ಶಿವಮೊಗ್ಗ ಲೈವೆ.ಕಾಂ | ತುಮರಿ
ಕರೂರು ಹೋಬಳಿಯ ಕುದರೂರು ಬಳಿಯ ಗೊರಗೋಡು ಗ್ರಾಮದಲ್ಲಿ ತಂದೆಯನ್ನೇ ಕೊಲೆ ಮಾಡಿ ಮೃತದೇಹವನ್ನು ಬಾವಿಗೆ ಎಸೆದಿರುವ ಘಟನೆ ನಡೆದಿದೆ. ಸುಬ್ರಾಯ (55) ಮೃತ ವ್ಯಕ್ತಿ. ಇವರ ಮಗ ಜಯಂತ್ ಕೊಲೆ ಮಾಡಿರುವ ಆರೋಪಿ. ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ.
ಮಂಗಳವಾರ ತಂದೆಯ ಜೊತೆ ಜಗಳಕ್ಕಿಳಿದ ಜಯಂತ್, ಕತ್ತಿ ಹಾಗೂ ಕೋಲಿನಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದಾನೆ. ನಂತರ ಮೃತದೇಹವನ್ನು ತನ್ನ ಚಿಕ್ಕಪ್ಪನ ಗದ್ದೆಯಲ್ಲಿರುವ ಬಾವಿಗೆ ಎಸೆದಿರುವುದಾಗಿ ಪೊಲೀಸರ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ ಎಂದು ಆರೋಪಿಸಲಾಗಿದೆ. ಮೃತ ಸುಬ್ರಾಯ 2010ರಲ್ಲಿ ತನ್ನ ತಂದೆ ಮತ್ತು ತಂಗಿಯನ್ನು ಕೊಲೆ ಮಾಡಿ 14 ವರ್ಷ ಜೈಲು ಶಿಕ್ಷೆ ಅನುಭವಿಸಿ 2023ರಲ್ಲಿ ಬಿಡುಗಡೆಯಾಗಿದ್ದರು. ಬಳಿಕ ಪತ್ನಿಯನ್ನೂ ಕೊಲೆ ಮಾಡಲು ಯತ್ನಿಸಿದ್ದ.

ಈತನ ಮೇಲೆ ಮಗ ಜಯಂತ್ ದೂರು ನೀಡಿದ್ದರಿಂದ ಮತ್ತೆ ಜೈಲು ಸೇರಿದ್ದ ಸುಬ್ರಾಯ, ಮೇ ತಿಂಗಳಿನಲ್ಲಿ ಬಿಡುಗಡೆಗೊಂಡು ಬೇರೆ ಊರಿನಲ್ಲಿ ನೆಲೆಸಿದ್ದರು. 5 ದಿನಗಳ ಹಿಂದಷ್ಟೇ ಊರಿಗೆ ಮರಳಿದ್ದರು ಎಂದು ಕಾರ್ಗಲ್ ಠಾಣೆ ಪೊಲೀಸರು ತಿಳಿಸಿದ್ದು, ಆರೋಪಿ ಜಯಂತ್‌ನನ್ನು ಬಂಧಿಸಿದ್ದಾರೆ. ಘಟನಾ ಸ್ಥಳಕ್ಕೆ ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.