ಶಿವಮೊಗ್ಗದ ಬಿದಿರೆಯಲ್ಲಿ ಸೈಟ್ ಮಾರಾಟಕ್ಕಿದೆ. ಸಾಯಿ ಬಾಬಾ ದೇಗುಲ, ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲಿ 30*50 ಅಳತೆಯ ಸೈಟು ಮಾರಾಟಕ್ಕಿದೆ. ಸಂಪರ್ಕಿಸಿ: 8073449559ಸೈಟ್ ಮಾರಾಟಕ್ಕಿದೆ
ಶಿವಮೊಗ್ಗದಲ್ಲಿ ಬಿ.ಇಡಿ ಕೋರ್ಸ್‌ಗೆ ಪ್ರವೇಶಾತಿ ಆರಂಭ
ಶಿವಮೊಗ್ಗ: ವಿಮಾನ ನಿಲ್ದಾಣಕ್ಕೆ ಭೂಮಿ ಕಳೆದುಕೊಂಡವರಿಗೆ ನಿವೇಶನ ಹಂಚಿಕೆ ಮಾಡದ ಸರ್ಕಾರದ ಕ್ರಮ ಖಂಡಿಸಿ ಸೋಗಾನೆ ಭೂಮಿ ಹಕ್ಕು ರೈತ ಹೋರಾಟ ಸಮಿತಿ ನೇತೃತ್ವದಲ್ಲಿ ವಿಮಾನ ನಿಲ್ದಾಣದ (Airport) ಗೇಟ್ ಮುಂಭಾಗ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಆರಂಭಿಸಲಾಗಿದೆ.
ವಿಮಾನ ನಿಲ್ದಾಣಕ್ಕೆ ಭೂಮಿ ಕಳೆದುಕೊಂಡ ರೈತರು, ಅವರ ಕುಟುಂಬದವರು ಧರಣಿಯಲ್ಲಿ ಭಾಗವಹಿಸಿದ್ದಾರೆ. ವಿಮಾನ ನಿಲ್ದಾಣದ ಗೇಟ್ ಮುಂಭಾಗ ಮಹಾತ್ಮ ಗಂಧೀಜಿ ಫೋಟೊ ಇರಿಸಿಕೊಂಡು ರೈತರು ಧರಣಿ ಆರಂಭಿಸಿದ್ದಾರೆ.
ಹೋರಾಟಕ್ಕೆ ಕಾರಣವೇನು? ಇಲ್ಲಿದೆ ಪ್ರಮುಖಾಂಶ
ಇನ್ನು, ವಿಮಾನ ನಿಲ್ದಾಣದ ಮುಂಭಾಗ ರೈತರು ಧರಣಿ ನಡೆಸುತ್ತಿರುವ ಕುರಿತು ಹೋರಾಟ ಸಮಿತಿ ಅಧ್ಯಕ್ಷ ಎಂ.ಬಿ.ಕೃಷ್ಣಪ್ಪ, ಮಾಧ್ಯಮಗಳಿಗೆ ಮಾಹಿತಿ ನೀಡಿದರು. ಅದರ ಪಾಯಿಂಟ್ಸ್ ಇಲ್ಲಿದೆ.
ಪಾಯಿಂಟ್ 1: ಪರಿಹಾರದ ತೀರ್ಮಾನ
ವಿಮಾನ ನಿಲ್ದಾಣಕ್ಕೆ ಸುಮಾರು 450 ರೈತ ಕುಟುಂಬಗಳು 800 ಎಕರೆ ಭೂಮಿ ತ್ಯಾಗ ಮಾಡಿವೆ. ಭೂಮಿ ನೀಡಿದವರಿಗೆ ಎಕರೆಗೆ ₹2 ಲಕ್ಷ ಪರಿಹಾರ, ಆಶ್ರಯ ಯೋಜನೆಯಲ್ಲಿ 60×40 ಅಡಿ ನಿವೇಶನ, ಉದ್ಯೋಗದ ಭರವಸೆ, ವೃದ್ಧ ರೈತರಿಗೆ ಪಿಂಚಣಿ ನೀಡುವ ಕುರಿತು ಸರ್ಕಾರ ತೀರ್ಮಾನಿಸಿತ್ತು.

