ಶಿವಮೊಗ್ಗ ಲೈವ್.ಕಾಂ | SHIMOGA NEWS | 01 FEBRUARY 2021
ಕಲ್ಲಗಂಗೂರು ಕಲ್ಲು ಕ್ವಾರಿಯಲ್ಲಿ ಸಂಭವಿಸಿದ ಸ್ಪೋಟ ಪ್ರಕರಣ ಇವತ್ತು ವಿಧಾನಸಭೆಯಲ್ಲಿ ಪ್ರಸ್ತಾಪವಾಯಿತು. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಿಚಾರವನ್ನು ಪ್ರಸ್ತಾಪಿಸಿದರು.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಸಿದ್ದರಾಮಯ್ಯ ಏನೆಲ್ಲ ಚರ್ಚಿಸಿದರು?
ಸ್ಪೋಟಕದ ಬಗ್ಗೆ | ಪುಲ್ವಾಮದಲ್ಲಿ ಸಂಭವಿಸಿದ ಸ್ಪೋಟವೆ ದೊಡ್ಡದು ಅಂದುಕೊಂಡಿದ್ದೆವು. ಅದರೆ ಅದಕ್ಕಿಂತಲೂ ಹೆಚ್ಚಿನ ಪ್ರಮಾಣದ ಸ್ಪೋಟಕ ಕಲ್ಲಗಂಗೂರಿನಲ್ಲಿ ಸ್ಪೋಟಿಸಿದೆ. ಪುಲ್ವಾಮದಲ್ಲಿ 250 ಕೆ.ಜಿ. ಸ್ಪೋಟಕವಿತ್ತು. ಕಲ್ಲಗಂಗೂರಿನಲ್ಲಿ 1350 ಕೆ.ಜಿ. ಸ್ಪೋಟಕ ಸ್ಪೋಟಿಸಿದೆ.
200ಕ್ಕೂ ಹೆಚ್ಚು ಕ್ರಷರ್ | ಹುಣಸೋಡು, ಕಲ್ಲಗಂಗೂರು, ಬಸವನಗಂಗೂರು, ಗೆಜ್ಜೇನಹಳ್ಳಿ, ದೇವಕಾತಿಕೊಪ್ಪ, ಹೊಸೂರು ಸುತ್ತಮುತ್ತ ಸುಮಾರು 200ಕ್ಕೂ ಹೆಚ್ಚು ಕ್ರಷರ್ ಗಳು ನಡೆಯುತ್ತಿವೆ. ಅನೇಕ ಕ್ವಾರಿಗಳು ಇಲ್ಲಿವೆ.
ಲೈಸೆನ್ಸ್ ಇರೋದು ಕೆಲವರಿಗಷ್ಟೇ | ಶಿವಮೊಗ್ಗಕ್ಕೆ ಭೇಟಿ ನೀಡಿದ್ದ ವೇಳೆ ಸೀನಿಯರ್ ಜಿಯಾಲಜಿಸ್ಟ್ ಜೊತೆ ಚರ್ಚಿಸಿದೆ. ಅವರ ಪ್ರಕಾರ 97 ಕ್ರಷರ್ ಗಳಿಗೆ, 76 ಕ್ವಾರಿಗಳಿಗೆ ಲೈಸೆನ್ಸ್ ಕೊಟ್ಟಿದ್ದೇವೆ ಅಂದಿದ್ದರು. ಈ 76ರ ಪೈಕಿ 23ಕ್ಕೆ ಮಾತ್ರ ಬ್ಲಾಸ್ಟ್ ಮಾಡೋಕೆ ಅವಕಾಶವಿದೆ.
