ಶಿವಮೊಗ್ಗ ಲೈವ್.ಕಾಂ | SORABA NEWS | 26 ಜುಲೈ 2021
ತಾಲ್ಲೂಕಿನ ವರದಾ ನದಿಯ ಜಲಪ್ರಳಯದಿಂದ ಲಕ್ಕವಳ್ಳಿಯ ಜೈನರ ಪವಿತ್ರ ಕ್ಷೇತ್ರ ಮೋಕ್ಷ ಮಂದಿರ ಜೈನ ಮಠದ ಆವರಣ ಜಲದಿಗ್ಬಂದನವಾಗಿದ್ದು, ಮಠದ ಪೀಠಾಧಿಪತಿ ಶ್ರೀ ವೃಷಭಸೇನ ಭಟ್ಟಾರಕ ಸ್ವಾಮೀಜಿ ಅವರನ್ನು ಸ್ಥಳೀಯರ ಸಹಕಾರದೊಂದಿಗೆ ಸ್ಥಳಾಂತರಿಸಲಾಗಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಇಲ್ಲಿನ ಲಕ್ಕವಳ್ಳಿಯ ಶ್ರೀ ಮೋಕ್ಷ ಮಂದಿರ ಸಂಸ್ಥಾನ ಜೈನ ಮಠವು ವರದಾ-ದಂಡಾವತಿ ಸಂಗಮ ಕ್ಷೇತ್ರದ ನದಿಯ ದಂಡೆಯ ಮೇಲಿದ್ದು, ಪ್ರತಿ ಬಾರಿ ನರೆ ಉಂಟಾದಾಗ ಮಠ ಮುಳುಗಡೆಯಾಗುತ್ತದೆ. ಕಳೆದೆರಡು ದಿನಗಳಿಂದ ಸುರಿದ ಭಾರಿ ಮಳೆಗೆ ಮಠವು ಜಲಾವೃತವಾಗಿದ್ದು, ಅಪಾರ ನಷ್ಟವಾಗಿದೆ. ಮಠಕ್ಕೆ ತಡೆಗೋಡೆ ನೀರ್ಮಾಣವಾಗಬೇಕು ಎಂಬ ಶ್ರೀಗಳ ಬೇಡಿಕೆ ಈಡೇರದೇ ಇರುವುದು ಸಮಸ್ಯೆಗಳು ಬಿಗಡಾಯಿಸಲು ಮತ್ತೊಂದು ಕಾರಣವಾಗಿದೆ.
ಮೂಲ ಮಠವು ಸಂಪೂರ್ಣವಾಗಿ ನೆರೆ ಹಾವಳಿಗೆ ತುತ್ತಾಗಿದ್ದು, ಧರೆಗೆ ಉರುಳುವ ಹಂತದಲ್ಲಿದೆ.
ಶ್ರೀಗಳು ಹೇಳಿದ್ದೇನು?
ಶ್ರೀ ಕ್ಷೇತ್ರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀ ವೃಷಭಸೇನ ಭಟ್ಟಾರಕ ಸ್ವಾಮೀಜಿ, ಮಠದ ಆವರಣದಲ್ಲಿ ನಿರ್ಮಾಣ ಹಂತದ ಕಟ್ಟಡಗಳಿಗೂ ಅಭದ್ರತೆ ಕಾಡುತ್ತಿದೆ. ಪ್ರಕೃತಿ ವಿಕೋಪದಿಂದ ಇಲ್ಲಿನ ಮಂದಿರದಲ್ಲಿ ನಿರ್ಮಾಣ ಹಂತದಲ್ಲಿರುವ ಕಲ್ಯಾಣ ಮಂದಿರಕ್ಕೂ ತೊಂದರೆ ಎದುರಾಗಿದ್ದು, ಸಂಬಂಧ ಪಟ್ಟ ಇಲಾಖೆಯವರು ಈವರೆಗೂ ಯಾವುದೇ ಪರಿಹಾರ ನೀಡುವಲ್ಲಿ ಮುಂದಾಗಿಲ್ಲ. ರಾಜ್ಯ ಹಾಗೂ ಕೇಂದ್ರ ಸರ್ಕಾರ ಅಲ್ಪ ಸಂಖ್ಯಾತ ಸಮುದಾಯದ ಮಠ, ಆಶ್ರಮ ಹಾಗೂ ಮಂದಿರಗಳ ಅಭಿವೃದ್ಧಿಗೆ ಸುಮಾರು ನೂರಾರು ಕೋಟಿ ರೂ. ವರೆಗೆ ಅನುದಾನ ನೀಡುತ್ತಿವೆ. ಆದರೆ, ಈವರೆಗೂ ಶ್ರೀ ಮಠಕ್ಕೆ ಸಮರ್ಪಕವಾಗಿ ಹೆಚ್ಚಿನ ಅನುದಾನ ದೊರೆಯದೇ ಜೈನ ಮಠಗಳನ್ನು ತತ್ಸಾರ ಮನೋಭಾವದಿಂದ ನೋಡಲಾಗುತ್ತಿದೆ ಎಂದರು.
