ತೀರ್ಥಹಳ್ಳಿ: ಗಾಂಧಿನಗರದಲ್ಲಿ ಕಳೆದ ವಾರ ಸಂಭವಿಸಿದ ಗುಡ್ಡ ಕುಸಿತ ದುರ್ಘಟನೆಯಲ್ಲಿ ಒಂದೇ ಕುಟುಂಬದ ಮೂವರು ಮೃತಪಟ್ಟಿದ್ದು, ಸಚಿವ ಮಧು ಬಂಗಾರಪ್ಪ ಅವರು ಸ್ಥಳಕ್ಕೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ. ಮೃತರಿಗೆ ತಲಾ ₹5 ಲಕ್ಷದಂತೆ ಕುಟುಂಬಕ್ಕೆ ಒಟ್ಟು ₹15 ಲಕ್ಷ ಪರಿಹಾರ ನೀಡಲಾಗಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ತಿಳಿಸಿದರು.
ತೀರ್ಥಹಳ್ಳಿಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಸಂತ್ರಸ್ತ ಕುಟುಂಬಗಳಿಗೆ ತಾತ್ಕಾಲಿಕವಾಗಿ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕಿದೆ. ನಾಲ್ಕು ತಿಂಗಳವರೆಗೆ ಬಾಡಿಗೆ ಪಾವತಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಘಟನೆ ನಡೆದ ದಿನವೇ ಮುಖ್ಯಮಂತ್ರಿಗಳಿಗೆ ಮಾಹಿತಿ ನೀಡಿ ಪರಿಹಾರಕ್ಕಾಗಿ ಮನವಿ ಮಾಡಿಕೊಳ್ಳಲಾಗಿತ್ತು ಎಂದರು.

ಮನೆ ಕಳೆದುಕೊಂಡ ಸಂತ್ರಸ್ತ ರಮೇಶ್ ಅವರಿಗೆ ಹಕ್ಕುಪತ್ರವಿದೆ. ಅವರಿಗೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕು. ಆದರೆ ಸದ್ಯ ಸರ್ಕಾರ ನೀಡುತ್ತಿರುವ ₹1.20 ಲಕ್ಷ ಪರಿಹಾರದ ಮೊತ್ತ ಸಾಲದು. ಅಪಾಯಕಾರಿ ಸ್ಥಳದಲ್ಲಿರುವ ಮೂರು ಮನೆಗಳನ್ನು ಕೂಡಲೇ ಸ್ಥಳಾಂತರ ಮಾಡಬೇಕಿದೆ ಎಂದು ಆಗ್ರಹಿಸಿದರು.
ತಾಲೂಕಿನ ಬುಕ್ಲಾಪುರದಲ್ಲಿ ಗ್ರಾಮ ಠಾಣಾ ಜಾಗವಿದೆ. ಅಲ್ಲಿ ನಿವೇಶನ ನೀಡಿ ಮನೆ ಕಟ್ಟಿಕೊಳ್ಳಲು ವ್ಯವಸ್ಥೆ ಮಾಡಬೇಕಿದೆ. ಸರ್ಕಾರ ಹಾಗೂ ನಾವೆಲ್ಲರೂ ಸೇರಿ ಸಂತ್ರಸ್ತರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಿಕೊಡಲಿದ್ದೇವೆ ಎಂದು ಆರಗ ಜ್ಞಾನೇಂದ್ರ ತಿಳಿಸಿದರು.