15 ದಿನಕ್ಕೊಮ್ಮೆ ಬರ್ತಿತ್ತು ಸ್ಪೋಟಕ | ಸ್ಥಳೀಯರ ಜೊತೆ ಮಾತನಾಡಿದಾಗ ಇಲ್ಲಿನ ಕ್ವಾರಿಗಳಿಗೆ 15 – 20 ದಿನಗಳಿಗೆ ಒಮ್ಮೆ ಎರಡು ಲಾರಿಗಳಲ್ಲಿ ಸ್ಪೋಟಕ ಬರುತ್ತಿತ್ತು ಎಂದು ತಿಳಿಸಿದ್ದಾರೆ. ಇದರ ವಿರುದ್ಧವು ಜನರು ದೂರಿದ್ದಾರೆ.
ಸ್ಪೋಟಕ ಕಾನೂನು ಉಲ್ಲಂಘನೆ | EXPLOSEIVE SUBSTANCES ACT 2002, EXPLOSEIVES RULES 2008 ಎಂಬ ಕಾನೂನು ಇದೆ. ಇದರ ಪ್ರಕಾರ ಸ್ಪೋಟಕ ತಯಾರಿ, ಅದರ ಸಾಗಣೆ, ಶೇಖರಣೆ ವಿಧಾನ, ಶೇಖರಿಸುವ ಸ್ಥಳ, ಅನುಮತಿ ಕುರಿತು ಸಂಪೂರ್ಣ ನಿಯಮಗಳ ಮಾಹಿತಿ ಇದೆ. ಎಲ್ಲೆಲ್ಲಿ ಸಾಗಣೆ ಮಾಡಬೇಕು, ಎಲ್ಲಿ ಸ್ಪೋಟಕ ಸಾಗಣೆ ಮಾಡುವಂತಿಲ್ಲ ಎಂಬ ನಿಯಮವಿದೆ. ಆದೆಲ್ಲವು ಉಲ್ಲಂಘಟನೆಯಾಗಿದೆ. ಜಿಲ್ಲಾಧಿಕಾರಿ ಅವರ ಅನುಮತಿ ಇಲ್ಲದೆ ಸ್ಪೋಟಕ ಸಾಗಿಸಲಾಗಿದೆ. ಶಿವಮೊಗ್ಗ ಪೊಲೀಸರು, ಅಲ್ಲಿನ ಗುಪ್ತಚರ ಇಲಾಖೆ ಅಧಿಕಾರಿಗಳಿಗೆ ಇದು ಗೊತ್ತಿರಲಿಲ್ಲವಾ?
ಅರಣ್ಯ ಇಲಾಖೆ ಪತ್ರ ನೀಡಿತ್ತು | ಕಲ್ಲಗಂಗೂರು, ಗೆಜ್ಜೇನಹಳ್ಳಿ ಭಾಗದಲ್ಲಿ ಅರಣ್ಯ ಇಲಾಖೆಯ ಅನುಮತಿ ಇಲ್ಲದೆ ಕ್ವಾರಿಗಳನ್ನು ನಡೆಸಲು ಕಂದಾಯ ಇಲಾಖೆ ಒಪ್ಪಿಗೆ ಸೂಚಿಸಿದೆ. ಕಲ್ಲಗಂಗೂರು ವ್ಯಾಪ್ತಿಯಲ್ಲಿ 69 ಮಂದಿಗೆ, ಗೆಜ್ಜೇನಹಳ್ಳಿ ವ್ಯಾಪ್ತಿಯಲ್ಲಿ 27 ಮಂದಿ ಕಲ್ಲು ಗಣಿಗಾರಿಕೆ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ 25 ಅರಣ್ಯ ಮೊಕದಮೆ ದಾಖಲು ಮಾಡಲಾಗಿದೆ. ಅನಧಿಕೃತ ಕಲ್ಲು ಗಣಿ ನಿಲ್ಲಿಸುವಂತೆ ಜಿಲ್ಲಾಧಿಕಾರಿ ಅವರಿಗೆ ಡಿಸಿಎಫ್ ಪತ್ರ ಬರೆದಿದ್ದಾರೆ. ಸ್ಪೋಟಕ್ಕೂ ಹದಿನೈದು ದಿನ ಮೊದಲು ಈ ಪತ್ರ ಬಂದಿತ್ತು.
