ತೀರ್ಥಹಳ್ಳಿ: ಮಳೆ ಮಾಪನ ಯಂತ್ರಗಳು ಹಾಳಾಗಿ ವರ್ಷಗಳೇ ಕಳೆದರೂ ದುರಸ್ತಿ ಮಾಡುತ್ತಿಲ್ಲ. ಮಳೆಗೆ ಬೆಳೆ ಹಾಳಾಗುವ ಮುನ್ನ ಯಂತ್ರ ದುರಸ್ತಿ ಮಾಡಬೇಕು. ಇಲ್ಲದಿದ್ದರೆ ನಾಡಕಚೇರಿ, ಬೆಜ್ಜವಳ್ಳಿ ಗ್ರಾಮ ಪಂಚಾಯಿತಿಗೆ ಬೀಗ ಹಾಕುತ್ತೇವೆ ಎಂದು ರೈತರು ಆಕ್ರೋಶ ಹೊರಹಾಕಿದರು. ಬಿಜೆಪಿ ಯುವ ಮೋರ್ಚಾ ತಾಲ್ಲೂಕು ಘಟಕದ ಪ್ರಧಾನ ಕಾರ್ಯದರ್ಶಿ ಗಬಡಿ ಪ್ರದೀಪ್ ನೇತೃತ್ವದಲ್ಲಿ ರೈತರು ಪ್ರತಿಭಟನೆ ನಡೆಸಿದರು.
ರಾಜ್ಯ ಸರ್ಕಾರ ಮಳೆ ಮಾಪನ ಕೇಂದ್ರಗಳನ್ನು ದುರಸ್ತಿ ಮಾಡುತ್ತಿಲ್ಲ. ಇದರಿಂದ ರೈತರಿಗೆ ಅನ್ಯಾಯ ಎಸಗುತ್ತಿದೆ ಎಂದು ಪ್ರತಿಭಟನಾಕಾರರು ದೂರಿದರು. ನಿಖರ ಮಳೆಯ ಮಾಹಿತಿ ಇಲ್ಲದ ಕಾರಣ ಬೆಳೆ ವಿಮೆ ಕಂಪನಿಗಳಿಗೆ ಲಾಭ ಮಾಡಿಕೊಡುವ ಚಾಳಿ ಮುಂದುವರಿದಿದೆ. ಸರಿಯಾದ ವರದಿ ಸಿಗದ ಕಾರಣ ಕಳೆದ ಸಾಲಿನಲ್ಲಿ ಹಾನಿಯಾದ ಬೆಳೆಗೆ ಪರಿಹಾರ ನೀಡಿಲ್ಲ. ಇದರಿಂದ ರೈತರಿಗೆ ನಷ್ಟವಾಗಿದೆ ಎಂದು ಅವರು ಹೇಳಿದರು.
ಗ್ರಾಮ ಪಂಚಾಯಿತಿ ಕಟ್ಟಡದ ಚಾವಣಿ ಮೇಲೆ ಈ ಮಾಪನಗಳನ್ನು ಅಳವಡಿಸಲಾಗಿದೆ. ಇವುಗಳನ್ನು ನಿರ್ವಹಣೆ ಮಾಡಬೇಕಾದ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣೆ ಮಂಡಳಿಗೆ ದೂರು ನೀಡಿದರೂ ಕ್ರಮ ಕೈಗೊಂಡಿಲ್ಲ. ಇಲಾಖಾವಾರು ಮಾಪನ ನಿರ್ವಹಣೆ ಬಗ್ಗೆ ಗೊಂದಲಗಳು ಇವೆ. ಜಿಲ್ಲಾಧಿಕಾರಿಗಳು ತಕ್ಷಣ ಈ ಗೊಂದಲ ನಿವಾರಿಸಿ ಸಮಸ್ಯೆ ಬಗೆಹರಿಸಬೇಕು ಎಂದು ಅವರು ಒತ್ತಾಯಿಸಿದರು. ನಾಡಕಚೇರಿ ಉಪತಹಶೀಲ್ದಾರ್ ಶಿವಪ್ರಸಾದ್ ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸಿದರು.
ಪ್ರತಿಭಟನೆಯಲ್ಲಿ ಬೆಜ್ಜವಳ್ಳಿ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಸುಬ್ರಮಣ್ಯ, ರೈತ ಮುಖಂಡರಾದ ಪ್ರಸನ್ನ ತನಿಕಲ್, ಸುದೀಪ್ ವಳಗೇರಿ, ಸತ್ಯನಾರಾಯಣ ಕೂಡಿಗೆ, ಸುದೀಪ್ ದಬ್ಬಣಗದ್ದೆ ಇದ್ದರು.