ಪೂಜಾ ಸಾಮಗ್ರಿ, ಬೆಳೆ ಬಾಳುವ ವಸ್ತುಗಳು ನೀರುಪಾಲು
ಮಠದಲ್ಲಿದ್ದ ಪೂಜಾ ಸಾಮಗ್ರಿಗಳು ಹಾಗೂ ಬೆಲೆ ಬಾಳುವ ವಸ್ತುಗಳು ನೆರೆಯ ಹಾವಳಿಗೆ ತುತ್ತಾಗಿ ನೀರು ಪಾಲಾಗಿವೆ. ಉಳಿದಂತೆ ಹಳೆಯ ಮಠದಲ್ಲಿ ಅನೇಕ ಅಮೂಲಾಗ್ರ ದಾಖಲೆಗಳು ಸಹ ನೆರೆಯ ಹಾವಳಿಗೆ ತುತ್ತಾಗಿದೆ. ಶ್ರೀ ಕ್ಷೇತ್ರದ ಅಭಿವೃದ್ಧಿಗೆ ಸ್ಥಳೀಯ ಆಡಳಿತವೂ ಈವರೆಗೂ ಒತ್ತು ನೀಡಿಲ್ಲ. ಇತ್ತೀಚೆಗೆ ಗೋಂದಿ ಹಾಗೂ ಮೂಗೂರು ಬಳಿ ಚೆಕ್ ಡ್ಯಾಂಗಳ ನಿರ್ಮಾಣದಿಂದ ನೀರಿನ ಪ್ರಮಾಣ ಹೆಚ್ಚುತ್ತಿದೆ. ಸರ್ಕಾರ ಜನ-ಜಾನುವಾರುಗಳು ಇಲ್ಲದ ಏಳೆಂಟು ಪ್ರದೇಶದಲ್ಲಿ ತಡೆಗೋಡೆ ನಿರ್ಮಿಸಿದೆ. ಆದರೆ, ಕಳೆದ ಒಂದು ದಶಕದಿಂದ ಮನವಿ ನೀಡುತ್ತಾ ಬಂದಿದ್ದರೂ ಮಠದ ರಕ್ಷಣೆಗೆ ತಡೆಗೋಡೆ ನಿರ್ಮಾಣವಾಗಿಲ್ಲ ಎಂದು ಆರೋಪಿಸಿದರು.
ಹಲವಾರು ವರ್ಷಗಳಿಂದ ನೆರೆ ಹಾವಳಿಯಿಂದ ಉಂಟಾಗುವ ಸಂಕಷ್ಟವನ್ನು ಅನುಭವಿಸುತ್ತಾ ಬಂದಿದ್ದೇವೆ. ಈ ಕುರಿತು ಮುಖ್ಯಮಂತ್ರಿಗಳು, ಸಂಸದರು, ಶಾಸಕರು ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಮುಂದಿನ ಒಂದು ತಿಂಗಳ ಒಳಗಾಗಿ ಸಂಬಂಧಿಸಿದ ಅಧಿಕಾರಿಗಳಾಗಲೀ ಅಥವಾ ಜನಪ್ರತಿನಿಧಿಗಳಾಗಲೀ ಗಮನ ಹರಿಸಿ ಶಾಶ್ವತ ಪರಿಹಾರಕ್ಕೆ ಮುಂದಾಗದಿದ್ದರೆ, ಅನಿರ್ಧಿಷ್ಟಾವಧಿ ಮುಷ್ಕರ ನಡೆಸುವುದು ಎಂದರು.
(ಶಿವಮೊಗ್ಗ ಲೈವ್.ಕಾಂ ನಮ್ಮೂರ ನ್ಯೂಸ್ ವಿಭಾಗ – ನಿಮ್ಮೂರ ನ್ಯೂಸ್‍ಗೆ ನೀವೇ ವರದಿಗಾರರು. ನಿಮ್ಮೂರ ಪ್ರಮುಖ ಘಟನೆಗಳನ್ನು ನೀವೇ ವರದಿ ಮಾಡಬಹುದು. ಫೋಟೊ, ವಿಡಿಯೋ ಸಹಿತ ವರದಿಯನ್ನು ವಾಟ್ಸಪ್ ಅಥವಾ ಈ ಮೇಲ್ ಮಾಡಬಹುದು)
ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200