SHIVAMOGGA LIVE NEWS | 6 NOVEMBER 2023
SHIMOGA : ರೈಲ್ವೆ ನಿಲ್ದಾಣದ ಬಳಿ ಅನುಮಾನಾಸ್ಪದ ಬಾಕ್ಸ್ (Suspicious Box) ಪತ್ತೆ ಪ್ರಕರಣ ನಗರದಲ್ಲಿ ಆತಂಕ ಮತ್ತು ಕುತೂಹಲ ಮೂಡಿಸಿದೆ. 17 ಗಂಟೆ ಕಾರ್ಯಾಚರಣೆ ಬಳಿಕ ಬಾಕ್ಸ್ ತೆಗೆದು ಒಳಗಿದ್ದದ್ದು ‘ಟೇಬಲ್ ಸಾಲ್ಟ್ ಮತ್ತು ತ್ಯಾಜ್ಯ ವಸ್ತು’ ಎಂದು ಪೊಲೀಸ್ ಇಲಾಖೆ ತಿಳಿಸಿದೆ. ಇದರ ನಡುವೆ ಕಾರ್ಯಾಚರಣೆಯ ರೀತಿ, ವಿಳಂಬ ಧೋರಣೆ, ಆರೋಪಗಳು, ಜನರ ಅಸಹನೆ, ಕುತೂಹಲ ಎಲ್ಲವು ವ್ಯಕ್ತವಾಗಿವೆ. ಅವುಗಳ ಹೈಲೈಟ್ ಇಲ್ಲಿದೆ.
17 ಗಂಟೆಯ ಕಾರ್ಯಾಚರಣೆ
ವಾರಸುದಾರರಿಲ್ಲದ ಬಾಕ್ಸ್ಗಳ ಕುರಿತು ರೈಲ್ವೆ ನಿಲ್ದಾಣದ ಆಟೋ ಚಾಲಕರು ಭಾನುವಾರ ಬೆಳಗ್ಗೆ 11 ಗಂಟೆಗೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಮೇಡ್ ಇನ್ ಬಾಂಗ್ಲಾದೇಶ ಎಂದು ಬಾಕ್ಸ್ ಮೇಲೆ ಬರೆದಿದ್ದರಿಂದ ಆತಂಕ ಉಂಟಾಗಿತ್ತು. ಪೊಲೀಸ್ ಸಿಬ್ಬಂದಿ, ಜಿಲ್ಲಾ ಪೊಲೀಸ್ ಇಲಾಖೆಯ ಡಾಗ್ ಸ್ಕ್ವಾಡ್, ಬಾಂಬ್ ಸ್ಕ್ವಾಡ್ ಸ್ಥಳಕ್ಕೆ ದೌಡಾಯಿಸಿದವು. ಮುನ್ನೆಚ್ಚರಿಕೆ ಕ್ರಮವಾಗಿ ಬಾಕ್ಸ್ ಇದ್ದ ಭಾಗದಲ್ಲಿ ಜನರ ಓಡಾಟ ನಿಯಂತ್ರಿಸಲಾಯಿತು.
ಇದನ್ನೂ ಓದಿ- ಅನುಮಾನಾಸ್ಪದ ಬಾಕ್ಸ್, ರಾತ್ರಿ ಪೂರ್ತಿ ಸ್ಥಳದಲ್ಲೆ MLA ಮೊಕ್ಕಾಂ, ಕಾರ್ಯಾಚರಣೆ ಬಗ್ಗೆ ಹೇಳಿದ್ದೇನು?
