರಾಮ ಪಂಚಾಯಿತಿ ಪಿಡಿಒ ಭೋಗರಾಜ ಮನವಿ ಮಾಡಿದ್ದಾರೆ. ಇನ್ನೊಂದೆಡೆ ಪರ್ಯಾಯ ಲಾಂಚ್‌ ವ್ಯವಸ್ಥೆ ಮಾಡುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.