ಸೊರಬ: ಎಸ್. ಬಂಗಾರಪ್ಪ ವಿಚಾರ ವೇದಿಕೆ ಹಾಗೂ ಎಸ್. ಬಂಗಾರಪ್ಪ ಫೌಂಡೇಶನ್ ಸಂಯುಕ್ತ ಆಶ್ರಯದಲ್ಲಿ ಸೊರಬದ ಬಂಗಾರಧಾಮದಲ್ಲಿ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರ 94ನೇ ಜನ್ಮದಿನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸಮಾರಂಭದಲ್ಲಿ ನಾಲ್ವರು ಸಾಧಕರಿಗೆ ಬಂಗಾರ ಪ್ರಶಸ್ತಿ ನೀಡಿ ಗೌರವಿಸಲಾಯಿತು. (ಈ ಸುದ್ದಿಯನ್ನು ಇನ್ನು 114 ಸೆಕೆಂಡ್ಗಳಲ್ಲಿ ಓದಿ ಮುಗಿಸಬಹುದು)
ಬಂಗಾರಪ್ಪ ಸಮಾಧಿಗೆ ನಮನ
ವಿಧಾನ ಪರಿಷತ್ ಸಭಾಪತಿ ಸಲೀಂ ಅಹಮದ್, ಸಚಿವರಾದ ಅಜಯ್ ಧರ್ಮಸಿಂಗ್, ಮಧು ಬಂಗಾರಪ್ಪ, ವಿಧಾನ ಪರಿಷತ್ ಸದಸ್ಯೆ ಬಲ್ಕಿಸ್ ಬಾನು, ಮಾಜಿ ಶಾಸಕ ಮಹಿಮಾ ಪಟೇಲ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಸಿ.ಯೋಗೇಶ್, ರಾಜ್ಯ ಕೈಮಗ್ಗ ಮತ್ತು ಜವಳಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಚೇತನ್ ಕೆ.ಗೌಡ, ಸೂಡಾ ಅಧ್ಯಕ್ಷ ಸಿ.ಜೆ.ಮಧುಸೂದನ್ ಸೇರಿ ಹಲವರು ಬಂಗಾರಧಾಮದಲ್ಲಿ ಬಂಗಾರಪ್ಪ ಅವರ ಸಮಾಧಿಗೆ ನಮನ ಸಲ್ಲಿಸಿದರು. ನಂತರ ವಿಧಾನ ಪರಿಷತ್ ಸಭಾಪತಿ ಸಲೀಂ ಅಹಮದ್ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ನಾಲ್ವರು ಸಾಧಕರಿಗೆ ಬಂಗಾರ ಪ್ರಶಸ್ತಿ
ಚಾಮರಾಜನಗರದ ಪ್ರೊ. ಜಿ.ಎಸ್. ಜಯದೇವ ಅವರಿಗೆ ‘ಸೇವಾ ಬಂಗಾರ’, ತುಮಕೂರಿನ ಪ್ರೊ. ನಟರಾಜ್ ಹುಳಿಯಾರ್ ಅವರಿಗೆ ‘ಸಾಹಿತ್ಯ ಬಂಗಾರ’, ಗುಲ್ಬರ್ಗಾದ ಶೇಖ್ ಮಾಸ್ತರ್ ಅವರಿಗೆ ‘ರಂಗ ಬಂಗಾರ’ ಹಾಗೂ ಬೆಂಗಳೂರಿನ ಬಿ.ಸಿ. ರಮೇಶ್ ಅವರಿಗೆ ‘ಕ್ರೀಡಾ ಬಂಗಾರ’ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಪ್ರಶಸ್ತಿ ಪುರಸ್ಕೃತರು ಹೇಳಿದ್ದೇನು?