ಮರಳು ಮೂಟೆ, ಬ್ಯಾರಿಕೇಡ್
ಅನುಮಾನಾಸ್ಪದ ಬಾಕ್ಸ್ ಸುತ್ತಲು 250ಕ್ಕೂ ಹೆಚ್ಚು ಮರಳಿನ ಮೂಟೆಗಳನ್ನು ಇರಿಸಲಾಯಿತು. ಒಂದು ವೇಳೆ ಬಾಕ್ಸ್ನಲ್ಲಿ ಸ್ಪೋಟಕವಿದ್ದು ಅದು ಸ್ಪೋಟಿಸಿದರೆ ತೀವ್ರತೆ ತಡೆಗೆ ಈ ಕ್ರಮ ಕೈಗೊಳ್ಳಲಾಯಿತು. ಸಾರ್ವಜನಿಕರ ನಿಯಂತ್ರಣಕ್ಕೆ ಬಾಕ್ಸ್ನಿಂದ ನೂರು ಮೀಟರ್ ವ್ಯಾಪ್ತಿಯಲ್ಲಿ ಬ್ಯಾರಿಕೇಡ್ ಹಾಕಲಾಯಿತು. ಪೊಲೀಸ್ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಯಿತು.
ಪಾರ್ಕಿಂಗ್ ಸ್ಥಳಕ್ಕೆ ಹೋಗಲು ಪರದಾಟ
ರೈಲು ಇಳಿದು ಬಂದ ಪ್ರಯಾಣಿಕರು ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ್ದ ವಾಹನ ಕೊಂಡೊಯ್ಯಲು ಪರದಾಡುವಂತಾಯಿತು. ಪಾರ್ಕಿಂಗ್ ಸ್ಥಳಕ್ಕೆ ಹೋಗುವ ರಸ್ತೆಯಲ್ಲೇ ಬಾಕ್ಸ್ ಇದ್ದಿದ್ದರಿಂದ ಜನರ ಓಡಾಟ ನಿರ್ಬಂಧಿಸಲಾಗಿತ್ತು. ಜನ ಕೆಇಬಿ ಸರ್ಕಲ್ಗೆ ಹೋಗಿ ಪಕ್ಕದ ರಸ್ತೆಯ ಮೂಲಕ ಪಾರ್ಕಿಂಗ್ ಸ್ಥಳಕ್ಕೆ ತಲುಪಬೇಕಾಗಿತ್ತು.
ಬಿಟ್ಟೂ ಬಿಡದೆ ಅಬ್ಬರಿಸಿದ ವರುಣ
ಬಾಂಬ್ ಸ್ಕ್ವಾಡ್ ಸಿಬ್ಬಂದಿಯ ಕಾರ್ಯಾಚರಣೆ ಮಳೆ ತೀವ್ರ ಅಡ್ಡಿ ಉಂಟು ಮಾಡಿತು. ರಾತ್ರಿ ಕಾರ್ಯಾಚರಣೆ ಆರಂಭವಾಗುತ್ತಿದ್ದಂತೆ ಅಬ್ಬರ ಶುರು ಮಾಡಿದ ಮಳೆ ಬೆಳಗಿನ ಜಾವದ ತನಕ ಸುರಿಯಿತು. ಮಳೆಯಿಂದಾಗಿ ಕಾರ್ಯಾಚರಣೆಗೆ ಅಡ್ಡಿಯಾಯಿತು. ಈ ಹಿನ್ನೆಲೆ ಬಾಕ್ಸ್ಗಳ ರಕ್ಷಣೆಗೆ ಪೊಲೀಸ್ ಇಲಾಖೆ ದೊಡ್ಡ ಛತ್ರಿಯೊಂದರ ವ್ಯವಸ್ಥೆ ಮಾಡಬೇಕಾಯಿತು.