ಶಾಸಕರಿಗೆ ಸನ್ಮಾನ ಮಾಡಿದ್ದೇಕೆ? | ಈ ಭಾಗದ ಶಾಸಕ ಅಶೋಕ್ ನಾಯ್ಕ್ ಅವರಿಗೆ ಕಲ್ಲು ಕ್ವಾರಿಯವರು ಸನ್ಮಾನ ಮಾಡಿದ್ದು ಪತ್ರಿಕೆಯಲ್ಲಿ ವರದಿಯಾಗಿದೆ. ಇದು ಸಂಶಯ ಮೂಡಿಸುವುದಿಲ್ಲವೆ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು. ಇದಕ್ಕೆ ಉತ್ತರ ನೀಡಿದ ಶಾಸಕ ಅಶೋಕ್ ನಾಯ್ಕ್ ಅವರು, ಹೆಸರೆ ಹೇಳುವ ಹಾಗೆ ಕಲ್ಲಗಂಗೂರು ಗ್ರಾಮದಲ್ಲಿ ಬೆಳೆ ಬೆಳೆಯೋಕೆ ಕಷ್ಟ. ಅಲ್ಲಿ ಕಲ್ಲು ಜಾಸ್ತಿ . ಹಲವರು ಇಲ್ಲಿ ಕಲ್ಲು ಹೊಡೆದು ಬದುಕು ನಡೆಸುತ್ತಾರೆ. ಅವರು ಸನ್ಮಾನ ಮಾಡಿದರು ಎಂದು ಸಮಜಾಯಿಷಿ ನೀಡಿದರು.
ಜೀವಾವಧಿ ಶಿಕ್ಷೆಗೆ ಗುರಿಪಡಿಸಬೇಕು | ಯಾರೆಲ್ಲ ಅಧಿಕಾರಿಗಳು ಅಕ್ರಮಕ್ಕೆ ಕಾರಣವಾಗಿದ್ದಾರೋ ಅವರ ಮೇಲೆಲ್ಲ ಕ್ರಿಮಿನಲ್ ಮೊಕದಮೆ ದಾಖಲು ಮಾಡಬೇಕು. ಎಕ್ಸ್ ಪ್ಲೋಸಿವ್ಸ್ ಆಕ್ಟ್ ನ ಸೆಕ್ಷನ್ 208ರ ಪ್ರಕಾರ ಇವರಿಗೆಲ್ಲ ಜೀವಾವಧಿ ಶಿಕ್ಷೆ ಆಗಲಿದೆ. ಸ್ಪೋಟದಲ್ಲಿ ಆರು ಮಂದಿ ಸಾವನ್ನಪ್ಪಿದ್ದಾರೆ. ನನ್ನ ಪ್ರಕಾರ ಅದು ಸ್ಪೋಟದ ಸಾವಲ್ಲ, ಅಧಿಕಾರಿಗಳ ನಿರ್ಲಕ್ಷದಿಂದ ಆಗಿರುವ ಕೊಲೆ. ಅಧಿಕಾರಿಗಳು, ರಾಜಕಾರಣಿಗಳು ಯಾರೆಲ್ಲ ಅಕ್ರಮಕ್ಕೆ ಅವಕಾಶ ಕೊಟ್ಟಿದ್ದಾರೋ ಅವರೆ ಕಾರಣ.
