ಶಿಕಾರಿಪುರ: ದ್ವೇಷ ಭಾಷಣ ಪ್ರತಿಬಂಧಕ ವಿಧೇಯಕ (Hate Speech Bill) ಜಾರಿಗೊಳಿಸುವ ಮೂಲಕ ಸಂವಿಧಾನ ಜನರಿಗೆ ನೀಡಿರುವ ಅಭಿವ್ಯಕ್ತಿ ಸ್ವಾತಂತ್ರ್ಯ ಹತ್ತಿಕ್ಕುವ ಕೆಲಸ ಮಾಡಲು ಹೊರಟಿರುವ ರಾಜ್ಯ ಸರ್ಕಾರದ ವಿರುದ್ಧ ಜನತೆ ಎಚ್ಚೆತ್ತುಕೊಳ್ಳಬೇಕಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.
ಶಿಕಾರಿಪುರ ಪಟ್ಟಣದಲ್ಲಿ ಬಿಜೆಪಿ ಆಯೋಜಿಸಿದ್ದ ಪ್ರತಿಭಟನೆ ವೇಳೆ ವಿಜಯೇಂದ್ರ ಮಾತನಾಡಿದರು. ಹೊಸ ಕಾಯ್ದೆಯಲ್ಲಿ ದ್ವೇಷ ಭಾಷಣಕ್ಕೆ ನೀಡಿರುವ ವ್ಯಾಖ್ಯಾನವೇ ಅಸ್ಪಷ್ಟವಾಗಿದೆ. ಸಂವಿಧಾನದ ಪರಿಚ್ಛೇದದಲ್ಲಿ ಜನತೆಗೆ ನೀಡಿರುವ ವಾಕ್, ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ವಿಧೇಯಕ ವಿರುದ್ಧವಾಗಿದೆ ಎಂದು ಆರೋಪಿಸಿದರು.
ಸರ್ಕಾರದ ವಿರುದ್ಧ ಮಾತನಾಡುವವರ ಬಾಯಿ ಮುಚ್ಚಿಸುವ ಉದ್ದೇಶಕ್ಕೆ ನೂತನ ಕಾಯ್ದೆ ಜಾರಿಗೊಳಿಸುತ್ತಿದೆ. ಅದಕ್ಕೆ ಬಿಜೆಪಿ ವಿರೋಧ ವ್ಯಕ್ತಪಡಿಸುತ್ತದೆ. ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗುವವರ ರಕ್ಷಣೆ ಮಾಡುವ ಕಾಂಗ್ರೆಸ್ ಸರ್ಕಾರ, ಭಾರತ್ ಮಾತಾಕಿ ಜೈ ಎನ್ನುವವರ ಧ್ವನಿ ಹತ್ತಿಕ್ಕುವ ಕೆಲಸ ಕಾಯ್ದೆಯ ಮೂಲಕ ಮಾಡಲು ಹೊರಟಿದೆ. ಇದರ ವಿರುದ್ಧ ಜನ ಎಚ್ಚೆತ್ತುಕೊಳ್ಳಬೇಕು ಎಂದರು.
ಸತ್ಯ ಹೇಳುವುದೂ ದ್ವೇಷವಾಗಲಿದೆ

ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ಸರ್ಕಾರದ ನೀತಿಗಳ ವಿರುದ್ಧ ಟೀಕೆ, ಸಾಮಾಜಿಕ ಚರ್ಚೆ, ವ್ಯಂಗ್ಯ ಮಾಡುವುದು ಅಥವಾ ಸತ್ಯ ಹೇಳುವುದನ್ನೂ ದ್ವೇಷ ಎಂದು ಪರಿಗಣಿಸುವ ಅಪಾಯ ಎದುರಾಗಿದೆ. ಪ್ರತಿಭಟನಾ ಸಭೆ, ಸಾಮಾಜಿಕ ಚಳವಳಿ ತಡೆಯುವ ಹುನ್ನಾರ ನಡೆದಿದೆ. ಸರ್ಕಾರದ ವಿರುದ್ಧ ಜನತೆ ಧ್ವನಿಯೆತ್ತದಂತೆ ಮಾಡುವ ಹುನ್ನಾರ ಹೊಸ ಕಾಯ್ದೆಯಲ್ಲಿ ಇದೆ. ಸರ್ಕಾರಕ್ಕೆ ನೈತಿಕತೆ ಇದ್ದರೆ ಕೂಡಲೇ ಕಾಯ್ದೆ ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು.
ಶಿಕಾರಿಪುರ ಪಟ್ಟಣದಲ್ಲಿ ಮೆರವಣಿಗೆ
ತಹಶೀಲ್ದಾರ್ ಕಚೇರಿ ಮುಂಭಾಗ ಪ್ರತಿಭಟನೆಗು ಮುನ್ನ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಮೆರವಣಿಗೆ ನಡೆಸಲಾಯಿತು. ಬಳಿಕ ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಇದನ್ನೂ ಓದಿ » ಶಿವಮೊಗ್ಗ ಬಸ್ ನಿಲ್ದಾಣದಲ್ಲು ಆಟೋ ಪ್ರೀ ಪೇಯ್ಡ್ ಕೌಂಟರ್, ಯಾವಾಗ ಶುರು? ಡಿಸಿ ಏನೆಲ್ಲ ಹೇಳಿದರು?
ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಹನುಮಂತಪ್ಪ, ಮುಖಂಡರಾದ ಕೆ.ಎಸ್.ಗುರುಮೂರ್ತಿ, ಮಹೇಶ್ ಹುಲ್ಮಾರ್, ನಿವೇದಿತಾ ರಾಜು, ಜಾನಕಪ್ಪ, ಗಿರೀಶ್ ಧಾರವಾಡ, ಎಸ್.ಎಸ್.ರಾಘವೇಂದ್ರ, ಸುಧೀರ್, ಕಪ್ಪನಹಳ್ಳಿ ಬಸವರಾಜ್, ವೀರನಗೌಡ, ಗಿರೀಶ್, ಬೆಣ್ಣೆ ಪ್ರವೀಣ್ ಇತರರಿದ್ದರು.

