ಶಿವಮೊಗ್ಗ : ಗಿಡಮೂಲಿಕೆ ಮಾರಾಟಕ್ಕಾಗಿ ಆಫ್ರಿಕಾ (Africa) ಖಂಡಕ್ಕೆ ತೆರಳಿದ್ದ ಹಕ್ಕಿಪಿಕ್ಕಿ ಕಾಲೋನಿಯ ಶಮೀಲಾ (41) ಎಂಬ ಮಹಿಳೆ ಮಲೇರಿಯಾ ಕಾಯಿಲೆಗೆ ತುತ್ತಾಗಿ ಮೃತಪಟ್ಟಿದ್ದಾರೆ. ಅವರ ಮೃತದೇಹವನ್ನು ಭಾರತಕ್ಕೆ ತರಿಸಿಕೊಡುವಂತೆ ಕುಟುಂಬದವರು, ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ಶಿವಮೊಗ್ಗ ತಾಲೂಕು ಮಲ್ಲಿಗೇನಹಳ್ಳಿ ಬಳಿಯ ತುಂಗಾ ಚಾನಲ್ ಪಕ್ಕದ ಹಕ್ಕಿಪಕ್ಕಿ ಕಾಲೋನಿಯ ಶಿಖರಮಣಿ ಎಂಬುವವರ ಪುತ್ರಿ ಶಮೀಲಾ, ಆಫ್ರಿಕಾ (Africa) ಖಂಡದ ಗಿನಿ ದೇಶದಲ್ಲಿ ಶನಿವಾರ ಮೃತಪಟ್ಟಿದ್ದಾರೆ.
ಆಸ್ಪತ್ರೆ ಬಿಲ್ ಕಟ್ಟದೆ ಮೃತದೇಹ ಕೊಡುತ್ತಿಲ್ಲ
ಗಿನಿಯ ಝೆರೆಕೊರೆ ನಗರದ ಆಸ್ಪತ್ರೆಗೆ ಏಪ್ರಿಲ್ 8ರಂದು ಶಮೀಲಾ ದಾಖಲಾಗಿದ್ದರು. ಚಿಕಿತ್ಸೆ ಫಲಿಸದೆ ಅಲ್ಲಿಯೇ ಮೃತಪಟ್ಟಿದ್ದಾರೆ. ಚಿಕಿತ್ಸೆಯ ಬಿಲ್ 3 ಲಕ್ಷ ರೂ. ಪಾವತಿಸದೆ ಮೃತದೇಹ ಕೊಡುವುದಿಲ್ಲ ಎಂದು ಆಸ್ಪತ್ರೆಯವರು ಪಟ್ಟುಹಿಡಿದಿದ್ದಾರೆ ಎಂದು ಆರೋಪಿಸಲಾಗಿದೆ.

ಇದನ್ನೂ ಓದಿ » ಖಾಸಗಿ ಬಸ್, ಟಾಟಾ ಏಸ್ ಮುಖಾಮುಖಿ ಡಿಕ್ಕಿ, ಹತ್ತಕ್ಕು ಹೆಚ್ಚು ಕುರಿಗಳು ಸಾವು

ಹಣ ಪಾವತಿಸಲಾಗದೆ ಕುಟುಂಬದವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ನೆರವಿಗೆ ಧಾವಿಸುವಂತೆ ಗಿನಿಯಲ್ಲಿರುವ ಭಾರತೀಯ ರಾಯಭಾರ ಕಚೇರಿ ಹಾಗೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರಿಗೆ ಮೊರೆ ಇಟ್ಟಿದ್ದಾರೆ.

ತಿಂಗಳ ಹಿಂದಷ್ಟೇ ಗಿನಿ ದೇಶಕ್ಕೆ ತೆರಳಿದ್ದರು. ಇವರೊಂದಿಗೆ ಸಂಬಂಧಿ ಆಕಾಶ್ ಇದ್ದಾರೆ. ಅವರೇ ಆಸ್ಪತ್ರೆಗೆ ದಾಖಲಿಸಿದ್ದರು. ಶಮೀಲಾ ಮೃತದೇಹವನ್ನು ಭಾರತಕ್ಕೆ ತರಲು ನೆರವಾಗುವಂತೆ ರಾಯಭಾರ ಕಚೇರಿ ಅಧಿಕಾರಿಗಳು ಹಾಗೂ ಸಚಿವರಿಗೆ ಮನವಿ ಮಾಡಿದ್ದೇವೆ. ಅವರಿಂದ ಸಕಾರಾತ್ಮಕ ಸ್ಪಂದನೆ ದೊರೆತಿದೆ.
ಪುನೀತ್ ಕುಮಾರ್, ಹಕ್ಕಿಪಿಕ್ಕಿ ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ

ಶಮೀಲಾ ಜೊತೆಗೆ ಆಫ್ರಿಕಾಗೆ ತೆರಳಿದ್ದ ಸಂಬಂಧಿ ಆಕಾಶ್ ಆಕೆಯ ಮೃತದೇಹದ ವಿಡಿಯೋ ಮತ್ತು ಮಾಹಿತಿಯನ್ನು ಕುಟುಂಬದವರಿಗೆ ರವಾನಿಸಿದ್ದಾರೆ. ಸದ್ಯ, ಕುಟುಂಬದವರು ಸರ್ಕಾರದ ನಿರ್ಧಾರದತ್ತ ಚಿತ್ತ ನೆಟ್ಟಿದ್ದಾರೆ.

