ಶಿಕಾರಿಪುರ: ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಮೃತಪಟ್ಟ ಪೊಲೀಸ್ ಕಾನ್ಸ್ಟೇಬಲ್ ಗಿರೀಶ ಕುಮಾರ್ ಅವರ ಅಂತ್ಯಕ್ರಿಯೆ ಸ್ವಗ್ರಾಮದಲ್ಲಿ ನೆರವೇರಿತು. ಜಿಲ್ಲಾ ರಕ್ಷಣಾಧಿಕಾರಿ ಸೇರಿದಂತೆ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು, ಸಿಬ್ಬಂದಿ ಅಂತಿಮ ನಮನ ಸಲ್ಲಿಸಿದರು. (ಈ ಸುದ್ದಿಯನ್ನು ಇನ್ನು 60 ಸೆಕೆಂಡ್ಗಳಲ್ಲಿ ಓದಿ ಮುಗಿಸಬಹುದು)
ಶಿಕಾರಿಪುರ ಪಟ್ಟಣ ಪೊಲೀಸ್ ಠಾಣೆಯ ಕಾನ್ಸ್ಟೇಬಲ್ ಗಿರೀಶ್ ಕುಮಾರ್ (33) ಅವರು ಅಪಘಾತದಲ್ಲಿ ತೀವ್ರ ಗಾಯಗೊಂಡು ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ.

ಬೈಕ್ ಸ್ಕಿಡ್ ಆಗಿ ಅಪಘಾತ
ಎರಡು ವಾರಗಳ ಹಿಂದೆ ಪ್ರಕರಣ ಒಂದರ ತನಿಖೆಗಾಗಿ ತೆರಳುತ್ತಿದ್ದಾಗ ಚಿಕ್ಕಾಪುರ ಕ್ರಾಸ್ ಬಳಿ ಚಲಿಸುತ್ತಿದ್ದ ವೇಳೆ ಬೈಕ್ ಅಪಘಾತಕ್ಕೀಡಾಗಿ ಗಿರೀಶ್ ಕುಮಾರ್ ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ, ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ್ ಆಸ್ಪತ್ರೆಗೆ ಸೇರಿಸಲಾಗಿತ್ತು. ಎರಡು ವಾರ ಸಾವು ಬದುಕಿನ ನಡುವೆ ಹೋರಾಡಿದ ಅವರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.
ಅಂತಿಮ ನಮನ, ಅಂತ್ಯ ಸಂಸ್ಕಾರ
ಗಿರೀಶ್ ಕುಮಾರ್ ಅವರ ಸ್ವಗ್ರಾಮ ಶಿಕಾರಿಪುರ ತಾಲ್ಲೂಕಿನ ಸಾಲೂರಿನಲ್ಲಿ ಅವರ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಜಿಲ್ಲಾ ರಕ್ಷಣಾಧಿಕಾರಿ ನಿಖಿಲ್.ಬಿ ಅವರು ಅಂತಿಮ ದರ್ಶನ ಪಡೆದರು. ಪಾರ್ಥಿವ ಶರೀರಕ್ಕೆ ಪೊಲೀಸ್ ಗೌರವ ವಂದನೆ ಸಲ್ಲಿಸಲಾಯಿತು.
ಕಾನ್ಸ್ಟೇಬಲ್ ಗಿರೀಶ್ ಕುಮಾರ್ ಅವರ ಅಗಲಿಕೆಯಿಂದ ಇಲಾಖೆ ಹಾಗೂ ಸಮಾಜ ಓರ್ವ ಪ್ರಾಮಾಣಿಕ, ನಿಷ್ಠಾವಂತ ಸಿಬ್ಬಂದಿಯನ್ನು ಕಳೆದುಕೊಂಡಂತಾಗಿದೆ. ಮೃತರ ಆತ್ಮಕ್ಕೆ ಚಿರಶಾಂತಿ ದೊರೆಯಲಿ. ಅವರ ಕುಟುಂಬದವರಿಗೆ ಹಾಗೂ ಸಹೋದ್ಯೋಗಿಗಳಿಗೆ ಈ ನೋವನ್ನು ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ.
– ಬಿ.ವೈ.ರಾಘವೇಂದ್ರ, ಶಿವಮೊಗ್ಗ ಸಂಸದ