ಶಿವಮೊಗ್ಗದ ಬಿದಿರೆಯಲ್ಲಿ ಸೈಟ್ ಮಾರಾಟಕ್ಕಿದೆ. ಸಾಯಿ ಬಾಬಾ ದೇಗುಲ, ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲಿ 30*50 ಅಳತೆಯ ಸೈಟು ಮಾರಾಟಕ್ಕಿದೆ. ಸಂಪರ್ಕಿಸಿ: 8073449559ಸೈಟ್ ಮಾರಾಟಕ್ಕಿದೆ
SHIVAMOGGA LIVE NEWS | INSTAGRAM | 9 ಏಪ್ರಿಲ್ 2022
INSTAGRAM ಖಾತೆ ಮೂಲಕ ಬ್ಲಾಕ್ ಮೇಲ್ ಮಾಡಿದ್ದರ ಪರಿಣಾಮ ಮನನೊಂದು ಯುವತಿಯೊಬ್ಬಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಬೆತ್ತಲೆ ಫೋಟೊ ಕಳುಹಿಸುವಂತೆ ಪದೇ ಪದೆ ಕರೆ ಮಾಡಿ ಬೆದರಿಕೆಯೊಡ್ಡುತ್ತಿದ್ದರಿಂದ ಯುವತಿ ಮನನೊಂದಿದ್ದಳು ಎಂದು ಪೋಷಕರು ದೂರಿನಲ್ಲಿ ತಿಳಿಸಿದ್ದಾರೆ.
ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪ ಪೊಲೀಸ್ ಠಾಣೆ ವ್ಯಾಪ್ತಿಯ ಗ್ರಾಮವೊಂದರಲ್ಲಿ ಘಟನೆ ಸಂಭವಿಸಿದೆ. 23 ವರ್ಷದ ಯುವತಿಗೆ INSTAGRAM ಖಾತೆಯ ಮೂಲಕ ಕರೆ ಮಾಡಿ ಬ್ಲಾಕ್ ಮೇಲ್ ಮಾಡಲಾಗುತ್ತಿತ್ತು.
ಏನಿದು ಪ್ರಕರಣ?
ಪದವಿ ಓದುತ್ತಿದ್ದ ಯುವತಿ INSTAGRAM ಖಾತೆ ಹೊಂದಿದ್ದಳು. ಆಕೆಯ INSTAGRAMಗೆ dlatico _ph ಎಂಬ ಖಾತೆಯ ಮೂಲಕ ವ್ಯಕ್ತಿಯೊಬ್ಬ ಪದೇ ಪದೆ ಕರೆ ಮಾಡುತ್ತಿದ್ದ. ‘ನಿನ್ನ ಬೆತ್ತಲೆ ಫೋಟೊ ಕಳುಹಿಸು’ ಎಂದು ಒತ್ತಾಯಿಸುತ್ತಿದ್ದ. ಒಂದು ವೇಳೆ ಫೋಟೊ ಕಳುಹಿಸದಿದ್ದರೆ ತನ್ನ ಬಳಿ ಇರುವ ಫೋಟೊವನ್ನು ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಬೇಕಾಗುತ್ತದೆ’ ಎಂದು ಬೆದರಿಕೆ ಒಡ್ಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ವಿಡಿಯೋ ವೈರಲ್ ಮಾಡುವ ಬೆದರಿಕೆ
ಅಪರಿಚಿತನ ಬೆದರಿಕೆಗೆ ಯುವತಿ ಹೆದರಿದ್ದಳು. dlatico _ph ಖಾತೆಗೆ ವಿಡಿಯೋ ಕರೆ ಮಾಡಿ ಸಂಪೂರ್ಣ ದೇಹವನ್ನು ತೋರಿಸಿದ್ದಾಳೆ. ಆ ಬಳಿಕ ಬೆದರಿಕೆ ಮತ್ತಷ್ಟು ಹೆಚ್ಚಾಯಿತು. ಬೆತ್ತಲೆ ಫೋಟೋ ಕಳುಹಿಸಬೇಕು ಎಂದು ಬೆದರಿಕೆ ಒಡ್ಡಿದ್ದಾನೆ. ‘ದೇಹ ತೋರಿಸಿದ ವಿಡಿಯೋ ತನ್ನ ಬಳಿ ಇದ್ದು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡುವುದಾಗಿ’ ಹೆದರಿಸಲು ಆರಂಭಿಸಿದ್ದಾನೆ.