ಪಾಯಿಂಟ್ 2: ನಿವೇಶನ ಹಂಚಿಕೆ ಗೊಂದಲ
34 ಎಕರೆ ಜಮೀನು ವಶಕ್ಕೆ ಪಡೆದು ರೈತರಿಗೆ ನಿವೇಶನ ಹಂಚಿಕೆ ಮಾಡಲು ಅಭಿವೃದ್ಧಿಪಡಿಸಲಾಗಿತ್ತು. ಆದರೆ 2009ರಲ್ಲಿ ನಿವೇಶನ ಹಂಚಿಕೆ ಹೊತ್ತಲ್ಲಿ ವಿಮಾನ ನಿಲ್ದಾಣಕ್ಕಾಗಿ ಮನೆ ಕಳೆದುಕೊಂಡವರಿಗೆ ಮಾತ್ರ ನಿವೇಶನ ನೀಡಿ, ಉಳಿಕೆ ನಿವೇಶನಗಳನ್ನು ಮಾರಾಟ ಮಾಡಲು ಆಗಿನ ಜಿಲ್ಲಾಧಿಕಾರಿ ಅವರು ಗೃಹ ಮಂಡಳಿಗೆ ಆದೇಶಿಸಿದ್ದರು. ಇದರ ವಿರುದ್ಧ ರೈತರೆಲ್ಲ ಸೇರಿ ಪ್ರತಿಭಟನೆ, ಧರಣಿ ನಡೆಸಿದ್ದೆವು.

ಪಾಯಿಂಟ್ 3: ಕೋರ್ಟ್ ಮೊರೆ
ಜಿಲ್ಲಾಧಿಕಾರಿ ಅವರ ಆದೇಶದ ವಿರುದ್ಧ ಹೈಕೋರ್ಟ್ ಮೊರೆ ಹೋಗಿದ್ದೆವು. ಆಗ ರೈತರ ಪರ ತೀರ್ಪು ಬಂದಿತ್ತು. ರೈತರಿಗೆ ನಿವೇಶನವನ್ನು ಹಂಚಿಕೆ ಮಾಡುವಂತೆ ಆದೇಶಿಸಲಾಗಿತ್ತು. ಹಾಗಿದ್ದೂ ಜಿಲ್ಲಾಧಿಕಾರಿ ರೈತರಿಗೆ ನಿವೇಶನ ಹಂಚಿಕೆ ಮಾಡಲಾಗದು ಎಂದಿದ್ದರು. ಪುನಃ ಹೈಕೋರ್ಟ್ ಮೊರೆ ಹೋದಾಗ ನಿವೇಶನ ಹಂಚಿಕೆಗೆ ಹೈಕೋರ್ಟ್ ತಡೆ ವಿಧಿಸಿತ್ತು.

ಪಾಯಿಂಟ್ 4: 24 ಗಂಟೆಯಲ್ಲಿ ನಿವೇಶನ ಅಂದಿದ್ದರು
ವಿಮಾನ ನಿಲ್ದಾಣದ ಉದ್ಘಾಟನೆ ಸಂದರ್ಭ ಧರಣಿ ನಡೆಸಿದ್ದೆವು. ಆಗ ಸರ್ಕಾರ ಗೃಹ ಮಂಡಳಿಗೆ ₹34 ಕೋಟಿ ಪಾವತಿಸಿ ನಿವೇಶನಗಳನ್ನು ಜಿಲ್ಲಾಡಳಿತಕ್ಕೆ ಹಸ್ತಾಂತರ ಮಾಡಿದ್ದಾಗಿ ತಿಳಿಸಿತ್ತು. ಆ ಆದೇಶ ಪ್ರತಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ ಬಳಿಕ ನಿವೇಶನ ಹಂಚಿಕೆಗೆ ಇದ್ದ ತಡೆಯಾಜ್ಞೆ ತೆರವಾಗಿತ್ತು. ಈ ಮಧ್ಯೆ ಸಾರ್ವಜನಿಕರೊಬ್ಬರು ನಿವೇಶನ ಹಂಚಿಕೆ ವಿರುದ್ಧ ತಡೆ ತಂದರು. ಆ ತಡೆಯಾಜ್ಞೆ ತೆರವು ಮಾಡಿಸಿದರೆ 24 ಗಂಟೆಯಲ್ಲಿ ನಿವೇಶನ ಹಂಚಿಕೆ ಮಾಡುತ್ತೇನೆ ಎಂದು ಜಿಲ್ಲಾಧಿಕಾರಿ ಹೇಳುತ್ತಿದ್ದರು.

ಪಾಯಿಂಟ್ 5: ತಡೆಯಾಜ್ಞೆ ತೆರವಿಗೆ ಮುಂದಾಗದ ಸರ್ಕಾರ
ತಡೆಯಾಜ್ಞೆ ತೆರವಿಗೆ ಸರ್ಕಾರ ಪ್ರಯತ್ನಿಸದ ಹಿನ್ನೆಲೆ ರೈತರೇ ಕೋರ್ಟ್ ಮೊರೆ ಹೋಗಿದ್ದರು. ಎರಡು ವರ್ಷದ ಹೋರಾಟದ ಬಳಿಕ ತಡೆಯಾಜ್ಞೆ ತೆರವಾಗಿದೆ. ಐದು ತಿಂಗಳು ಕಳೆದರು ಈಗ ನಾನಾ ಕಾರಣ ನೀಡಿ ನಿವೇಶನ ಹಂಚಿಕೆ ಮಾಡುತ್ತಿಲ್ಲ. ರೈತರಿಗೆ ನಿವೇಶನ ಹಂಚಿಕೆ ಮಾಡಲು ಜಿಲ್ಲಾಡಳಿತಕ್ಕೆ ಆಸಕ್ತಿ ಇದ್ದಂತೆ ಕಾಣುತ್ತಿಲ್ಲ.

