ಚಂದ್ರಗುತ್ತಿ ರೇಣುಕಾಂಬಾ ದೇಗುಲದ ಕಾಣಿಕೆ ಹುಂಡಿ ಎಣಿಕೆ, ಈ ಬಾರಿ ಎಷ್ಟು ಹಣ ಸಂಗ್ರಹವಾಗಿದೆ?

ಸೊರಬ: ತಾಲ್ಲೂಕಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಚಂದ್ರಗುತ್ತಿಯ ರೇಣುಕಾಂಬಾ ದೇವಸ್ಥಾನದ ಕಾಣಿಕೆ ಹುಂಡಿ ಎಣಿಕೆ ಕಾರ್ಯ ಗುರುವಾರ ನಡೆದಿದ್ದು, ಕಳೆದ ನಾಲ್ಕು ತಿಂಗಳಲ್ಲಿ ಒಟ್ಟು ₹35.07 ಲಕ್ಷ ಕಾಣಿಕೆ ಸಂಗ್ರಹವಾಗಿದೆ.

ಕಳೆದ ಜೂನ್ ತಿಂಗಳಿನಲ್ಲಿ ಹುಂಡಿ ಎಣಿಕೆ ನಡೆಸಿದ್ದಾಗ ₹33.90 ಲಕ್ಷ ಕಾಣಿಕೆ ಸಂಗ್ರಹವಾಗಿತ್ತು. ಈ ಬಾರಿ ಶ್ರಾವಣ ಮಾಸ ಹಾಗೂ ಹಬ್ಬದ ದಿನಗಳಲ್ಲಿ ಭಕ್ತರ ಸಂಖ್ಯೆ ಹೆಚ್ಚಿದ್ದರಿಂದ ಕಾಣಿಕೆ ಪ್ರಮಾಣದಲ್ಲಿಯೂ ಗಣನೀಯ ಏರಿಕೆಯಾಗಿದೆ. ಈ ಬಾರಿ ₹35,07,390 ಕಾಣಿಕೆ ಸಂಗ್ರಹವಾಗಿದೆ. ಕಳೆದ ಬಾರಿಗೆ ಹೋಲಿಸಿದರೆ ₹1,16,810 ಹೆಚ್ಚುವರಿ ಕಾಣಿಕೆ ಹಣ ಸಂಗ್ರಹವಾಗಿದೆ ಎಂದು ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಪ್ರಮೀಳಾ ಕುಮಾರಿ ತಿಳಿಸಿದ್ದಾರೆ.

Chandragutti-Temple-Hundi-Kanike-Counting

ಹಣ ಎಣಿಕೆ ಪ್ರಕ್ರಿಯೆ ಪಾರದರ್ಶಕವಾಗಿ ನಡೆಯಲು ಕೊಠಡಿಯ ಸುತ್ತಲೂ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು. ಮುಜರಾಯಿ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು, ಗ್ರಾಮ ಆಡಳಿತಾಧಿಕಾರಿಗಳು, ಗ್ರಾಮ ಸಹಾಯಕರು ಮತ್ತು ದೇವಸ್ಥಾನದ ಸಿಬ್ಬಂದಿ ಎಣಿಕೆ ಕಾರ್ಯದಲ್ಲಿ ಉಪಸ್ಥಿತರಿದ್ದರು. ಸ್ಥಳೀಯ ಪೊಲೀಸ್ ಇಲಾಖೆಯಿಂದ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿತ್ತು.