ತೀರ್ಥಹಳ್ಳಿಯಲ್ಲಿ ರಾಷ್ಟ್ರ ಲಾಂಛನ ಅನಾವರಣ, ಗಾಂಧೀಜಿ ಕುರಿತು ಆರಗ ಜ್ಞಾನೇಂದ್ರ ಹೇಳಿದ್ದೇನು?

ತೀರ್ಥಹಳ್ಳಿ: ಪಟ್ಟಣ ಪಂಚಾಯಿತಿಯಿಂದ ಇಲ್ಲಿನ ಗಾಂಧಿ ಚೌಕದಲ್ಲಿ ನೂತನವಾಗಿ ಕೃಷ್ಣ ಶಿಲೆಯಲ್ಲಿ ಸ್ಥಾಪಿಸಲಾದ ರಾಷ್ಟ್ರ ಲಾಂಛನ ಅಶೋಕ ಸ್ತಂಭವನ್ನು ಸೋಮವಾರ ಸಂಜೆ ಅನಾವರಣಗೊಳಿಸಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಆರಗ ಜ್ಞಾನೇಂದ್ರ, ‘ಸಮಾಜದಲ್ಲಿ ವಿಕೃತ ಮನಸ್ಸುಗಳು ವೈಭವೀಕರಿಸಲ್ಪಡುತ್ತಿರುವ ಈ ದಿನಗಳಲ್ಲಿ ಮಹಾತ್ಮ ಗಾಂಧೀಜಿಯವರ ವಿಚಾರಧಾರೆ ಅನುಕರಣೆ ಮತ್ತು ಪಾಲನೆ ಅತ್ಯಂತ ಅಗತ್ಯವಾಗಿದೆ. ಮಹಾತ್ಮ ಗಾಂಧೀಜಿಯವರ ಬದುಕೇ ಒಂದು ಸಂದೇಶ. ಹೀಗಾಗಿ ಇಂದಿಗೂ ಅವರ ವಿಚಾರಧಾರೆಗಳು ಸ್ವಸ್ಥ ಸಮಾಜಕ್ಕೆ ಮಾರ್ಗಸೂಚಿಯಾಗಿವೆ. ಅವರಂತೆ ಸರಳತೆಯಿಂದ ಬದುಕಿ ಜನರನ್ನು ಪ್ರೀತಿಸುವ ಮನೋಭಾವ ಬೆಳೆಸಿಕೊಳ್ಳುವುದು ಅಗತ್ಯ’ ಎಂದರು.

Ashoka-Stamba-at-Gandhi Chowk

‘ರಾಷ್ಟ್ರೀಯ ಮನೋಭಾವವನ್ನು ನೆನಪಿಸುವ ಉದ್ದೇಶದಿಂದ ಹಿರಿಯರು ಸ್ಥಾಪಿಸಿದ್ದ ಈ ಲಾಂಛನ ಊರಿಗೆ ಹೆಗ್ಗುರುತಿನಂತಿದೆ. ಪಟ್ಟಣದ ಕೇಂದ್ರ ಸ್ಥಾನಕ್ಕೆ ಶೋಭೆ ತರುವಂತಿದೆ. ಇದರ ಘನತೆಗೆ ಚ್ಯುತಿಯಾಗದಂತೆ ಶ್ರದ್ಧೆಯಿಂದ ನಿರ್ವಹಿಸುವ ಹೊಣೆಗಾರಿಕೆ ಮುಖ್ಯವಾಗಿದೆ’ ಎಂದು ಹೇಳಿದರು.

ಸ್ವಾತಂತ್ರ್ಯ ಪೂರ್ವದಲ್ಲಿ ಮಹಾತ್ಮ ಗಾಂಧೀಜಿಯವರು ಪಟ್ಟಣಕ್ಕೆ ಭೇಟಿ ನೀಡಿ 100 ವರ್ಷ ತುಂಬುತ್ತಿರುವ ಸಂದರ್ಭ ಕೃಷ್ಣ ಶಿಲೆಯಲ್ಲಿ ಈ ರಾಷ್ಟ್ರ ಲಾಂಛನ ಸ್ಥಾಪನೆ ಮಾಡಿರುವುದು ಇತಿಹಾಸ ಮರುಕಳಿಸಿದಂತಾಗಿದೆ. ಈ ಜಾಗದಲ್ಲಿ ಸಾಂಸ್ಕೃತಿಕ ಚಟುವಟಿಕೆಗಳೂ ನಡೆಯುವಂತಾಗಲಿ

– ಆರ್.ಎಂ. ಮಂಜುನಾಥ ಗೌಡ, ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ

ಸಮಾರಂಭದಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ರತ್ನಾಕರ ಶೆಟ್ಟಿ, ಉಪಾಧ್ಯಕ್ಷೆ ಗೀತಾ ರಮೇಶ್, ಮುಖ್ಯಾಧಿಕಾರಿ ಡಿ. ರಾಜು, ಪಟ್ಟಣ ಪಂಚಾಯಿತಿ ಸದಸ್ಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.