ಶಿವಮೊಗ್ಗ ಲೈವ್.ಕಾಂ | HOSANAGARA / SAGARA NEWS | 3 JUNE 2021
ಸ್ಥಳ : ವಾರಂಬಳ್ಳಿ , ಹೊಸನಗರ ತಾಲೂಕು
ವರ್ಕ್ ಫ್ರಂ ಹೋಂ ಹಿನ್ನೆಲೆ ಬೆಂಗಳೂರಿನಿಂದ ಊರಿಗೆ ಬಂದಿರುವ ಸಿಂಧು. ಮನೆ ಬಳಿ ಮೊಬೈಲ್ ನೆಟ್ ವರ್ಕ್ ಸಿಗುತ್ತಿಲ್ಲ. ಊರಾಚೆಗೆ ಸಿಗ್ನಲ್ ಸಿಗುವ ಕಡೆ, ಟೆಂಟ್ ನಿರ್ಮಿಸಿ ಕೆಲಸ ಮಾಡುತ್ತಿದ್ದಾರೆ.
ಸ್ಥಳ : ವಾರಂಬಳ್ಳಿ, ಹೊಸನಗರ ತಾಲೂಕು
ಅಪರೂಪಕ್ಕೆ ಸಿಗುತ್ತಿದ್ದ ನೆಟ್ ವರ್ಕ್ ಮಳೆ ಸುರಿದಿದ್ದರಿಂದ ಮಾಯವಾಗಿತ್ತು. ಪುನಃ ನೆಟ್ ವರ್ಕ್ ಸಿಕ್ಕಿದ್ದರಿಂದ ಈ –ಮೇಲ್ ಚೆಕ್ ಮಾಡಿದ ವಿನಾಯಕ್ ಪ್ರಭು ಅವರಿಗೆ ಶಾಕ್ ಕಾದಿತ್ತು. ಸಂಸ್ಥೆಯೊಂದರಲ್ಲಿ ಸಂದರ್ಶನಕ್ಕೆ ಆಹ್ವಾನ ಬಂದಿತ್ತು. ಆದರೆ ನೆಟ್ ವರ್ಕ್ ಸಿಕ್ಕು ಈ – ಮೇಲ್ ನೋಡುವಷ್ಟರಲ್ಲಿ ಸಂದರ್ಶನದ ದಿನಾಂಕವೇ ಮುಗಿದು ಹೋಗಿತ್ತು.
ಸ್ಥಳ : ಹಲಗೆರೆ, ಸಾಗರ
ಶಾಲೆ, ಕಾಲೇಜುಗಳು ಬಂದ್ ಆಗಿವೆ. ಎಲ್ಲೆಲ್ಲೂ ಆನ್ ಲೈನ್ ಕ್ಲಾಸ್ಗಳದ್ದೆ ಭರಾಟೆ. ಹಲಗೆರೆಯ ಸಂತೋಷ್, ಸಾಮಾನ್ಯ ದಿನಗಳಲ್ಲಿ ತಮ್ಮ ಮನೆಯಿಂದ ನೆಟ್ ವರ್ಕ್ಗಾಗಿ 12 ಕಿ.ಮೀ ಹೋಗಬೇಕಿತ್ತು. ಈಗ ಕಠಿಣ ಲಾಕ್ ಡೌನ್ ಇದೆ. ಪೊಲೀಸರು ಊರಾಚೆ ಹೋಗಲು ಬಿಡುತ್ತಿಲ್ಲ.
ಡಿಜಿಟಿಲ್ ಇಂಡಿಯಾ ಕಾರ್ಯಕ್ರಮದ ಕುರಿತು ಸರ್ಕಾರಗಳು ದೊಡ್ಡ ಮಟ್ಟದ ಪ್ರಚಾರ ಮಾಡಿ, ಭರವಸೆಯನ್ನು ಮೂಡಿಸುತ್ತಿವೆ. ಆದರೆ ಹೊಸನಗರ, ಸಾಗರ, ತೀರ್ಥಹಳ್ಳಿಯ ಹಲವು ಭಾಗಕ್ಕೆ ಈತನಕ ಮೊಬೈಲ್ ನೆಟ್ ವರ್ಕ್ ಕೊಡಲು ಸಾಧ್ಯವಾಗಿಲ್ಲ.
ವಾರಂಬಳ್ಳಿಯ ಸಿಂದೂ ಅವರು ಬೆಂಗಳೂರಿನ ಪ್ರತಿಷ್ಠಿತ ಚಾರ್ಟೆಡ್ ಅಕೌಂಟೆಂಟ್ ಒಬ್ಬರ ಬಳಿ ಅಕೌಂಟೆಂಟ್ ಆಗಿದ್ದಾರೆ. ಉದ್ಯಮಗಳು, ಉದ್ಯಮಿಗಳ ಅಕೌಂಟ್ಗಳನ್ನು ಮ್ಯಾನೇಜ್ ಮಾಡಬೇಕಾಗುತ್ತದೆ. ಹಾಗಾಗಿ ಪ್ರತಿದಿನ ಮೀಟಿಂಗ್, ಫೈಲಿಂಗ್ಗಳನ್ನು ಮಾಡಬೇಕು. ನೆಟ್ ವರ್ಕ್ ಸಮಸ್ಯೆ ಇರುವುದರಿಂದ ತಮ್ಮ ಮನೆಯಿಂದ ಒಂದು ಕಿ.ಮೀ ದೂರದಲ್ಲಿ ಟೆಂಟ್ ನಿರ್ಮಿಸಿಕೊಂಡು ಕೆಲಸ ಮಾಡುತ್ತಿದ್ದಾರೆ. ನೆಟ್ ವರ್ಕ್ ಸಮಸ್ಯೆ ಕರಾಳತೆಗೆ ಇದು ಸಾಕ್ಷಿಯಾಗಿದೆ.