ಪಾಯಿಂಟ್ 6: ಸಚಿವರ ಮುಂದೆ ಹೊಸ ವರಸೆ
ಇತ್ತೀಚೆಗೆ ವಸತಿ ಸಚಿವರ ಸಮ್ಮುಖದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಗೃಹ ಮಂಡಳಿ ಅಧಿಕಾರಿಗಳ ಸಭೆ ನಡೆಸಲಾಯಿತು. ಆಗ ಗೃಹ ಮಂಡಳಿ ಅಧಿಕಾರಿಗಳು, ಸರ್ಕಾರ ತಮಗೆ ₹34 ಕೋಟಿಯನ್ನು ಇನ್ನೂ ಪಾವತಿಸಿಲ್ಲ. ಆದ್ದರಿಂದ ಗೃಹ ಮಂಡಳಿಯು ಆ ನಿವೇಶನಗಳನ್ನು ಜಿಲ್ಲಾಧಿಕಾರಿಗೆ ಹಸ್ತಾಂತರಿಸುವುದಿಲ್ಲ ಎಂದು ತಿಳಿಸಿದ್ದರು. ಹಾಗಾಗಿ ಗೃಹ ಮಂಡಳಿಗೆ ಬದಲಿ ಜಾಗ ಕೊಡುವಂತೆ ಸಚಿವ ಜಮೀರ್ ಅಹಮದ್ ಅವರು ಜಿಲ್ಲಾಧಿಕಾರಿಗೆ ಸೂಚಿಸಿದ್ದರು. ಸಭೆ ಮುಗಿದು ತಿಂಗಳು ಕಳೆದರು ಜಿಲ್ಲಾಧಿಕಾರಿ ಯಾವುದೇ ಕ್ರಮ ಕೈಗೊಂಡಿಲ್ಲ.

ಇವತ್ತು ಗೇಟ್ ಮುಂದೆ ಶಾಂತಿಯುತ ಹೋರಾಟ ನಡೆಸುತ್ತಿದ್ದೇವೆ. ನಾಳೆ ನಾವು ಗೇಟ್‌ಗೆ ಬೀಗ ಹಾಕಿ ಧರಣಿ ನಡೆಸಬೇಕಾಗುತ್ತದೆ. ಹಗಲು ರಾತ್ರಿ ಧರಣಿ ಮುಂದುವರೆಯಲಿದೆ.
- ಕೃಷ್ಣಪ್ಪ, ಹೋರಾಟ ಸಮಿತಿ ಅಧ್ಯಕ್ಷ
![]()
ಸರ್ಕಾರ 34 ಕೋಟಿ ಪಾವತಿಸದ ಹಿನ್ನೆಲೆ ನಿವೇಶನ ಹಸ್ತಾಂತರ ಮಾಡಲು ಸಾಧ್ಯವಿಲ್ಲ ಎಂದು ಗೃಹ ಮಂಡಳಿ ಅಧಿಕಾರಿಗಳು ಸಚಿವರ ಮುಂದೆ ಹೇಳಿದ್ದಾರೆ. ಆದರೆ ಇದೇ ಗೃಹ ಮಂಡಳಿ ಅಧಿಕಾರಿಗಳು ನಿವೇಶನ ಹಂಚಿಕೆಗೆ ತಮ್ಮ ತಕರಾರು ಇಲ್ಲ ಎಂದು ಹೈಕೋರ್ಟ್‌ನಲ್ಲಿ ಹೇಳಿದ್ದರು. ಈಗ ಪುನಃ ಕಚೇರಿಗೆ ಅಲೆಸುತ್ತಿದ್ದಾರೆ. ಶಾಂತಿಯುತವಾಗಿ ಧರಣಿ ನಡೆಸುತ್ತಿದ್ದೇವೆ. ಮುಂದೆ ಗೇಟ್ ಬೀಗ ಹಾಕಿ ಯಾರನ್ನು ಒಳಗೆ ಬಿಡುವುದಿಲ್ಲ.
- ಶಿವಕುಮಾರ್, ಹೋರಾಟ ಸಮಿತಿ ಕಾರ್ಯದರ್ಶಿ
![]()
Shimoga Airport