10 ಗಂಟೆ ಬಳಿಕ ಬಾಂಬ್ ಸ್ಕ್ವಾಡ್
ವಿಷಯ ತಿಳಿಯುತ್ತಿದ್ದಂತೆ ಜಿಲ್ಲಾ ಪೊಲೀಸರು ಬೆಂಗಳೂರಿನ ಬಾಂಬ್ ಸ್ಕ್ವಾಡ್ಗೆ ಮಾಹಿತಿ ರವಾನಿಸಿದ್ದರು. ಬಾಂಬ್ ಸ್ಕ್ವಾಡ್ ಸ್ಥಳಕ್ಕೆ ತಲುಪುವ ಹೊತ್ತಿಗೆ ರಾತ್ರಿ 8.30 ಆಗಿತ್ತು. ಅನುಮಾನಾಸ್ಪದ ಬಾಕ್ಸ್ ಪತ್ತೆ ವಿಷಯ ತಿಳಿದು 10 ಗಂಟೆ ಬಳಿಕ ಪರಿಣಿತ ಬಾಂಬ್ ಸ್ಕ್ವಾಡ್ ಅದರ ಬಳಿಗೆ ತೆರಳಿದ್ದರು..! ಇನ್ನು, ಕಾರ್ಯಾಚರಣೆ ವೇಳೆ ಸ್ಪೋಟ ನಿರೋಧಕ ಸೂಟ್ ಧರಿಸಿದ್ದ ವ್ಯಕ್ತಿ ಹತ್ತಾರು ಬಾರಿ ಬಾಕ್ಸ್ ಬಳಿ ಬಂದು ಹಿಂತಿರುಗುತ್ತಿದ್ದರು. ಕಾರ್ಯಾಚರಣೆ ಆರಂಭಿಸಿ ಸುಮಾರು 5 ಗಂಟೆ ಬಳಿಕ ಮೊದಲ ಬಾಕ್ಸ್ ಓಪನ್ ಮಾಡಲಾಯಿತು..!
ನಾಲ್ಕು ಬಗೆಯ ಟೆಸ್ಟ್
ಕಬ್ಬಿಣದ ಬಾಕ್ಸ್ಗಳಿಗೆ ಮೂರು ಬೀಗ ಹಾಕಲಾಗಿತ್ತು ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆ ಅನುಮಾನ ಹೆಚ್ಚಾಗಿತ್ತು. ಆದ್ದರಿಂದ ಬಾಂಬ್ ನಿಷ್ಕ್ರಿಯ ದಳ ನಾಲ್ಕು ವಿವಿಧ ಬಗೆಯ ಟೆಸ್ಟ್ ಮಾಡಿತು. ಬಾಕ್ಸ್ ಒಳಗಿರುವುದು ಸ್ಪೋಟಕ ಸಾಮಗ್ರಿಯಲ್ಲ ಎಂದು ಖಾತ್ರಿಯಾದ ಬಳಿಕ ಸ್ಪೋಟ ನಡೆಸಿ ಲಾಕ್ ಮುರಿದು ಬಾಕ್ಸ್ ತೆಗೆಯಲಾಯಿತು. ಎರಡು ಬಾರಿ ಸ್ಪೋಟ ನಡೆಸಿ ಎರಡು ಬಾಕ್ಸ್ ಓಪನ್ ಮಾಡಲಾಯಿತು.
ಮುಂದುವರೆಯಲಿದೆ ತನಿಖೆ
ಇನ್ನು, ಘಟನೆ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್, ಮೇಲ್ನೋಟಕ್ಕೆ ಬಾಕ್ಸ್ ಒಳಗಿರುವುದು ಟೇಬಲ್ ಸಾಲ್ಟ್ ಮತ್ತು ವೇಸ್ಟ್ ಮೆಟೀರಿಯಲ್ ಎಂದು ಗೊತ್ತಾಗಿದೆ. ಸಿಸಿಟಿವಿ ಪರಿಶೀಲಿಸಿದ್ದೇವೆ. ನ.3ರಂದು ಸುಮಾರು 11 ಗಂಟೆ ಹೊತ್ತಿಗೆ ಬಾಕ್ಸ್ಗಳನ್ನು ವಾಹನದಲ್ಲಿ ತಂದು ಇಡಲಾಗಿದೆ. ಶಿವಮೊಗ್ಗಕ್ಕೆ ಅವುಗಳನ್ನು ಯಾಕೆ ತರಲಾಗಿದೆ ಎಂದು ಪರಿಶೀಲಿಸಲಾಗುತ್ತಿದೆ. ಬಾಕ್ಸ್ ತಂದಿಟ್ಟವರನ್ನು ವಶಕ್ಕೆ ಪಡೆದಿದ್ದು ಅಪರಾಧ ಹಿನ್ನೆಲೆ ಇದೆ ಎಂದು ತಿಳಿದು ಬಂದಿದೆ. ಸದ್ಯ ತನಿಖೆ ನಡೆಯುತ್ತಿದೆ ಎಂದು ತಿಳಿಸಿದರು.