ಕಣ್ಮುಚ್ಚಿಕೊಂಡಿರಿ ಅಂದಿದ್ದೇಕೆ? | ಸಚಿವ ಈಶ್ವರಪ್ಪ ಅವರು ಅಧಿಕಾರಿಗಳು ಕಣ್ಮುಚ್ಚಿಕೊಂಡಿರಿ ಎಂದು ಹೇಳಿದ್ದರು. ಅದೆ ರೀತಿ ಸ್ಪೋಟದ ಬಳಿಕ ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಅವರು, ಅಧಿಕಾರಿಗಳು, ರಾಜಕಾರಣಿಗಳು ಅಕ್ರಮದ ಹಿಂದಿದ್ದಾರೆ. 25 ಬಾಕ್ಸ್ ಸ್ಪೋಟಕವನ್ನು ಪೊಲೀಸರು ಹಿಡಿದಿದ್ದರು. ಅದನ್ನು ಬಿಟ್ಟು ಕಳುಹಿಸುವಂತೆ ಒತ್ತಡ ಬಂದಿತ್ತು. ಅವತ್ತೆ ಕ್ರಮ ಕೈಗೊಂಡಿದ್ದರೆ ಹೀಗಾಗುತ್ತಿರಲಿಲ್ಲ ಎಂದು ಹೇಳಿದ್ದಾರೆ. ಇದರ ಹಿಂದೆ ಯಾರ ಕೈವಡವಿದೆ ಸ್ಪಷ್ಟವಾಗಬೇಕು.
ಜಿಲ್ಲಾಧಿಕಾರಿಯೇ ಆರೋಪಿ ಸ್ಥಾನದಲ್ಲಿದ್ದಾರೆ | ಸ್ಪೋಟದ ಕರಿತು ಜಿಲ್ಲಾಧಿಕಾರಿ ಅವರಿಂದ ತನಿಖೆ ನಡೆಸುವುದಾಗಿ ಮುಖ್ಯಮಂತ್ರಿ ಹೇಳಿದ್ದಾರೆ. ಆದರೆ ಜಿಲ್ಲಾಧಿಕಾರಿ ಅವರಿಗೆ ಅಕ್ರಮದ ಮಾಹಿತಿ ಇತ್ತು. ಹಲವರು ದೂರು ನೀಡಿದ್ದರೂ ಕ್ರಮ ಕೈಗೊಂಡಿಲ್ಲ. ಜಿಲ್ಲಾಡಳಿತ ಕಣ್ಮುಚ್ಚಿ ಕೂತಿದೆ. ಪ್ರಕರಣದಲ್ಲಿ ಜಿಲ್ಲಾಧಿಕಾರಿ ಅವರು ಆರೋಪಿ ಸ್ಥಾನದಲ್ಲಿದ್ದಾರೆ. ಅವರಿಂದ ತನಿಖೆ ಸಾದ್ಯವಿಲ್ಲ.
ಹೈಕೋರ್ಟ್ ನ್ಯಾಯಾಧೀಶರಿಂದ ತನಿಖೆ | ಸ್ಪೋಟದ ಕುರಿತು ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದ ಸಮಿತಿಯಿಂದ ತನಿಖೆಯಾಗಬೇಕು. ತಪ್ಪಿತಸ್ಥ ಅಧಿಕಾರಿಗಳಿಗೆ ಶಿಕ್ಷೆಯಾಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದರು.
ಅಕ್ರಮಗಳು ಕೂಡಲೆ ನಿಲ್ಲಲಿ | ಕಲ್ಲಗಂಗೂರು ಸುತ್ತಮುತ್ತ ನಡೆಯುತ್ತಿರು ಅಕ್ರಮ ಕ್ವಾರಿ, ಕ್ರಷರ್ ಗಳನ್ನು ಕೂಡಲೆ ನಿಲ್ಲಿಸಬೇಕು. ಗ್ರಾಮದಿಂದ 50 ಮೀಟರ್ ದೂರದಲ್ಲಿ ಕ್ವಾರಿ, ಕ್ರಷರ್ ನಡೆಸುತ್ತಿದ್ದಾರೆ. ಇದನ್ನು ಕೂಡಲೆ ನಿಲ್ಲಿಸಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದರು.
ಊಟದ ವಿರಾಮದ ಬಳಿಕ ಸ್ಪೋಟದ ಕುರಿತು ಸರ್ಕಾರ ಉತ್ತರ ನೀಡಲಿದೆ. ಗೃಹ ಸಚಿವ ಬೊಮ್ಮಾಯಿ ಅವರು ಉತ್ತರ ನೀಡುವ ಸಂಭವವಿದೆ.
ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]