ಜಿ.ಎಸ್.ಜಯದೇವ, ಸೇವಾ ಬಂಗಾರ ಪ್ರಶಸ್ತಿ ಪುರಸ್ಕೃತರು: ‘ವಿಜ್ಞಾನಿ ಐನ್ಸ್ಟೈನ್ ಶಿಕ್ಷಣದ ಎರಡು ಉದ್ದೇಶ ತಿಳಿಸಿದ್ದರು. ಶಾಲೆಯಲ್ಲಿ ಕಲಿತದ್ದನ್ನೆಲ್ಲ ಮರೆತ ನಂತರ ಮಗು ಏನನ್ನು ನೆನಪಿನಲ್ಲಿ ಇಟ್ಟುಕೊಳ್ಳುತ್ತದೆಯೋ ಅದುವೇ ಶಿಕ್ಷಣ. ಎರಡನೆಯದ್ದು ಯಶಸ್ವಿ ಮನುಷ್ಯರ ಉತ್ಪಾದನೆ ಶಿಕ್ಷಣದ ಉದ್ದೇಶವಲ್ಲ. ಯಶಸ್ವಿ ವ್ಯಕ್ತಿಗಳು ಸಮಾಜದಲ್ಲಿ ತೆಗೆದುಕೊಳ್ಳುವುದು ಹೆಚ್ಚು ಕೊಡುವುದು ಕಡಿಮೆ. ಸಮಾಜಕ್ಕೆ ಹಿಂತಿರುಗಿ ಕೊಡುವವರನ್ನು ತಯಾರಿಸುವುದು ಶಿಕ್ಷಣದ ಉದ್ದೇಶ. ಐನ್ಸ್ಟೈನ್ ಉದ್ದೇಶಗಳ ದೃಷ್ಟಿಯಿಂದ ನೋಡಿದಾಗ ಇಂದಿನ ಶಿಕ್ಷಣ ವಿಫಲವಾಗಿದೆ. ಮಕ್ಕಳು ಶಾಲೆಯಿಂದ ಹೊರಗೆ ಕಲಿಯುವುದು ಹೆಚ್ಚು. ನಾಲ್ಕು ಗೋಡೆ ಮಧ್ಯೆ ಕೂಡಿ ಹಾಕುವುದರಿಂದ ಕಲಿಕೆ ಕಡಿಮೆ. ಶಾಲೆಗಳಿಂದ ಸಾಮಾಜಿಕ ಬದಲಾವಣೆ ಸಾದ್ಯ.ʼ
ಪ್ರೊ. ನಟರಾಜ್ ಹುಳಿಯಾರ್, ಸಾಹಿತ್ಯ ಬಂಗಾರ ಪ್ರಶಸ್ತಿ ಪುರಸ್ಕೃತ: ‘ರಾಜಕೀಯ ಸವಾಲುಗಳನ್ನು ರಾಜಕೀಯವಾಗಿ, ವಿಚಾರದ ಸವಾಲುಗಳನ್ನು ವೈಚಾರಿಕವಾಗಿ, ಚಳವಳಿಯ ಸವಾಲುಗಳನ್ನು ಚಳವಳಿ ಜೊತೆಗೆ ಮಾತನಾಡಬೇಕು ಎಂಬುದು ಬಂಗಾರಪ್ಪ ಅವರ ನಿಲುವಾಗಿತ್ತು. ಈಚೆಗೆ ಸಿದ್ದರಾಮಯ್ಯ ಅವರು ಒಂದು ಹೇಳಿಕೆ ನೀಡಿದ್ದರು. ಹಿಂದುಳಿದ ವರ್ಗದವರು ಅಧಿಕಾರ ಕಿತ್ತುಕೊಳ್ಳಬೇಕು ಎಂದು ಹೇಳಿದ್ದರು. ಅದನ್ನೇ ಬಂಗಾರಪ್ಪ ಅಂದು ಮಾಡಿದ್ದರು. ಅವರ ನಂತರ ವೀರಪ್ಪ ಮೊಯ್ಲಿ, ಸಿದ್ದರಾಮಯ್ಯ ಅವರು ಅಧಿಕಾರ ಕಿತ್ತುಕೊಂಡರು. ಅದಕ್ಕೆ ಬಂಗಾರಪ್ಪ ಅವರು ಪ್ರೇರಣೆಯಾಗಿದ್ದರು. ಸ್ಟಿಂಗ್ ಆಪರೇಷನ್ ಮಾಡಿ ಹೀನ ರಾಜಕೀಯ ಮಾಡುವುದು ಬಿಟ್ಟು ಬಂಗಾರಪ್ಪ ಅವರ ಆದರ್ಶ ಪಾಲಿಸಬೇಕು.’
ಬಂಗಾರಪ್ಪ ಅವರ ಕಪ್ಪು ಕನ್ನಡಕದ ಹಿಂದಿನ ಕನಸು ಶಾಶ್ವತ ನನಸಾಗಬೇಕು. ಅವರ ಚಿಂತನೆಗಳು ಮುಂದುವರೆಯಬೇಕು. ಬಂಗಾರಪ್ಪ ಅವರ ಮಕ್ಕಳಾಗಿ ಅವರ ಎಲ್ಲ ಸಾಧನೆಗಳು ನಮಗೆ ಗೊತ್ತಿಲ್ಲ. ಅದರೆ ಇಂತಹ ಕಾರ್ಯಕ್ರಮಗಳ ಮೂಲಕ ಹಲವರು ಚಿಂತಕರು ಬಂಗಾರಪ್ಪ ಅವರ ಕುರಿತ ಹಲವು ಸಂಗತಿಗಳನ್ನು ತಿಳಿಸಿ ನಮ್ಮೆಲ್ಲರನ್ನು ಜಾಗೃತಗೊಳಿಸುತ್ತಿದ್ದಾರೆ.
– ಮಧು ಬಂಗಾರಪ್ಪ, ಸಚಿವ