ತೀರ್ಥಹಳ್ಳಿ: ತಾಲೂಕಿನ ಹೊದಲ-ಅರಳಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಪ್ಪಲು ಗ್ರಾಮದಲ್ಲಿ ಸುರಿದ ಭಾರಿ ಗಾಳಿ ಮಳೆಗೆ ಬೃಹತ್ ಮರವೊಂದು ಉರುಳಿ ಮನೆ ಹಾಗೂ ದನದ ಕೊಟ್ಟಿಗೆಯ ಮೇಲೆ ಬಿದ್ದಿದೆ.
ಹೊದಲ ಅರಳಾಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಕೊಪ್ಪಲು ಗ್ರಾಮದ ಕೆ.ಆರ್.ಶ್ರೀನಿವಾಸ್ ಅವರ ಮನೆ ಮೇಲೆ ಮರ ಬಿದ್ದಿದ್ದು. ಭಾರಿ ಹಾನಿಯಾಗಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಹೆದ್ದಾರಿಗೆ ಅಡ್ಡ ಬಿದ್ದ ಮರ
ಇನ್ನು, ರಾಷ್ಟ್ರೀಯ ಹೆದ್ದಾರಿ 169ರಲ್ಲಿ ತೂದೂರು ಬಳಿ ಮರವೊಂದು ರಸ್ತೆಗೆ ಉರುಳಿ ಬಿದ್ದಿದೆ. ಹೆದ್ದಾರಿ ಪಕ್ಕದಲ್ಲಿ ಅಪಾಯಕಾರಿಯಾಗಿದ್ದ ಈ ಮರವನ್ನು ತೆರವುಗೊಳಿಸುವಂತೆ ಅರಣ್ಯ ಇಲಾಖೆಗೆ ಸ್ಥಳೀಯರು ಹಲವು ಬಾರಿ ಮನವಿ ಮಾಡಿದ್ದರು. ಆದರೆ ಯಾವುದೇ ಕ್ರಮ ಕೈಗೊಂಡಿರಲಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಾಲೂಕಿನಲ್ಲಿ ಕಳೆದ ವರ್ಷ ಮರ ಬಿದ್ದು ವಿವಿಧ ದುರ್ಘಟನೆಗಳಲ್ಲಿ ಏಳಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದರು. ಈ ಬಾರಿ ಮಳೆಗಾಲದಲ್ಲಿ ಅಂತಹ ದುರ್ಘಟನೆಗಳು ಸಂಭವಿಸದಂತೆ ತಡೆಗಟ್ಟಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.