ಶಿವಮೊಗ್ಗದ ಲೈವ್.ಕಾಂ | SHIMOGA NEWS | 5 ಫೆಬ್ರವರಿ 2022
ಶಿವಮೊಗ್ಗ ವಿಮಾನ ನಿಲ್ದಾಣದ ಮೊದಲ ಹಂತದ ಕಾಮಗಾರಿ ಭರದಿಂದ ಸಾಗಿದೆ. ಈ ನಡುವೆ ವಿಮಾನಯಾನ ಸೇವೆ ಒದಗಿಸುವ ಸಂಬಂಧ ಗುತ್ತಿಗೆ ಪಡೆಯಲು ವಿವಿಧ ಕಂಪನಿಗಳಿಗೆ ಆಹ್ವಾನ ನೀಡಲಾಗಿದೆ. ಇನ್ನೊಂದೆಡೆ ಕಾಮಗಾರಿ ಕುರಿತು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮತ್ತು ಜಿಲ್ಲಾಧಿಕಾರಿ ಅವರು ಪರಿಶೀಲನೆ ನಡೆಸಿದರು.
ಅಧಿಕಾರಿಗಳಿಂದ ಕಾಮಗಾರಿ ಪರಿಶೀಲನೆ
ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ಸೆಲ್ವಕುಮಾರ್, ಜಿಲ್ಲಾಧಿಕಾರಿ ಆರ್.ಸೆಲ್ವಮಣಿ ನೇತೃತ್ವದ ಅಧಿಕಾರಿಗಳ ತಂಡ ಸೋಗಾನೆಯಲ್ಲಿರುವ ವಿಮಾನ ನಿಲ್ದಾಣ ಕಾಮಗಾರಿ ಪರಿಶೀಲನೆ ನಡೆಸಿತು. ಶುಕ್ರವಾರ ವಿಮಾನ ನಿಲ್ದಾಣ ಕಾಮಗಾರಿ ನಡೆಯುತ್ತಿದ್ದ ಸ್ಥಳಕ್ಕೆ ಭೇಟಿ ನೀಡಿ, ಗುತ್ತಿಗೆದಾರರು, ಅಧಿಕಾರಿಗಳಿಂದ ಮಾಹಿತಿ ಪಡೆದರು.
ಮೊದಲ ಹಂತದ ಕಾಮಗಾರಿ ಬಿರುಸು
ವಿಮಾನ ನಿಲ್ದಾಣದ ಮೊದಲ ಹಂತದ ಕಾಮಗಾರಿ ಬಿರುಸಿನಿಂದ ನಡೆಯುತ್ತಿದೆ. 758 ಎಕರೆ ಪ್ರದೇಶದಲ್ಲಿ ಕಾಮಗಾರಿ ನಡೆಯುತ್ತಿದೆ. ಮೊದಲ ಹಂತದಲ್ಲಿ ರನ್ ವೇ, ಎಫ್ರಾನ್, ಟ್ಯಾಕ್ಸಿ ವೇ, ಕಾಂಪೌಂಡ್, ಸಂಪರ್ಕ ರಸ್ತೆ, ವರ್ತುಲ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ. ಮತ್ತೊಂದೆಡೆ ಎರಡನೇ ಹಂತದ ಕಾಮಗಾರಿ ಕೂಡ ಚುರುಕು ಪಡೆದುಕೊಂಡಿದೆ. ವಿಮಾನ ನಿಲ್ದಾಣದ ಟರ್ಮಿನಲ್ ಕಟ್ಟಡ, ವಿದ್ಯುತ್ ಉಪ ಕೇಂದ್ರಗಳು ಎರಡನೇ ಹಂತದ ಕಾಮಗಾರಿಯಲ್ಲಿದೆ. ಈ ಕಾಮಗಾರಿ 2022ರ ಜೂನ್ ವೇಳೆಗೆ ಪೂರ್ಣಗೊಳ್ಳಬೇಕಿದೆ.
ವಿಮಾನ ನಿಲ್ದಾಣಕ್ಕೆ ಬಿಡ್ ಆಹ್ವಾನ
ಮತ್ತೊಂದೆಡೆ, ಕೈಗಾರಿಕಾ ಮೂಲಭೂತ ಸೌಕರ್ಯ ನಿಗಮದ ವತಿಯಿಂದ ಶಿವಮೊಗ್ಗ ಮತ್ತು ವಿಜಯಪುರ ವಿಮಾನ ನಿಲ್ದಾಣದಿಂದ ವಿಮಾನ ಹಾರಾಟ ಸಂಬಂಧ ಗುತ್ತಿಗೆ ಆಹ್ವಾನಿಸಲಾಗಿದೆ. ಉಡಾನ್ ಯೋಜನೆ ಅಡಿ ಈ ಏರ್ ಪೋರ್ಟ್’ಗಳಿಂದ ವಿಮಾನ ಹಾರಾಟ ನಡೆಸುವಂತೆ ಬಿಡ್ ಕರೆಯಲಾಗಿದೆ.
ಇದನ್ನೂ ಓದಿ | ಶಿವಮೊಗ್ಗ ವಿಮಾನ ನಿಲ್ದಾಣದ ಟರ್ಮಿನಲ್ ನೀಲನಕ್ಷೆ ರೆಡಿ, ಎರಡನೇ ಪ್ಯಾಕೇಜ್ ಕರಾರಿಗೆ ಸಹಿ
ಕಡಿಮೆ ದರದಲ್ಲಿ ವಿಮಾನಯಾನ ಸೇವೆ ಒದಗಿಸುವುದು ಉಡಾನ್ ಯೋಜನೆ ಪ್ರಮುಖ ಉದ್ದೇಶ. ನಿಗಮದ ವತಿಯಿಂದ ಬಿಡ್ ಕರೆದಿರುವುದರಿಂದ ಶಿವಮೊಗ್ಗ ವಿಮಾನ ನಿಲ್ದಾಣದತ್ತ ಜನರು ಪುನಃ ಕುತೂಹಲದ ಕಣ್ಣಿಡುವಂತಾಗಿದೆ.
ಇದನ್ನೂ ಓದಿ | ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿ ಚುರುಕು, ಸಂಸದರ ನೇತೃತ್ವದ ತಂಡದಿಂದ ಪರಿಶೀಲನೆ, ಕೆಲಸ ಎಷ್ಟಾಗಿದೆ?
Shimoga District Profile | About Shivamogga Live
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200