ಶಿಕಾರಿಪುರ: ಪಟ್ಟಣದಲ್ಲಿ ಬೀದಿ ನಾಯಿಗಳ ಹಾವಳಿ ನಿಯಂತ್ರಣಕ್ಕೆ ಶಿಕಾರಿಪುರ ಪುರಸಭೆಯು ವಿವಿಧ ಕ್ರಮಗಳನ್ನು ಕೈಗೊಂಡಿದೆ. ಇನ್ನೊಂದೆಡೆ ಸಾರ್ವಜನಿಕರ ಸುರಕ್ಷತೆಗಾಗಿ ಪ್ರಮುಖ ಮಾರ್ಗಸೂಚಿಗಳನ್ನು ಪ್ರಕಟಿಸಿದೆ.
ಸುಪ್ರೀಂ ಕೋರ್ಟ್ ಹಾಗೂ ಸರ್ಕಾರದ ಆದೇಶದನ್ವಯ ಬೀದಿ ನಾಯಿಗಳನ್ನು ಹಿಡಿದು ಸಂತಾನ ಹರಣ ಶಸ್ತ್ರಚಿಕಿತ್ಸೆ (ಎಬಿಸಿ) ನಡೆಸಲಾಗುತ್ತಿದೆ. ಆರೈಕೆಯ ನಂತರ ಅವುಗಳನ್ನು ಹಿಡಿದ ಸ್ಥಳಕ್ಕೇ ಮರಳಿ ಬಿಡಲಾಗುತ್ತಿದೆ. ಪುರಸಭೆಯು 2024ರಲ್ಲಿ 711 ಹಾಗೂ 2025ರಲ್ಲಿ 110 ಬೀದಿ ನಾಯಿಗಳಿಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. 2026ರಲ್ಲಿ ಎಬಿಸಿ ಪ್ರಕ್ರಿಯೆಯ ಟೆಂಡರ್ ಪೂರ್ಣಗೊಂಡಿದೆ. ಅನುಷ್ಠಾನದ ಹಂತದಲ್ಲಿದೆ ಎಂದು ಪುರಸಭೆ ತಿಳಿಸಿದೆ.

ಇಬ್ಬರು ಮಕ್ಕಳ ಮೇಲೆ ನಾಯಿಗಳ ದಾಳಿ
ಮೇ 21ರಂದು ಪಟ್ಟಣದ ಚನ್ನಕೇಶವನಗರದ 6ನೇ ಕ್ರಾಸ್ ಹಾಗೂ ವಿನಾಯಕನಗರದ 8ನೇ ಕ್ರಾಸ್‌ನಲ್ಲಿ ಇಬ್ಬರು ಮಕ್ಕಳಿಗೆ ಬೀದಿ ನಾಯಿ ಕಚ್ಚಿದ ಪ್ರಕರಣ ನಡೆದಿದೆ. ಈ ಹಿನ್ನೆಲೆ ತಕ್ಷಣ ಸ್ಪಂದಿಸಿರುವ ಪುರಸಭೆಯು, ನೊಂದ ಮಕ್ಕಳ ಕುಟುಂಬಕ್ಕೆ ಸಾಂತ್ವನ ಹೇಳಿ ಸರ್ಕಾರದ ನಿಯಮಾವಳಿಯಂತೆ ತಲಾ ₹5,000 ಪರಿಹಾರ ಧನ ವಿತರಿಸಲು ಕ್ರಮ ಕೈಗೊಂಡಿದೆ ಎಂದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಸಾರ್ವಜನಿಕರಿಗೆ ಮಹತ್ವದ ಸೂಚನೆಗಳು
ಸೂಚನೆ 1: ಬೀದಿ ನಾಯಿಗಳ ಹಾವಳಿ ತಡೆಗಟ್ಟಲು ಸಾರ್ವಜನಿಕರು ರಾತ್ರಿ ವೇಳೆ ಎಲ್ಲೆಂದರಲ್ಲಿ ಆಹಾರ ಪದಾರ್ಥಗಳನ್ನು ಹಾಕಬಾರದು. ಪುರಸಭೆ ನಿಗದಿಪಡಿಸಿದ ಸ್ಥಳಗಳಲ್ಲಿ ಮಾತ್ರ ಆಹಾರ ನೀಡಬೇಕು.

ಸೂಚನೆ 2: ಸಣ್ಣ ಮಕ್ಕಳು ಮತ್ತು ವಯೋವೃದ್ಧರನ್ನು ಒಂಟಿಯಾಗಿ ಬಿಡದೆ ಸುರಕ್ಷಿತವಾಗಿ ನೋಡಿಕೊಳ್ಳಬೇಕು.
ಸೂಚನೆ 3: ಸಾಕು ನಾಯಿಗಳ ಮಾಲೀಕರು ಪುರಸಭೆಯಿಂದ ಕಡ್ಡಾಯವಾಗಿ ಲೈಸೆನ್ಸ್ ಪಡೆಯಬೇಕು ಎಂದು ಪುರಸಭೆಯ ಮುಖ್ಯಾಧಿಕಾರಿಗಳು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.
