ಸೊರಬ: ಜಾಗದ ವಿಚಾರದ ಗಲಾಟೆಯಲ್ಲಿ ಮಚ್ಚಿನಿಂದ ಹಲ್ಲೆ ನಡೆಸಿ ಮಹಿಳೆಯನ್ನು ಕೊಲೆ ಮಾಡಿದ್ದ ಆರೋಪ ಸಾಬೀತಾದ ಹಿನ್ನೆಲೆ ವ್ಯಕ್ತಿಗೆ ಜೀವಾವಧಿ ಕಾರಾಗೃಹ ಶಿಕ್ಷೆ ಮತ್ತು ₹50,000 ದಂಡ ವಿಧಿಸಿ ಶಿವಮೊಗ್ಗ ನ್ಯಾಯಾಲಯ ಆದೇಶಿಸಿದೆ.
ಸಮನವಳ್ಳಿ ಗ್ರಾಮದ ರಾಜೇಶ್ವರಿ (35) ಎಂಬುವರು 2020ರ ಆಗಸ್ಟ್ 25ರಂದು ಕುಟುಂಬದೊಂದಿಗೆ ಮನೆಯ ಮುಂದೆ ಕುಳಿತಿದ್ದಾಗ, ಅದೇ ಗ್ರಾಮದ ಮಂಜುನಾಥ (25) ಜಾಗದ ವಿಚಾರವಾಗಿ ಜಗಳ ತೆಗೆದಿದ್ದನು. ಪೊಲೀಸ್ ಠಾಣೆಗೆ ದೂರು ನೀಡುವುದಾಗಿ ರಾಜೇಶ್ವರಿ ತೆರಳುತ್ತಿದ್ದ ವೇಳೆ ಮಂಜುನಾಥ ಮಚ್ಚಿನಿಂದ ತಲೆಗೆ ಹಲ್ಲೆ ನಡೆಸಿ ಕೊಲೆ ಮಾಡಿದ್ದ. ಈ ಕುರಿತು ಆನವಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಸೊರಬ ವೃತ್ತದ ಸಿಪಿಐ ಆರ್.ಡಿ. ಮರುಳಸಿದ್ದಪ್ಪ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣ ಪತ್ರ ಸಲ್ಲಿಸಿದ್ದರು. ಸರ್ಕಾರದ ಪರವಾಗಿ ಅಭಿಯೋಜಕ ಅಣ್ಣಪ್ಪ ನಾಯಕ ವಾದ ಮಂಡಿಸಿದ್ದರು. ಶಿವಮೊಗ್ಗದ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ರವೀಂದ್ರ ಆರ್. ಅವರು ವಿಚಾರಣೆ ನಡೆಸಿ ತೀರ್ಪು ಪ್ರಕಟಿಸಿದ್ದಾರೆ ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.