ಪುರದಾಳು ಗ್ರಾಮದಲ್ಲಿ ಚಿಕ್ಕಪ್ಪನಿಗೆ ಚಾಕು ಇರಿದ ಯುವಕ, ಕಾರಣವೇನು?

ಶಿವಮೊಗ್ಗ: ಸಹೋದರರ ನಡುವಿನ ಜಮೀನು ವಿವಾದ ವಿಕೋಪಕ್ಕೆ ತಿರುಗಿ, ಯುವಕನೊಬ್ಬ ತನ್ನ ಚಿಕ್ಕಪ್ಪನಿಗೆ ಚಾಕು ಇರಿದಿದ್ದಾನೆ. ಶಿವಮೊಗ್ಗ ತಾಲ್ಲೂಕಿನ ಪುರದಾಳು ಗ್ರಾಮದಲ್ಲಿ ಘಟನೆ ನಡೆದಿದೆ.

ಶ್ರೀನಿವಾಸ್ (52) ಚಾಕು ಇರಿತಕ್ಕೊಳಗಾದವರು. ಇವರ ಸಹೋದರ ರಾಜಪ್ಪ ಅವರ ಪುತ್ರ ಮಂಜುನಾಥ್ ಕೃತ್ಯವೆಸಗಿದ್ದಾನೆ. ರಾಜಪ್ಪ ಹಾಗೂ ಶ್ರೀನಿವಾಸ್ ಮಧ್ಯೆ ಜಮೀನಿನ ಗಡಿ ಹಾಗೂ ಅಡಿಕೆ ತೋಟಕ್ಕೆ ನೀರು ಹಾಯಿಸುವ ವಿಚಾರವಾಗಿ ಮಾತಿನ ಚಕಮಕಿ ನಡೆದಿತ್ತು.

070426-Tunga-Nagara-Police-Station-General-Image.avif

ಶ್ರೀನಿವಾಸ್ ದಂಪತಿ ತೋಟಕ್ಕೆ ನೀರು ಹಾಯಿಸುತ್ತಿದ್ದ ವೇಳೆ ಸ್ಥಳಕ್ಕೆ ಆಗಮಿಸಿದ ರಾಜಪ್ಪ ಹಾಗೂ ಆತನ ಪತ್ನಿ ಗಲಾಟೆ ಆರಂಭಿಸಿದ್ದಾರೆ. ಈ ವೇಳೆ ಕಾರಿನಿಂದ ಇಳಿದ ರಾಜಪ್ಪನ ಮಗ ಮಂಜುನಾಥ್, ಚಿಕ್ಕಪ್ಪ ಶ್ರೀನಿವಾಸ್ ಮೇಲೆ ಚಾಕುವಿನಿಂದ ಎದೆ, ಪಕ್ಕೆಲುಬು ಹಾಗೂ ತೊಡೆ ಭಾಗಕ್ಕೆ ಇರಿದಿದ್ದಾನೆ. ಗಲಾಟೆ ಬಿಡಿಸಲು ಬಂದ ಶ್ರೀನಿವಾಸ್ ಪತ್ನಿ ಶಶಿಕಲಾ ಮೇಲೂ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ.

ಗಂಭೀರ ಗಾಯಗೊಂಡ ಶ್ರೀನಿವಾಸ್ ಅವರನ್ನು ಮೆಗ್ಗಾನ್ ಆಸ್ಪತ್ರೆಯಿಂದ ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ತುಂಗಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ.