ಶಿವಮೊಗ್ಗ ಲೈವ್.ಕಾಂ | ANJANAPURA NEWS | 4 ಜುಲೈ 2021
ಈ ಬಾರಿ ನಿಗದಿಗಿಂತಲೂ ಮೊದಲೆ ಅಂಜನಾಪುರ ಜಲಾಶಯ ಸಂಪೂರ್ಣ ಭರ್ತಿಯಾಗಿದೆ. ಇದು ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಪ್ರವಾಸಿಗರನ್ನು ಬರ ಸೆಳೆಯುತ್ತಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಅಂಜನಾಪುರ ಜಲಾಶಯ ಭರ್ತಿಯಾಗಿದ್ದು ಕೋಡಿ ಬಿದ್ದಿದೆ. ಗೇಟುಗಳ ಮೂಲಕ ನೀರು ಹೊರಗೆ ಹೋಗುತ್ತಿದೆ. ಶುಕ್ರವಾರ ಈ ಜಲಾಶಯ ಕೋಡಿ ಬಿದ್ದಿದೆ.
ತಾಲೂಕಲ್ಲಿ ಮಳೆ ಕ್ಷೀಣ, ಒಳಹರಿವು ನಿರಂತರ
ಕಳೆದೊಂದು ವಾರದಿಂದ ಶಿಕಾರಿಪುರದಲ್ಲಿ ಮಳೆ ಕಡಿಮೆಯಾಗಿದೆ. ಆದರೂ ಅಂಜನಾಪುರ ಜಲಾಶಯ ಭರ್ತಿಯಾಗಿದೆ. ಶಿವಮೊಗ್ಗ, ಹುಂಚ, ರಿಪ್ಪನ್‍ಪೇಟೆ, ತೀರ್ಥಹಳ್ಳಿ ಭಾಗದಲ್ಲಿ ಮಳೆಯಾಗುತ್ತಿರುವುದರಿಂದ ಅಂಜನಾಪುರಕ್ಕೆ ನೀರು ಹರಿದು ಬರುತ್ತಿದೆ.
ವಾಡಿಕೆಗಿಂತಲೂ ಮೊದಲೆ ಭರ್ತಿ
ಅಂಜನಾಪುರ ಜಲಾಶಯ ಈ ಬಾರಿ ವಾಡಿಕೆಗಿಂತಲೂ ಮೊದಲೆ ಭರ್ತಿಯಾಗಿದೆ. ಜುಲೈ ಕೊನೆ ವಾರ ಅಥವಾ ಆಗಸ್ಟ್ ಮೊದಲ ವಾರದಲ್ಲಿ ಅಂಜನಾಪುರ ಜಲಾಶಯ ಭರ್ತಿಯಾಗುತ್ತಿತ್ತು. ಕಳೆದ ವರ್ಷ ಆಗಸ್ಟ್‌ನಲ್ಲಿ ತುಂಬಿತ್ತು. ಈ ಬಾರಿ ಜುಲೈ ತಿಂಗಳ ಆರಂಭದಲ್ಲೇ ತುಂಬಿದೆ. ಇದು ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ.
ಕೃಷಿ, ಕುಡಿಯುವ ನೀರಿನ ಮೂಲ
ಅಂಜನಾಪುರ ಜಲಾಶಯವು 1.82 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ. ಶಿಕಾರಿಪುರ ಮತ್ತು ಶಿರಾಳಕೊಪ್ಪ ಪಟ್ಟಣಕ್ಕೆ ಇಲ್ಲಿಂದಲೆ ಕುಡಿಯುವ ನೀರು ಪೂರೈಕೆಯಾಗುತ್ತದೆ. ಅಲ್ಲದೆ 6,732 ಹೆಕ್ಟೇರ್ ಪ್ರದೇಶಕ್ಕೆ ನೀರುಣಿಸುತ್ತಿದೆ. ಹಾಗಾಗಿ ಜಲಾಶಯ ಭರ್ತಿಯಾಗುತ್ತಿದ್ದಂತೆ ಶಿಕಾರಿಪುರ ಜನತೆ ಹರ್ಷ ವ್ಯಕ್ತಪಡಿಸುತ್ತಾರೆ.
ಪ್ರವಾಸಿಗರ ಸಂಖ್ಯೆ ಹೆಚ್ಚಳ
ಮೈಸೂರು ಮಹಾರಾಜರು 1936ರಲ್ಲಿ ಅಂಜನಾಪುರ ಜಲಾಶಯವನ್ನು ನಿರ್ಮಿಸಿದರು. 1600 ಮೀಟರ್ ಮಣ್ಣಿನ ಏರಿ ಹೊಂದಿದ್ದು, 21 ಅಡಿ ಎತ್ತರವಿದೆ. ಇನ್ನು, ಅಂಜನಾಪುರ ಜಲಾಶಯದ ಒಳಹರಿವು ಹೆಚ್ಚಳವಾದ ಸುದ್ದಿ ತಿಳಿಯುತ್ತಿದ್ದಂತೆ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ. ಪಕ್ಕದಲ್ಲಿ ರಾಕ್ ಗಾರ್ಡನ್ ಇರುವುದರಿಂದ ಪ್ರವಾಸಿಗರು ಸಮಯ ಕಳೆಯಲು ಇಲ್ಲಿ ಅವಕಾಶವಾಗಲಿದೆ. ಕಳೆದ ಭಾನುವಾರ ಸುಮಾರು 600 ಪ್ರವಾಸಿಗರು ಭೇಟಿ ನೀಡಿದ್ದರು. ಈ ಭಾರಿ ಪ್ರವಾಸಿಗರ ಸಂಖ್ಯೆ ಮತ್ತಷ್ಟು ಹೆಚ್ಚುವ ಸಂಭವವಿದೆ.
(ಶಿವಮೊಗ್ಗ ಲೈವ್.ಕಾಂ ನಮ್ಮೂರ ನ್ಯೂಸ್ ವಿಭಾಗ – ನಿಮ್ಮೂರ ನ್ಯೂಸ್‍ಗೆ ನೀವೇ ವರದಿಗಾರರು. ನಿಮ್ಮೂರ ಪ್ರಮುಖ ಘಟನೆಗಳನ್ನು ನೀವೇ ವರದಿ ಮಾಡಬಹುದು. ಫೋಟೊ, ವಿಡಿಯೋ ಸಹಿತ ವರದಿಯನ್ನು ವಾಟ್ಸಪ್ ಅಥವಾ ಈ ಮೇಲ್ ಮಾಡಬಹುದು)
ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200