ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA NEWS | 4 ಡಿಸೆಂಬರ್ 2021
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಸಚಿವ ಈಶ್ವರಪ್ಪ ಎಷ್ಟು ಪರ್ಸೆಂಟ್ ತೆಗೆದುಕೊಳ್ಳುತ್ತಾರೆ ಎಂದು ಕೇಳಿ. ಅವರೇನಾದರೂ ಇಲ್ಲ ಎಂದರೆ ಪರ್ಸೆಂಟೇಜ್ ಕೊಟ್ಟವರನ್ನು ಕರೆದು ತಂದು ನಿಲ್ಲಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಾಂಬ್ ಸಿಡಿಸಿದ್ದಾರೆ.
ಶಿವಮೊಗ್ಗದ ಸರ್ಜಿ ಕನ್ವೆಷನ್ ಹಾಲ್’ನಲ್ಲಿ ವಿಧಾನ ಪರಿಷತ್ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಈ ಸರ್ಕಾರದಲ್ಲಿ ಎಲ್ಲದಕ್ಕೂ ಪರ್ಸೆಂಟೇಜ್ ಕೊಡಬೇಕು. ಸಚಿವ ಈಶ್ವರಪ್ಪ ಅವರು ಪರ್ಸೆಂಟ್ ತೆಗೆದುಕೊಳ್ಳುತ್ತಾರೆ. ಒಂದು ವೇಳೆ ಅವರು ಇಲ್ಲ ಎಂದು ಹೇಳಿದರೆ ಪರ್ಸೆಂಟೇಜ್ ಕೊಟ್ಟವರನ್ನು ಕರೆದು ತಂದು ನಿಲ್ಲಿಸುತ್ತೇನೆ ಎಂದರು.
‘ಮಾನ ಮರ್ಯಾದೆ ಸ್ವಾಭಿಮಾನವಿಲ್ಲ’
ಈಶ್ವರಪ್ಪಗೆ ಮಾನಮರ್ಯಾದೆ ಇಲ್ಲ ಸ್ವಾಭಿಮಾನ ಇಲ್ಲ. ತನಗೆ ಕೊಟ್ಟ ಅನುದಾನ ಎಲ್ಲಾ ಯಡಿಯೂರಪ್ಪ ತೆಗೆದುಕೊಂಡಿದ್ದಾರೆ ಎಂದು ರಾಜ್ಯಪಾಲರಿಗೆ ಪತ್ರ ಬರೆದು ಸುಮ್ಮನೆ ಕುಳಿತಿದ್ದರು. ಈಶ್ವರಪ್ಪ ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಸ್ವಾಭಿಮಾನ ಇದ್ದಿದ್ದರೆ ಪ್ರತಿಭಟಿಸಿ ರಾಜೀನಾಮೆ ಕೊಟ್ಟು ಹೋಗಬೇಕಿತ್ತು. ಸ್ವಾಭಿಮಾನ ಇಲ್ಲದವರು ಅಧಿಕಾರದಲ್ಲಿ ಕೂತಿದ್ದಾರೆ ಎಂದು ಕುಟುಕಿದರು. ಈಶ್ವರಪ್ಪ ಬ್ರೈನ್ ಗೂ ನಾಲಿಗೆಗೂ ಲಿಂಕ್ ಇಲ್ಲ. ಎನೇನೋ ಮಾತಾಡುತ್ತಾ ಇರುತ್ತಾರೆ ಎಂದರು.
‘ರಾಜಕೀಯ ಸನ್ಯಾಸ ಸ್ವೀಕರಿಸ್ತೀನಿ’
ನಾನು 12 ವರ್ಷ ಹಣಕಾಸು ಮಂತ್ರಿಯಾಗಿದ್ದೆ. ಆ ಸಮಯದಲ್ಲಿ ಹಣ ಬಿಡುಗಡೆ ಮಾಡಲು ನಾನು ಲಂಚ ತೆಗೆದುಕೊಂಡಿದ್ದೇನೆ ಯಾರಾದರೂ ಗುತ್ತಿಗೆದಾರ ಹೇಳಿದರೆ ರಾಜಕೀಯ ಸನ್ಯಾಸ ಸ್ವೀಕರಿಸುತ್ತೇನೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಸವಾಲು ಹಾಕಿದರು.
40 ಪರ್ಸೆಂಟೇಜ್ ಪಾಲನ್ನು ಕೊಟ್ಟರೆ ಈ ಸರ್ಕಾರದಲ್ಲಿ ಹಣ ಬಿಡುಗಡೆಯಾಗುತ್ತದೆ. ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಮೋದಿಯವರಿಗೆ ಈ ಕುರಿತ ಪತ್ರ ಬರೆದಿದ್ದಾರೆ. ನಮ್ಮ ಸರ್ಕಾರದಲ್ಲಿ ಈ ರೀತಿ ಆಗಿತ್ತಾ? ಯಾವುದೇ ಇಲಾಖೆಯಲ್ಲಿ 10 ರಿಂದ 15ಪರ್ಸೆಂಟ್ ಕಮಿಷನ್ ಕೊಡದೆ ಹಣ ಬಿಡುಗಡೆಯಾಗಲ್ಲ.