ಪ್ರಧಾನಿಗೆ ಪತ್ರ ಬರೆದಿದ್ದಾಯ್ತು
ವಾರಂಬಳ್ಳಿ ಸುತ್ತಮುತ್ತ ನೆಟ್ ವರ್ಕ್ ಸಮಸ್ಯೆ ಬಗ್ಗೆ ವಿನಾಯಕ್ ಪ್ರಭು ಅವರು ಪ್ರಧಾನಿ ಪತ್ರೆ ಬರೆದಿದ್ದರು. ಸಮಸ್ಯೆ ಬಗೆಹರಿಯುವ ಭರವಸೆ ಸಿಕ್ಕಿತ್ತು. ಇದರಿಂದ ಪ್ರಭಾವಿತರಾಗಿ ಸುತ್ತಮುತ್ತಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಲವರು ಪ್ರಧಾನಿ ಕಚೇರಿಗೆ ಲೆಟರ್ ಬರೆದು ಸಮಸ್ಯೆ ತಿಳಿಸಿದ್ದರು. ನಾಲ್ಕೈದು ವರ್ಷ ಕಳೆದರೂ ಸಮಸ್ಯೆ ಬಗೆಹರಿಯುವ ಲಕ್ಷಣ ಗೋಚರಿಸಿಲ್ಲ.
ಲಾಕ್ ಡೌನ್ ಹೆಚ್ಚಾಯ್ತು ಸಂಕಷ್ಟ
ಲಾಕ್ ಡೌನ್ ಘೋಷಣೆಯಾಗುತ್ತಿದ್ದಂತೆ ಬಹುತೇಕ ಕಂಪನಿಗಳು ವರ್ಕ್ ಫ್ರಂ ಹೋಂ ಘೋಷಿಸಿದವು. ಬೆಂಗಳೂರು ಸೇರಿದಂತೆ ವಿವಿಧ ಪಟ್ಟಣಗಳಲ್ಲಿ ಕೆಲಸ ಮಾಡುತ್ತಿದ್ದವರು ಊರಿಗೆ ಬಂದರು. ಆರಂಭದಲ್ಲಿ ನೆಟ್ವರ್ಕ್ಗಾಗಿ ನಂಟರು, ಸ್ನೇಹಿತರ ಮನೆಗಳನ್ನು ಆಶ್ರಯಿಸಿದ್ದರು. ಈಗ ಜಿಲ್ಲೆಯಲ್ಲಿ ಕಠಿಣ ಲಾಕ್ ಡೌನ್ ಜಾರಿಯಾಗಿದೆ. ಊರು ಬಿಟ್ಟು ಹೊರಗೆ ಹೋಗುವಂತಿಲ್ಲ. ಇದರಿಂದ ನೆಟ್ ವರ್ಕ್ ಸಮಸ್ಯೆ ಉಲ್ಬಣಿಸಿದೆ.
ಜಿಲ್ಲೆಯಲ್ಲಿ ಮೊಬೈಲ್ ನೆಟ್ವರ್ಕ್ ಸಮಸ್ಯೆ ಕುರಿತು ಸಂಸದ ರಾಘವೇಂದ್ರ ಹಲವು ಭಾರಿ ಸಭೆ ನಡೆಸಿದ್ದರು. ಆದರೆ ಸಭೆಗಳು ಫಲ ಕೊಟ್ಟಂತೆ ಕಾಣುತ್ತಿಲ್ಲ. ಬಿಎಸ್ಎನ್ಎಲ್ ಅಧಿಕಾರಿಗಳು ಸಭೆಗಳಲ್ಲಿ ನೆಟ್ ವರ್ಕ್ ವಿಸ್ತರಣೆ ಕುರಿತು ಗಂಭೀರವಾಗಿ ಚರ್ಚಿಸುತ್ತಾರೆ. ಆದರೆ ವಾಸ್ತವದಲ್ಲಿ ಕಾರ್ಯಗತವಾಗುವುದೆ ಇಲ್ಲ. ಖಾಸಗಿ ನೆಟ್ವರ್ಕ್ಗಳು ಲಾಭದ ಗುರಿ ಹೊಂದಿವೆ. ಹಾಗಾಗಿ ಅವುಗಳು ಕೂಡ ನೆಟ್ ವರ್ಕ್ ಸ್ಥಾಪಿಸುತ್ತಿಲ್ಲ. ಒಟ್ಟಿನಲ್ಲಿ ಸರ್ಕಾರ, ಅಧಿಕಾರಿಗಳು, ಖಾಸಗಿ ಸಂಸ್ಥೆಗಳು ನಿರ್ಲಕ್ಷಕ್ಕೆ ಗುರಿಯಾಗಿ ಈ ಭಾಗದ ಜನರು ನೆಟ್ ವರ್ಕ್ ಇಲ್ಲದೆ ಬದುಕು ದೂಡುವಂತಾಗಿದೆ. ಸರ್ಕಾರದ ಡಿಜಿಟಲ್ ಇಂಡಿಯಾ ಕಲ್ಪನೆಯನ್ನೇ ಇದು ಅಣಕಿಸುವಂತಿದೆ.
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]