
ಶಿವಮೊಗ್ಗ ಲೈವ್.ಕಾಂ | SAGARA | 19 ಫೆಬ್ರವರಿ 2020
ತವರು ಮನೆಯಲ್ಲಿ ಪ್ರತಿಷ್ಠಾಪಿಸಿದ್ದ ಶ್ರೀ ಮಾರಿಕಾಂಬ ದೇವಿ ಮೂರ್ತಿಯನ್ನು ಗಂಡನ ಮನೆಗೆ ತರಲಾಗಿದೆ. ಈ ವೇಳೆ ಅದ್ಧೂರಿಯಾದ ರಾಜಬೀದಿ ಉತ್ಸವದ ನಡೆಯಿತು.

ಮಂಗಳವಾರ ರಾತ್ರಿ 10ಕ್ಕೆ ಮಹಾಮಂಗಳಾರತಿ ನಂತರ ಪೋತರಾಜನಿಂದ ಚಾವಟಿ ಸೇವೆ ಹಾಗೂ ಹೆಣ್ಣು ಒಪ್ಪಿಸುವ ವಿಧಿವಿಧಾನಗಳು ನಡೆದವು. ಸಹಸ್ರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಉತ್ಸವದಲ್ಲಿ ಭಾಗಿಯಾದರು. ಶ್ರೀ ದೇವಿಯ ದಂಡಿನ ಮೆರವಣಿಗೆ ಹಾಗೂ ರಾಜಬೀದಿ ಉತ್ಸವ ಜನರನ್ನು ಆಕರ್ಷಿಸಿತು.
ಕಣ್ಸೆಳೆದ ಸಾಂಸ್ಕೃತಿಕ ಕಲಾ ತಂಡಗಳು
ಉಡುಪಿಯ ಕಲಾವಿದರ ಹುಲಿವೇಷ ಕುಣಿತವು ರೋಮಾಂಚನಕಾರಿಯಾಗಿತ್ತು. ಕೇರಳದ ಚಂಡೆವಾದನ, ತಮಿಳುನಾಡಿನ ಪೆಂಪೆ, ಚಿಕ್ಕಮಗಳೂರಿನ ವೀರಗಾಸೆ, ಹಲಗೆ ಮೇಳ, ಡೊಳ್ಳು ಕುಣಿತ ಇನ್ನೂ ಸೇರಿದಂತೆ ಮುಂತಾದ ಕಲಾತಂಡಗಳ ಕಲಾವಿದರು ಉತ್ಸವದಲ್ಲಿ ಪಾಲ್ಗೊಂಡಿದ್ದರು.

ದೇವಿಯನ್ನು ಭವ್ಯರಥದಲ್ಲಿರಿಸಿ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿ ಬುಧವಾರ ಬೆಳಗಿನ ಜಾವ ಗಂಡನಮನೆಗೆ ತರಲಾಯಿತು. ಧಾರ್ಮಿಕ ಆಚರಣೆಗಳ ಮೂಲಕ ಪೂಜಾ ಕಾರ್ಯಕ್ರಮಗಳು ನಡೆದವು. ಗಂಡನ ಮನೆಯಲ್ಲಿ ದೇವರ ದರ್ಶನಕ್ಕೆ ಜನರಿಗೆ ಅವಕಾಶ ಕಲ್ಪಿಸಲಾಗಿದೆ. ಫೆ. 26ರವರೆಗೂ ದೇವಿಯ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
ದರ್ಶನಕ್ಕೆ ಹರಿದು ಬರುತ್ತಿದೆ ಭಕ್ತ ಸಾಗರ
ಮಾರಿಕಾಂಬ ಜಾತ್ರೆಯ ಎರಡನೇ ದಿನವೂ ದೇವಿಯ ದರ್ಶನಕ್ಕೆ ಭಾರಿ ಸಂಖ್ಯೆಯಲ್ಲಿ ಜನರು ಆಗಮಿಸಿ ಪೂಜೆ ಸಲ್ಲಿಸಿದರು. ಕುಂಕುಮಾರ್ಚನೆ, ಉಡಿ ಸೇವೆ ಸೇರಿದಂತೆ ಇತರೆ ಸೇವೆಗಳಿಗೆ ಪ್ರತ್ಯೇಕ ಕೌಂಟರ್’ಗಳನ್ನು ಸ್ಥಾಪಿಸಲಾಗಿದೆ.

