ಸೊರಬ: ಗ್ರಾಮೀಣ ರಸ್ತೆಗಳನ್ನು ಅಭಿವೃದ್ಧಿಪಡಿಸಿ ಸುರಕ್ಷಿತ ಪ್ರಯಾಣಕ್ಕೆ ಅನುವು ಮಾಡಿಕೊಡುವುದು ಸರ್ಕಾರದ ಮುಖ್ಯ ಉದ್ದೇಶವಾಗಿದೆ. ಕ್ಷೇತ್ರದ ಪ್ರತಿ ಭಾಗದಲ್ಲೂ ಹಂತ ಹಂತವಾಗಿ ಮೂಲಸೌಕರ್ಯ ಮೇಲ್ದರ್ಜೆಗೇರಿಸಲು ಆದ್ಯತೆ ನೀಡಲಾಗುತ್ತಿದೆ ಎಂದು ಮಧು ಬಂಗಾರಪ್ಪ ತಿಳಿಸಿದರು.
ಲೋಕೋಪಯೋಗಿ ಇಲಾಖೆ ಉಪವಿಭಾಗದ ವತಿಯಿಂದ ಹರೀಶಿ ಭಾಗದ ಹಿರೇಕಲಗೋಡು ಗ್ರಾಮದಲ್ಲಿ ₹1.80 ಕೋಟಿ ವೆಚ್ಚದ ಎರಡು ಕಾಮಗಾರಿಗಳಿಗೆ ಗುದ್ದಲಿಪೂಜೆ, ಹಚ್ಚೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂಕರವಳ್ಳಿ ಗ್ರಾಮದ ಎಸ್‌ಸಿ ಕೇರಿಯಿಂದ ಚಂದ್ರಗುತ್ತಿ ಲೋಕೋಪಯೋಗಿ ರಸ್ತೆವರೆಗೆ ₹80 ಲಕ್ಷ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಧು ಬಂಗಾರಪ್ಪ ಮಾತನಾಡಿದರು.

ಹರೀಶಿ–ದ್ಯಾವಸ–ಈಡೂರು ರಸ್ತೆ ಡಾಂಬರೀಕರಣ ಹಾಗೂ ಹಿರೇಕಲಗೋಡು ಹಳ್ಳಕ್ಕೆ ಸೇತುವೆ ನಿರ್ಮಾಣ ಕಾರ್ಯಗಳು ಇದರಲ್ಲಿ ಸೇರಿದೆ. ಈ ಭಾಗದ ಹಳ್ಳಿಗಳ ಸಂಪರ್ಕ ಸುಲಭವಾಗಲಿದೆ. ಮುಂದೆ ಇದೇ ಭಾಗದಲ್ಲಿ ₹6 ಕೋಟಿ ವೆಚ್ಚದಲ್ಲಿ ಸೇತುವೆ ಹಾಗೂ ಕಾಲುಸಂಕ ನಿರ್ಮಾಣ ಸೇರಿದಂತೆ ನಾಲ್ಕು ಹೊಸ ಯೋಜನೆಗಳನ್ನು ಜಾರಿಗೆ ತರಲಾಗುವುದು ಎಂದು ಸಚಿವ ಮಧು ಬಂಗಾರಪ್ಪ ಭರವಸೆ ನೀಡಿದರು. ಕಾರ್ಯಕ್ರಮದಲ್ಲಿ ಸ್ಥಳೀಯ ಜನಪ್ರತಿನಿಧಿಗಳು, ವಿವಿಧ ಪಕ್ಷಗಳ ಮುಖಂಡರು ಹಾಗೂ ಇಲಾಖಾ ಅಧಿಕಾರಿಗಳು ಹಾಜರಿದ್ದರು.