ಯಡಿಯೂರಪ್ಪ ಹಡಬಿಟ್ಟಿ ದುಡ್ಡು ತೆಗೆದುಕೊಂಡು ಬಂದು ಆಪರೇಷನ್ ಕಮಲ ಮಾಡಿದ್ದಾರೆ. ಯಡಿಯೂರಪ್ಪ ಯಾವಾಗಲೂ ಹಿಂಬಾಗಿಲಿನಿಂದಲೇ ಅಧಿಕಾರಕ್ಕೆ ಬಂದಿದ್ದಾರೆ. ಬಿಜೆಪಿಯಂತಹ ಮಾನಗೆಟ್ಟ ಜನ ಬೇರೆಲ್ಲಿಯೂ ಇಲ್ಲ. ಅಪರೇಷನ್ ಕಮಲ ಮಾಡುವುದೇ ದೊಡ್ಡ ಸಾಹಸ ಎಂದುಕೊಂಡಿದ್ದಾರೆ. ಕೈಮುಗಿದು ಕೇಳಿಕೊಳ್ಳುತ್ತೇನೆ ದಯಮಾಡಿ ಬಿಜೆಪಿ ಯವರಿಗೆ ಮತ ಹಾಕಬೇಡಿ ಎಂದು ಮನವಿ ಮಾಡಿದರು.
‘ಯಡಿಯೂರಪ್ಪ, ಬೊಮ್ಮಾಯಿಗೆ ಪ್ರಶ್ನಿಸುವ ಧಮ್ ಇಲ್ಲ’
15 ಹಣಕಾಸು ಆಯೋಗಕ್ಕೂ ಮುನ್ನ ನಮ್ಮ ಪಾಲು 70 ರಿಂದ 80 ಸಾವಿರ ಕೋಟಿ ಬರುತಿತ್ತು. ಮೋದಿ ಆಡಳಿತದಲ್ಲಿ 40 ಸಾವಿರ ಕೋಟಿ ಮಾತ್ರ ಬರುತ್ತಿದೆ. ಯಡಿಯೂರಪ್ಪ, ಬೊಮ್ಮಾಯಿಗೆ ಪ್ರಶ್ನಿಸುವ ಧಮ್ ಇಲ್ಲ. ಒಂದು ವೇಳೆ ಮನಮೋಹನ್ಸಿಂಗ್ ಅವರು ನರೇಗಾ ಯೋಜನೆ ಕೊಡದೆ ಇದ್ದರೆ, ಗ್ರಾಪಂಗಳಲ್ಲಿ ಒಂದು ರೂಪಾಯಿ ಇರುತ್ತಿರಲಿಲ್ಲ. ಇದರಿಂದ ಗ್ರಾಮೀಣ ಪ್ರದೇಶದವರಿಗೆ ಉದ್ಯೋಗ ಸಿಕ್ಕಂತಾಯಿತು ಎಂದರು.
ನಮ್ಮ ಕಾಲದಲ್ಲಿ ವರ್ಷಕ್ಕೆ 3 ಲಕ್ಷ ಮನೆ ಕಟ್ಟಿಸುತ್ತಿದ್ದೆವು 5 ವರ್ಷದಲ್ಲಿ 15 ಲಕ್ಷ ಮನೆ ಕಟ್ಟಿಸಿದ್ದೇವೆ. ಬಡವರಿಗೆ ಒಂದು ಮನೆ,ನಿವೇಶನ ಕೊಡಲು ಆಗದೇ ಇದ್ದವರು ಯಾಕೆ ಅಧಿಕಾರದಲ್ಲಿರಬೇಕು ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
‘ಸುಳ್ಳು ಹೇಳುವ ಪ್ರಧಾನಿ’
ಮೋದಿಯವರ ಅಚ್ಚೇ ದಿನ ಸಾಮಾನ್ಯ ಜನ ಬದುಕು ನಡೆಸುವುದೇ ದುಬಾರಿಯಾಗಿದೆ. ವರ್ಷಕ್ಕೆ ಎರಡು ಕೋಟಿಯಂತೆ 16 ಕೋಟಿ ಕೆಲಸ ಕೊಡಬೇಕಿತ್ತು. ಹೋಗಿ ಕೇಳಿದರೆ ಪಕೋಡಾ ಮಾರಿ ಎನ್ನುತ್ತಾರೆ. ಮೋದಿಯಂತಹ ಸುಳ್ಳು ಹೇಳುವ ಪ್ರಧಾನಿಯನ್ನು ನಾನು ಬೇರೆಲ್ಲಿಯೂ ನೋಡಿಲ್ಲ. ಮನ್ ಕಿ ಬಾತ್ ಎನ್ನುತ್ತಾರೆ. ಆದರೆ ಜನಗಳ ಮುಂದೆಯೇ ಬರುವುದಿಲ್ಲ. ಕೊರೊನಾ ಸಲಕರಣೆಗಳಲ್ಲಿಯೂ ಲಂಚ ಹೊಡೆದರು. ಕೊರೊನಾ ಬಂದಾಗ ಚಪ್ಪಾಳೆ ತಟ್ಟಿ, ದೀಪ ಹಚ್ಚಿ ಎಂದರು. ಇವರ ಬೇಜವಾಬ್ದಾರಿತನದಿಂದ 50 ಲಕ್ಷ ಮಂದಿ ಸಾವಿಗೀಡಾದರು ಎಂದು ವಾಗ್ದಾಳಿ ನಡೆಸಿದರು. ಆರ್.ಪ್ರಸನ್ನಕುಮಾರ್ ರವರಿಗೆ ಮತ ನೀಡುವ ಮೂಲಕ ಈಶ್ವರಪ್ಪನವರಿಗೆ ಪಾಠ ಕಲಿಸಬೇಕು ಎಂದು ಕರೆ ಕೊಟ್ಟರು.