ಶಿವಮೊಗ್ಗ ಲೈವ್.ಕಾಂ | ಶಿಕಾರಿಪುರ
ಶಿಕಾರಿಪುರ ತಾಲ್ಲೂಕಿನ ಕಡೇನಂದಿಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 80ನೇ ಸ್ವಾತಂತ್ರ್ಯೋತ್ಸವವನ್ನು ವಿನೂತನವಾಗಿ ಆಚರಿಸಲಾಯಿತು. ಶಾಲೆಯ 12 ಪ್ರತಿಭಾವಂತ ವಿದ್ಯಾರ್ಥಿಗಳು ಹೆಲಿಕಾಪ್ಟರ್‌ನಲ್ಲಿ ಹಾರುವ ಮೂಲಕ ವಿನೂತನ ಅನುಭವ ಪಡೆದರು. ಸುದ್ದಿಯ ಮುಂದಿನ 3 ಪ್ಯಾರಾಗಳು ಕೆಳಗಿವೆ.
ವಿಶ್ವಾಗ್ರಹ ಫೌಂಡೇಶನ್ ವತಿಯಿಂದ ಶಾಲೆಯ 12 ವಿದ್ಯಾರ್ಥಿಗಳಿಗೆ ಹೆಲಿಕಾಪ್ಟರ್ ವಿಹಾರ ಏರ್ಪಡಿಸಲಾಗಿತ್ತು. ಈ ವಿನೂತನ ಅವಕಾಶವು ಮಕ್ಕಳಲ್ಲಿ ಉತ್ಸಾಹ ಮೂಡಿಸಿತು. ಶಾಲೆಯ ಜಾನವಿ ಕೆ.ಎಂ, ಸುಜನ್ ಟಿ.ಕೆ, ಹೇಮಂತ್ ಚೌಗಲೆ, ಜೀವಿತ್ ಎನ್.ಬಿ, ಚಂದನ ಸಿ.ಕೆ, ನಂದಿನಿ ಎಂ. ಧಾರವಾಡೆ, ವಿದ್ಯಾಶ್ರೀ ಪಿ.ಕೆ, ಸ್ಪರ್ಧಿತ್ ಎನ್.ಬಿ, ರಕ್ಷಿತಾ ಚೆನ್ನೈಳ, ವಿಜಂತ್ ಎಸ್.ಜಿ, ಅನುಶ್ರಾವ್ಯ ಎಂ. ಧಾರವಾಡೆ ಹಾಗೂ ಜೀವನ್ ಜಿ.ಆರ್ ಹೆಲಿಕಾಪ್ಟರ್‌ನಲ್ಲಿ ಹಾರಾಡಿ ಖುಷಿ ಪಟ್ಟರು.

ಹೆಲಿಕಾಪ್ಟರ್ ಕಂಡು ಮಕ್ಕಳು ಪುಳಕ
ಕಡೇನಂದಿಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ದತ್ತು ಪಡೆದಿರುವ ವಿಶ್ವಾಗ್ರಹ ಫೌಂಡೇಶನ್ ವತಿಯಿಂದ ಮಕ್ಕಳಿಗೆ ಹೆಲಿಕಾಪ್ಟರ್ ವಿಹಾರ ಆಯೋಜಿಸಲಾಗಿತ್ತು. ಗ್ರಾಮದಲ್ಲಿ ಗ್ರಾಮಸ್ಥರೆ ನಿರ್ಮಿಸಿದ್ದ ಹೆಲಿಪ್ಯಾಡ್‌ನಲ್ಲಿ ಇಂದು ಬೆಳಿಗ್ಗೆ ಹೆಲಿಕಾಪ್ಟರ್ ಇಳಿಯುತ್ತಿದ್ದಂತೆ ಗ್ರಾಮಸ್ಥರು ಮತ್ತು ವಿದ್ಯಾರ್ಥಿಗಳು ಸಂಭ್ರಮಿಸಿದರು. ಶಾಲೆಯ ಎಲ್ಲ ವಿದ್ಯಾರ್ಥಿಗಳು ಹತ್ತಿರದಿಂದ ಹೆಲಿಕಾಪ್ಟರ್ ನೋಡಿ ಪುಳಕಿತರಾದರು. ಇದೇ ವೇಳೆ ಮೊದಲ ಬ್ಯಾಚ್‌ನಲ್ಲಿ 6 ವಿದ್ಯಾರ್ಥಿಗಳು, ಮತ್ತೊಂದು ಬ್ಯಾಚ್‌ನಲ್ಲಿ ಉಳಿದ 6 ವಿದ್ಯಾರ್ಥಿಗಳು ಹೆಲಿಕಾಪ್ಟರ್ ವಿಹಾರ ಮಾಡಿದರು.
ಅದ್ಧೂರಿ ಸ್ವಾತಂತ್ರ್ಯ ದಿನಾಚರಣೆ
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂದು ಅದ್ಧೂರಿಯಾಗಿ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ ನಡೆಯಿತು. ವಿಶ್ವಾಗ್ರಹ ಗ್ರೂಪ್ ಆಫ್ ಕಂಪನೀಸ್ ಸಂಸ್ಥಾಪಕ ಡಾ. ಶಿವಕುಮಾರ್.ಎ, ವಿಶ್ವಗ್ರಹ ಎಜ್ಯು ಸಲ್ಯೂಷನ್ಸ್ ನಿರ್ದೇಶಕ ಲಿಂಗರಾಜ್ ಚೌಹಾಣ್, ಮನಸಾಕ್ಷಿ ಫೌಂಡೇಶನ್ ಸಂಸ್ಥಾಪಕ ಮಲ್ಲಿಕಾರ್ಜುನ ಕರಜಗಿ ಮಠ, ವಿಶ್ವಗ್ರಹ ಫೌಂಡೇಶನ್ ನಿರ್ದೇಶಕಿ ಅರ್ಚನಾ ಶಿವಕುಮಾರ್, ಎಸ್‌ಡಿಎಂಸಿ ಅಧ್ಯಕ್ಷ ಕುಮಾರ್ ಮತ್ತಿಮನೆ, ದತ್ತು ಸಮಿತಿ ಅಧ್ಯಕ್ಷ ಕುಮಾರಸ್ವಾಮಿ ಆರಾಧ್ಯ ಹಾಗೂ ಮುಖ್ಯೋಪಾಧ್ಯಾಯರು, ಶಿಕ್ಷಕರು, ಗ್ರಾಮಸ್ಥರು ಉಪಸ್ಥಿತರಿದ್ದರು.