ಶಿವಮೊಗ್ಗ ಲೈವ್
ಸಾಗರ: ಸಾಕು ನಾಯಿಯೊಂದಿಗೆ ಜಗಳವಾಡಿತು ಎಂಬ ಕಾರಣಕ್ಕೆ ಬೀದಿ ನಾಯಿಯೊಂದನ್ನು ಗುಂಡಿಟ್ಟು ಹತ್ಯೆ ಮಾಡಲಾಗಿದೆ. ಸಾಗರ ತಾಲೂಕಿನ ನಾಡವಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ.
ಗುಂಡು ಹಾರಿಸಿದ ಲಿಂಗಮೂರ್ತಿ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ. ಅಕ್ರಮ ಬಂದೂಕಿನಿಂದ ಗುಂಡು ಹಾರಿಸಿ ನಾಯಿಯ ಹತ್ಯೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.

ಗುಂಡು ಹಾರಿಸಿದ್ದೇಕೆ?
ನಾಡವಳ್ಳಿಯ ಬೋರಪ್ಪ ಎಂಬವವರು ದನ ಮೇಯಿಸಲು ತೆರಳುತ್ತಿದ್ದಾಗ ಅವರೊಂದಿಗೆ ಬೀದಿ ನಾಯಿಯೊಂದು ಹಿಂಬಾಲಿಸಿ ಹೋಗಿತ್ತು. ಈ ನಾಯಿಯು ಗ್ರಾಮದ ಲಿಂಗಮೂರ್ತಿ ಅವರ ಮನೆ ಬಳಿ ಬಂದಾಗ ಅಲ್ಲಿದ್ದ ಸಾಕು ನಾಯಿಗಳೊಂದಿಗೆ ಜಗಳವಾಡಿದೆ. ಇದರಿಂದ ಕೋಪಗೊಂಡ ಲಿಂಗಮೂರ್ತಿ, ತಾನು ಬಂದೂಕಿನಿಂದ ಗುಂಡು ಹಾರಿಸಿ ಬೀದಿ ನಾಯಿಯನ್ನು ಹತ್ಯೆಗೈದಿದ್ದಾರೆ ಎಂದು ಆರೋಪಿಸಲಾಗಿದೆ. ಕೃತ್ಯಕ್ಕೆ ಬಳಕೆ ಮಾಡಿದ್ದ ಬಂದೂಕನ್ನು ವಶಕ್ಕೆ ಪಡೆಯಲಾಗಿದೆ. ಘಟನೆ ಸಂಬಂಧ ಆರೋಪಿ ವಿರುದ್ಧ ಬಿಎನ್ಎಸ್ ಹಾಗೂ ಶಸ್ತ್ರಾಸ್ತ್ರ ಕಾಯ್ದೆಯಡಿ ಆನಂದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.