ಕುಟುಂಬದ ಮುಂದೆ ನೋವು ಹೇಳಿದಳು
ಅಪರಿಚಿತನ ಬೆದರಿಕೆ ಹೆಚ್ಚಾದ ಹಿನ್ನೆಲೆ ಯುವತಿ ಪೋಷಕರಿಗೆ ವಿಚಾರ ತಿಳಿಸಿದ್ದಾಳೆ. ಧೈರ್ಯ ಹೇಳಿದ ಪೋಷಕರು ಪೊಲೀಸರಿಗೆ ದೂರು ನೀಡಲು ನಿರ್ಧರಿಸಿದ್ದಾರೆ. ಶಿರಾಳಕೊಪ್ಪ ಠಾಣೆಗೆ ಹೋಗಿ ದೂರು ನೀಡಲು ಸಿದ್ದವಾಗಿ ಬರುವಂತೆ ತಂದೆ ಮಗಳಿಗೆ ತಿಳಿಸಿದ್ದಾರೆ. ಕೊಠಡಿಯೊಳಗೆ ಹೋದ ಯುವತಿ ಬಾಗಿಲು ಹಾಕಿಕೊಂಡಿದ್ದಾಳೆ. ಬಹು ಹೊತ್ತು ಹೊರಗೆ ಬಾರದ ಹಿನ್ನೆಲೆ ಪೋಷಕರು ಬಾಗಿಲು ತಟ್ಟಿದ್ದಾರೆ.
ನೇಣು ಬಿಗಿದುಕೊಂಡ ಯುವತಿ
ಕೊಠಡಿಯೊಳಗೆ ಹೋಗಿ ನೋಡಿದಾಗ ಯುವತಿಯು ಮರದ ಗಾಳಕ್ಕೆ ಸೀರೆಯಿಂದ ನೇಣು ಬಿಗಿದುಕೊಂಡಿದ್ದಳು. ಕೂಡಲೆ ಕುಣಿಕೆಯಿಂದ ಬಿಡಿಸಿ, ಆಕೆಯನ್ನು ಶಿರಾಳಕೊಪ್ಪದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಪರಿಶೀಲನೆ ನಡೆಸಿದ ವೈದ್ಯರು ಮಗಳು ಮೃತಪಟ್ಟಿದ್ದಾಳೆ ಎಂದು ತಿಳಿಸಿದ್ದಾರೆ.
ಅಪರಿಚಿತನ ವಿರುದ್ಧ ದೂರು
INSTAGRAMನಲ್ಲಿ ಬೆದರಿಕೆ ಒಡ್ಡಿದ ವ್ಯಕ್ತಿಯೇ ಮಗಳ ಸಾವಿಗೆ ಕಾರಣ ಎಂದು ಪೋಷಕರು ದೂರು ನೀಡಿದ್ದಾರೆ. dlatico _ph ಖಾತೆಯನ್ನು ನಿರ್ವಹಿಸುತ್ತಿದ್ದಾತನನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪೋಷಕರು ದೂರಿನಲ್ಲಿ ತಿಳಿಸಿದ್ದಾರೆ.
ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ | ಇವತ್ತಿನ ಎಲ್ಲಾ ಸುದ್ದಿಗಳನ್ನು ಓದಲು ಕ್ಲಿಕ್ ಮಾಡಿ
ಈ ಮೇಲ್ – shivamoggalive@gmail.com
WhatsApp Number – 7411700200