ಶ್ರೀ ಮಾರಿಕಾಂಬ ವ್ಯವಸ್ಥಾಪಕ ಸಮಿತಿ ಅಧ್ಯಕ್ಷ ಕೆ.ಎನ್.ನಾಗೇಂದ್ರ, ಪೂಜಾ ಸಮಿತಿ ಸಂಚಾಲಕ ಗಂಗಾಧರ ಜಂಬಿಗೆ, ಜಯರಾಂ, ಬಸವರಾಜ್, ಜಯಂತಿ, ವಸ್ತು ಪ್ರದರ್ಶನ ಸಮಿತಿ ಸಂಚಾಲಕ ತಾರಾಮೂರ್ತಿ, ಪ್ರಚಾರ ಸಮಿತಿ ಸಂಚಾಲಕ ರವಿ ನಾಯ್ಡು ಸೇರಿದಂತೆ ಎಲ್ಲ ಸಮಿತಿಯ ಪದಾಧಿಕಾರಿಗಳ ನೇತೃತ್ವದಲ್ಲಿ ವ್ಯವಸ್ಥಿತ ಸಿದ್ಧತೆ ಆಯೋಜಿಸಲಾಗಿತ್ತು.
ವಸ್ತು ಪ್ರದರ್ಶನಕ್ಕೆ ಚಾಲನೆ
ಸಾಗರದ ಮಾರಿಕಾಂಬಾ ಜಾತ್ರೆಯ ಪ್ರಯುಕ್ತ ಏರ್ಪಡಿಸಿದ್ದ ವಸ್ತು ಪ್ರದರ್ಶನಕ್ಕೆ ಸಾಗರ ಉಪವಿಭಾಗಾಧಿಕಾರಿ ಡಾ. ಎಲ್.ನಾಗರಾಜ್ ಚಾಲನೆ ನೀಡಿದರು. ಅಪರ ಜಿಲ್ಲಾಧಿಕಾರಿ ಜಿ.ಅನುರಾಧಾ, ವಸ್ತು ಪ್ರದರ್ಶನ ಸಮಿತಿ ಸಂಚಾಲಕ ತಾರಾಮೂರ್ತಿ, ಬಾಲಕೃಷ್ಣ ಗುಳೇದ್, ಜಿ.ಬಸವರಾಜ್ ಮತ್ತಿತರರು ಉಪಸ್ಥಿತರಿದ್ದರು.

ಜನರನ್ನು ಸೆಳೆಯುತ್ತಿದೆ ಸರ್ಕಸ್
ಸಾಗರ ನಗರದ ಗಣಪತಿಕೆರೆ ಸಮೀಪ ಅಪೊಲೋ ಸರ್ಕಸ್ ಆಯೋಜಿಸಲಾಗಿದೆ. ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರು ಸರ್ಕಸ್’ಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮಾರಿಕಾಂಬ ಜಾತ್ರೆ ಸಾಗರದಲ್ಲಿ ಹಲವು ವಿಶೇಷತೆಗಳಿಂದ ನಡೆದುಕೊಂಡು ಬಂದಿದೆ. ಮೂರು ವರ್ಷಕ್ಕೊಮ್ಮೆ ನಡೆಯುವ ಜಾತ್ರೆಯಲ್ಲಿ ರಾಜ್ಯದ ವಿವಿಧೆಡೆಯಿಂದ ಆಗಮಿಸುತ್ತಾರೆ. ಸಮಾಜಗಳಲ್ಲಿ ಜಾತ್ರೆಗಳು ಸಾಮರಸ್ಯ ಮೂಡಿಸುತ್ತವೆ. ಸರ್ಕಸ್ ಕಸರತ್ತು ಜನರಿಗೆ ಮನೋರಂಜನೆ ನೀಡುತ್ತವೆ ಎಂದರು.

ಸರ್ಕಸ್ ಮುಖ್ಯಸ್ಥ ಜಾರ್ಜ್, ಜಾತ್ರಾ ಸಮಿತಿಯ ಕೆ.ಎನ್.ನಾಗೇಂದ್ರ, ಯು.ಎಲ್.ಮಂಜಪ್ಪ, ರವಿ ನಾಯ್ಡು, ನಗರಸಭಾ ಸದಸ್ಯ ಅರವಿಂದ ರಾಯ್ಕರ್ ಇತರರು ಹಾಜರಿದ್ದರು. ಸರ್ಕಸ್’ನಲ್ಲಿ ಜಗ್ಲಿಂಗ್, ವೃತ್ತದೊಳಗೆ ಬೈಕ್ ರೈಡಿಂಗ್, 40 ಅಡಿ ಎತ್ತರದಲ್ಲಿ ಪರಿಣಿತರು ನಡೆಸುವ ಹಗ್ಗದ ಕಸರತ್ತು, ಜೋಕರ್’ಗಳ ಹಾಸ್ಯ ಅಭಿನಯ, 20ಕ್ಕೂ ಹೆಚ್ಚು ಮಹಿಳೆಯರ ವಿಶೇಷ ಕಸರತ್ತು, ರಿಂಗ್ ಡ್ಯಾನ್ಸ್, ಸೀರೆ ಬ್ಯಾಲೆನ್ಸ್ ಸೇರಿದಂತೆ ಸರ್ಕಸ್ ಆಕರ್ಷಣೆಯ ಪ್ರದರ್ಶನಗಳಿವೆ.

ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | shivamoggalive@gmail.com
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200