ಅಡಿಕೆ ತೋಟ ನೆಲಸಮ, ಬಿಜೆಪಿ ಆಕ್ರೋಶ, ಆದೇಶ ಪ್ರತಿಗೆ ಆಗ್ರಹಿಸಿ ಕಚೇರಿ ಮುಂದೆ ಹೋರಾಟ

ಸೊರಬ: ತಾಲ್ಲೂಕಿನ ಆನವಟ್ಟಿ ಹೋಬಳಿಯ ಎಣ್ಣೆಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೆವರತೆಪ್ಪ ಗ್ರಾಮದ ರೈತ ದೇವರಾಜ್ ಅವರು ಹತ್ತಾರು ವರ್ಷಗಳಿಂದ ಬೆಳೆಸಿದ್ದ ಅಡಿಕೆ ತೋಟವನ್ನು ಅಧಿಕಾರಿಗಳು ಕಡಿದು ತೆರವುಗೊಳಿಸಿರುವ ಕ್ರಮ ಖಂಡಿಸಿ, ತಾಲ್ಲೂಕು ಬಿಜೆಪಿ ವತಿಯಿಂದ ಮಂಗಳವಾರ ಪ್ರತಿಭಟನಾ ಮೆರವಣಿಗೆ ಹಾಗೂ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.ಸಂಸದ ಬಿ.ವೈ.ರಾಘವೇಂದ್ರ, ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಹರತಾಳು ಹಾಲಪ್ಪ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. (ಈ ಸುದ್ದಿಯನ್ನು ಇನ್ನು 69 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಹಾಗೂ ಮಾಜಿ ಸಚಿವ ಹರತಾಳು ಹಾಲಪ್ಪ, ತಂದೆಯ ಹೆಸರಿನಲ್ಲಿ ಅಧಿಕಾರ ಅನುಭವಿಸುತ್ತಿರುವ ಸಚಿವ ಮಧು ಬಂಗಾರಪ್ಪ ಅವರಿಗೆ ರೈತರ ಬದುಕಿನ ಬಗ್ಗೆ ಎಳ್ಳಷ್ಟೂ ಅನುಕಂಪವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

BJP-Protest-against-clearing-arecanut-plantation

ಆದೇಶದ ಪ್ರತಿ ತೋರಿಸಲು ಪಟ್ಟು

ಪ್ರತಿಭಟನಾಕಾರರೊಂದಿಗೆ ತಹಶೀಲ್ದಾರ್ ಕಚೇರಿಗೆ ತೆರಳಿದ ಹರತಾಳು ಹಾಲಪ್ಪ, ‘ಲೋಕಾಯುಕ್ತರು ತೋಟ ತೆರವುಗೊಳಿಸುವಂತೆ ನೀಡಿರುವ ಆದೇಶದ ಪ್ರತಿಯನ್ನು ತೋರಿಸುವಂತೆ ಪಟ್ಟು ಹಿಡಿದರು. ಲೋಕಾಯುಕ್ತದಲ್ಲಿ ಪ್ರಕರಣ ವಿಚಾರಣಾ ಹಂತದಲ್ಲಿದ್ದರೂ ಏಕಾಏಕಿ ತೋಟ ತೆರವುಗೊಳಿಸಿರುವುದು ಸರಿಯಲ್ಲ. ಈ ಪ್ರಕರಣದಲ್ಲಿ ಅಧಿಕಾರಿಗಳನ್ನೂ ನ್ಯಾಯಾಲಯದಲ್ಲಿ ಪ್ರತಿವಾದಿಯನ್ನಾಗಿ ಮಾಡಲಾಗುವುದು’ ಎಂದು ಎಚ್ಚರಿಸಿದರು.

ಬಿಜೆಪಿ ಮುಖಂಡ ಡಾ. ಹೆಚ್.ಇ. ಜ್ಞಾನೇಶ್ ಮಾತನಾಡಿ, ಸಂವೇದನೆ ಕಳೆದುಕೊಂಡಿರುವ ಸರ್ಕಾರ ರೈತ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ದೂರಿದರು.

ನೀವು ಲೇಖನದ ಮಧ್ಯಭಾಗದಲ್ಲಿದ್ದೀರಿ. ಈ ಸುದ್ದಿಯ ಮುಂದಿನ 1 ಪ್ಯಾರಾಗಳು ಕೆಳಗಿವೆ

ಪ್ರತಿಭಟನೆಯಲ್ಲಿ ತಾಲೂಕು ಬಿಜೆಪಿ ಅಧ್ಯಕ್ಷ ಪ್ರಕಾಶ್ ಅಗಸನಗಹಳ್ಳಿ, ಯುವ ಮೋರ್ಚಾ ಅಧ್ಯಕ್ಷ ರಾಜು ಮಾವಿನಬಳ್ಳಿಕೊಪ್ಪ, ಮುಖಂಡರಾದ ಗಜಾನನರಾವ್ ಉಳವಿ, ಟಿ.ಡಿ. ಮೇಘರಾಜ್, ದೇವೇಂದ್ರಪ್ಪ ಚನ್ನಾಪುರ, ರುದ್ರಪ್ಪ ಕಡೇರ್, ಮಲ್ಲಿಕಾರ್ಜುನ ದ್ವಾರಳ್ಳಿ, ರಾಜಶೇಖರ್ ಗಾಳಿಪುರ, ಕೆ. ಅಜ್ಜಪ್ಪ, ಶಿವಕುಮಾರ್ ಕಡಸೂರು, ಸುರೇಶ್ ಉದ್ರಿ, ಸಂಜಯ್, ಜಾನಕಪ್ಪ, ಸುವರ್ಣ ಟೇಕಪ್ಪ, ಉಮೇಶ್ ಉಡುಗಣಿ, ಪರಮೇಶ್ವರ ಮಣತಿ, ಶ್ರೀಧರ್ ಶೇಟ್, ಸುಧಾ ಚೆನ್ನಾಪುರ, ಮನಸ್ವಿನಿ ಸೇರಿದಂತೆ ನೂರಾರು ಬಿಜೆಪಿ ಕಾರ್ಯಕರ್ತರು ಭಾಗವಹಿಸಿದ್ದರು.