ಬರ ಪರಿಸ್ಥಿತಿ ಅವಲೋಕನಕ್ಕೆ ಗ್ರಾಮಗಳಿಗೆ ಭೇಟಿ, ರೈತರ ಅಳಲು ಆಲಿಸಿದ ಶಾಸಕಿ, ಅಧಿಕಾರಿಗೆ ಪ್ರಮುಖ ಸೂಚನೆ

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

ಶಿವಮೊಗ್ಗ: ಮಳೆ ಕೊರತೆಯಿಂದಾಗಿ ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿ ಉಂಟಾಗಿರುವ ತೀವ್ರ ಬರ ಪರಿಸ್ಥಿತಿಯನ್ನು ಶಾಸಕಿ ಶಾರದಾ ಪೂರ್ಯನಾಯ್ಕ್ ಅವರು ನೇರವಾಗಿ ಗ್ರಾಮಗಳಿಗೆ ಭೇಟಿ ನೀಡಿ ಸ್ಥಳದಲ್ಲೇ ಪರಿಶೀಲನೆ ನಡೆಸಿದರು.

ಕ್ಷೇತ್ರದ ಹಾರನಹಳ್ಳಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಕುಂಚೇನಹಳ್ಳಿ, ಮಲ್ಲಾಪುರ, ರಾಮನಗರ, ಬಾಳೆಕೊಪ್ಪ, ಹಾರನಹಳ್ಳಿ, ಕೊನಗವಳ್ಳಿ, ತ್ಯಾಜವಳ್ಳಿ ಹಾಗೂ ಮುದ್ದಿನಕೊಪ್ಪ ಗ್ರಾಮಗಳಿಗೆ ತೆರಳಿ ಪರಿಶೀಲಿಸಿದರು. ಕೃಷಿ ಜಮೀನುಗಳು, ಬೆಳೆಗಳ ಒಣಗುತ್ತಿರುವ ಸ್ಥಿತಿ ಹಾಗೂ ಕುಡಿಯುವ ನೀರಿನ ಲಭ್ಯತೆ ಕುರಿತು ರೈತರಿಂದ ನೇರವಾಗಿ ಮಾಹಿತಿ ಪಡೆದುಕೊಂಡರು. ಸುದ್ದಿಯ ಮುಂದಿನ 3 ಪ್ಯಾರಾಗಳು ಕೆಳಗಿವೆ.

ಕೇವಲ ಕಚೇರಿ ವರದಿಗಳನ್ನು ನಂಬದೆ ನೈಜ ಸ್ಥಿತಿಗತಿ ತಿಳಿಯಲು ಕ್ಷೇತ್ರಾಭೇಟಿ ಕೈಗೊಳ್ಳಲಾಗಿದೆ ಎಂದು ತಿಳಿಸಿದ ಶಾಸಕರು, ಮಳೆಯಾಶ್ರಿತ ಬೆಳೆಗಳು ಹಾನಿಯಾಗಿರುವುದು ಹಾಗೂ ಜಾನುವಾರುಗಳಿಗೆ ಮೇವಿನ ತೀವ್ರ ಕೊರತೆ ಎದುರಾಗಿರುವುದನ್ನು ಮನಗಂಡರು. ಈ ಸಮಸ್ಯೆಗಳ ಕುರಿತು ರಾಜ್ಯ ಸರ್ಕಾರದ ಹಾಗೂ ಮುಖ್ಯಮಂತ್ರಿ ಅವರ ಗಮನ ಸೆಳೆದು ರೈತರಿಗೆ ತ್ವರಿತ ಪರಿಹಾರ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.

MLA-Sharadha-Puryanaik-visits-various-villages

ಜಲ್ಲೆಯ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಚರ್ಚಿಸಿದ ಶಾಸಕರು, ಗ್ರಾಮವಾರು ಸಮಗ್ರ ವರದಿ ಸಿದ್ಧಪಡಿಸಿ ಬೆಳೆ ಹಾನಿಯ ನಿಖರ ಮೌಲ್ಯಮಾಪನ ನಡೆಸಬೇಕು. ಕುಡಿಯುವ ನೀರು ಹಾಗೂ ಮೇವು ಒದಗಿಸಲು ಆದ್ಯತೆಯ ಮೇರೆಗೆ ಕ್ರಮಕೈಗೊಳ್ಳಬೇಕು ಎಂದು ಸೂಚನೆ ನೀಡಿದರು. ಬರ ನಿರ್ವಹಣೆಯ ಸೌಲಭ್ಯಗಳು ಅರ್ಹ ರೈತರಿಗೆ ತಲುಪುವಂತೆ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು ಎಂದು ನಿರ್ದೇಶಿಸಿದರು.

ಅಡಿಕೆ ತೋಟಗಳ ನಷ್ಟ, ಪರಿಹಾರದ ಭರವಸೆ

ಇತ್ತೀಚೆಗೆ ಸುರಿದ ಭಾರೀ ಮಳೆಯಿಂದಾಗಿ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರ ವ್ಯಾಪ್ತಿಯ ಅಡಿಕೆ ತೋಟಗಳಲ್ಲಿ ನೂರಾರು ಮರಗಳು ನೆಲಕ್ಕುರುಳಿ ರೈತರಿಗೆ ನಷ್ಟವಾಗಿದೆ. ಎನ್‌ಡಿಆರ್‌ಎಫ್ ಹಾಗೂ ಎಸ್‌ಡಿಆರ್‌ಎಫ್ ಮಾರ್ಗಸೂಚಿಯಡಿ ಸೂಕ್ತ ಪರಿಹಾರ ದೊರಕಿಸಿಕೊಡಲು ವಿಧಾನಸಭೆಯಲ್ಲಿ ಧ್ವನಿಯೆತ್ತುವುದಾಗಿ ತಿಳಿಸಿದರು. ಈ ಸಂದರ್ಭ ಜೆಡಿಎಸ್ ಮುಖಂಡರು, ಗ್ರಾಮಸ್ಥರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.