ಜಾವಳಿಯಲ್ಲಿ ಭೀಕರ ಅಪಘಾತ, ಹೊಳಲ್ಕೆರೆಯ ಯುವಕ ಸಾವು, ನಾಲ್ಕು ಮಂದಿಗೆ ಗಂಭೀರ ಗಾಯ, ಆಗಿದ್ದೇನು?

ಹೊಳೆಹೊನ್ನೂರು: ತಾಲ್ಲೂಕಿನ ಜಾವಳ್ಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಟೆಂಪೋ ಟ್ರಾವೆಲರ್ ಹಾಗೂ ಕಾರಿನ ಮಧ್ಯೆ ಸಂಭವಿಸಿದ ಭೀಕರ ಅಪಘಾತದಲ್ಲಿ ಯುವಕನೊಬ್ಬ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ನಾಲ್ವರಿಗೆ ಗಂಭೀರ ಗಾಯವಾಗಿದೆ. (ಈ ಸುದ್ದಿಯನ್ನು ಇನ್ನು 48 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ಪಟ್ಟಣದ ನಿವಾಸಿ ದರ್ಶನ್ (31) ಮೃತ ಯುವಕ. ಕಾರು ಚಾಲನೆ ಮಾಡುತ್ತಿದ್ದ ಶರತ್ (28), ಕಾರಿನಲ್ಲಿದ್ದ ತಿಪ್ಪೇಸ್ವಾಮಿ (28), ಬೈರೇಶ್ (23) ಹಾಗೂ ವಿನಾಯಕ್ (28) ತೀವ್ರ ಗಾಯಗೊಂಡಿದ್ದಾರೆ. ಅವರನ್ನು ಶಿವಮೊಗ್ಗದ ಸರ್ಜಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

Car-and-Tempo-Traveller-Accident-Near-Javalli-in-Shivamogga-Taluk

ಹೇಗಾಯ್ತು ಅಪಘಾತ?

ದರ್ಶನ್ ಹಾಗೂ ಅವರ ಸ್ನೇಹಿತರು ಶರತ್ ಅವರ ಕಾರಿನಲ್ಲಿ ಕೊಲ್ಲೂರು ಹಾಗೂ ಸಿಗಂದೂರು ದೇವಸ್ಥಾನಕ್ಕೆ ತೆರಳಿದ್ದರು. ದೇವರ ದರ್ಶನ ಮುಗಿಸಿಕೊಂಡು ಶಿವಮೊಗ್ಗ ಮಾರ್ಗವಾಗಿ ಹೊಳಲ್ಕೆರೆಗೆ ವಾಪಸ್ ತೆರಳುತ್ತಿದ್ದರು. ಚನ್ನಗಿರಿ ಕಡೆಯಿಂದ ವೇಗವಾಗಿ ಬಂದ ಟೆಂಪೋ ಟ್ರಾವೆಲರ್ ಕಾರಿಗೆ ಡಿಕ್ಕಿ ಹೊಡೆದಿದೆ ಎಂದು ಆರೋಪಿಸಲಾಗಿದೆ.

ಕಾರು, ಟಿಟಿ ನಜ್ಜುಗುಜ್ಜು

ಡಿಕ್ಕಿಯ ರಭಸಕ್ಕೆ ಕಾರು ನಜ್ಜುಗುಜ್ಜಾಗಿದೆ. ಟಿಟಿ ವಾಹನದ ಮುಂಭಾಗವು ಹಾನಿಯಾಗಿದೆ. ಕಾರು ಚಾಲಕ ಶರತ್ ಅವರ ಕಾಲು ಕಾರಿನೊಳಗೆ ಸಿಲುಕಿಕೊಂಡಿತ್ತು. ಸ್ಥಳೀಯರು ಹರಸಾಹಸಪಟ್ಟು ಗಾಯಾಳುಗಳನ್ನು ಹೊರತೆಗೆದು ಆಸ್ಪತ್ರೆಗೆ ರವಾನಿಸಿದ್ದಾರೆ. ಇನ್ನು, ತೀವ್ರ ಗಾಯಗೊಂಡಿದ್ದ ದರ್ಶನ್‌ ಮೃತಪಟ್ಟಿದ್ದಾರೆ. ಘಟನೆ ಸಂಬಂಧ ಹೊಳೆಹೊನ್ನೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.