ಶಿವಮೊಗ್ಗ ಲೈವ್.ಕಾಂ | SHIMOGA NEWS | 24 JUNE 2021
ಲಾಕ್ ಡೌನ್‍ಗೆ ರಿಲೀಫ್ ನೀಡಿದ ಸರ್ಕಾರ ಕೆಎಸ್‍ಆರ್‌ಟಿಸಿ ಬಸ್ ಸಂಚಾರಕ್ಕೆ ಅನುಮತಿ ನೀಡಿದೆ. ಆದರೆ ಶಿವಮೊಗ್ಗ ಜಿಲ್ಲೆಯಲ್ಲಿ ಖಾಸಗಿ ಬಸ್ಸುಗಳೆ ಜೀವನಾಡಿಯಾಗಿವೆ. ಹಾಗಾಗಿ ಜನರು ಖಾಸಗಿ ಬಸ್ಸುಗಳು ಯಾವಾಗ ರಸ್ತೆಗಿಳಿಯಲಿವೆ ಎಂಬ ಕಾತುರದಲ್ಲಿದ್ದಾರೆ. ಹಳ್ಳಿ ಹಳ್ಳಿಗೂ ತಲುಪುವ ಬಸ್ಸುಗಳು, ಕೃಷಿ ಚಟುವಟಿಕೆ, ರೈತರ ಆದಾಯದ ಆಧಾರವಾಗಿವೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಈ ನಡುವೆ ಖಾಸಗಿ ಬಸ್ ಮಾಲೀಕರಿಗೆ ಬಸ್ಸುಗಳನ್ನು ರಸ್ತೆಗಿಳಿಸುವ ತವಕವಿದೆ. ಆದರೆ ಪ್ರಮುಖ ಸವಾಲುಗಳು ಅವರನ್ನು ಕಾಡುತ್ತಿವೆ. ಇದೆ ಕಾರಣಕ್ಕೆ ಬಸ್ ಶುರು ಮಾಡಲು ಹತ್ತಾರು ಭಾರಿ ಯೋಚಿಸುವಂತಾಗಿವೆ. ಶಿವಮೊಗ್ಗ ಲೈವ್.ಕಾಂ ಜೊತೆಗೆ ಮಾತನಾಡಿದ ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ರಂಗಪ್ಪ, ಈ ಸವಾಲುಗಳ ಕುರಿತು ವಿವರಿಸಿದ್ದಾರೆ.
ಸವಾಲು 1 : ಟ್ಯಾಕ್ಸ್ ಕಟ್ಟಬೇಕು
ಎರಡು ತಿಂಗಳಿಂದ ಬಸ್ ಸಂಚಾರ ಸ್ಥಗಿತವಾಗಿದೆ. ಕಳೆದ ವರ್ಷ ಒಂಭತ್ತು ತಿಂಗಳು ಬಸ್ಸುಗಳನ್ನು ನಿಲ್ಲಿಸಿದ್ದೆವು. ದುಡಿಮೆ ಇಲ್ಲ. ಆದರೂ ಸರ್ಕಾರಕ್ಕೆ ಟ್ಯಾಕ್ಸ್ ಕಟ್ಟಬೇಕು. ಪ್ರತಿ ಮೂರು ತಿಂಗಳಿಗೆ 50 ಸಾವಿರ ಟ್ಯಾಕ್ಸ್ ಇದೆ. ಈ ಸಂದರ್ಭದಲ್ಲಿ ಟ್ಯಾಕ್ಸ್ ಕಟ್ಟುವುದು ಸುಲಭದ ಸಂಗತಿಯಲ್ಲ. ಈಗಾಗಲೆ ಸರ್ಕಾರಕ್ಕೆ ಪರ್ಮಿಟ್ ಸರೆಂಡರ್ ಮಾಡಿದ್ದೇವೆ. ಅದನ್ನು ಹಿಂಪಡೆದ ದಿನದಿಂದಲೇ ಟ್ಯಾಕ್ಸ್ ಶುರುವಾಗಲಿದೆ.
ಸವಾಲು 2 : ರಿಪೇರಿ, ಬ್ಯಾಟರಿಗೆ ದುಡ್ಡು
ಬಸ್ಸುಗಳು ನಿಂತಲ್ಲೆ ನಿಂತು ಕೆಟ್ಟು ಹೋಗಿರುತ್ತವೆ. ಹೊಸ ಬ್ಯಾಟರಿ ಬೇಕು. ಪ್ರತಿ ಬಸ್‍ಗೆ ಕನಿಷ್ಠ ಹತ್ತು ಸಾವಿರ ರೂ. ಬೇಕು. ಆದಾಯವೆ ಇಲ್ಲದೆ ಇರುವ ಸಂದರ್ಭದಲ್ಲಿ ಇದನ್ನು ಹೊಂದಿಸಿಕೊಂಡು ಬಸ್ ರಸ್ತೆಗಿಳಿಸುವುದು ಸದ್ಯದ ಸವಾಲುಗಳಲ್ಲಿ ಒಂದಾಗಿದೆ.
ಸವಾಲು 3 : ಡಿಸೇಲ್ ಹಾಕಿಸುವುದೆ ಕಷ್ಟ
ಡಿಸೇಲ್ ಬೆಲೆ ದಿನೆ ದಿನೆ ಹೆಚ್ಚಳವಾಗುತ್ತಿದೆ. ಈಗ ಪ್ರತಿ ಲೀಟರ್‍ಗೆ ನೂರು ರೂ. ತನಕ ಬಂದಿದೆ. ಲಾಂಗ್ ರೂಟ್ ಓಡಾಡುವ ಬಸ್ಸುಗಳು ಪ್ರತಿ ದಿನ ಫುಲ್ ಟ್ಯಾಂಕ್ ಮಾಡಿಸಬೇಕು. ಫುಲ್ ಟ್ಯಾಂಕ್ ಡಿಸೇಲ್ ತುಂಬಿಸಲು ಹತ್ತು ಸಾವಿರ ರೂ. ಬೇಕು. ತಿಂಗಳಿಗೆ ಕನಿಷ್ಠ ಮೂರು ಲಕ್ಷ ರೂ. ಬೇಕು. ಆದರೆ ಈ ಸಂದರ್ಭದಲ್ಲಿ ಇಷ್ಟು ಆದಾಯ ನಿರೀಕ್ಷೆ ಮಾಡುವುದು ಹೇಗೆ?
ಸವಾಲು 4 : ಶೇ.50ರಷ್ಟು ಪ್ರಯಾಣಿಕರು
ರಾಜ್ಯ ಸರ್ಕಾರದ ಕೋವಿಡ್ ನಿಯಮದಂತೆ ಶೇ.50ರಷ್ಟು ಪ್ರಯಾಣಿಕರನ್ನು ಮಾತ್ರ ಬಸ್ಸಿಗೆ ಹತ್ತಿಸಬೇಕು. ಶೇ.50ರಷ್ಟು ಪ್ರಯಾಣಿಕರಿಂದ ಬರುವ ಆದಾಯ ಯಾವುದಕ್ಕೂ ಸಾಲುವುದಿಲ್ಲ. ಕಲೆಕ್ಷನ್ ಇಲ್ಲದೆ ಡಿಸೇಲ್ ಹಾಕಿಸುವುದೆಲ್ಲಿ, ರಿಪೇರಿ ಮಾಡಿಸುವುದು ಹೇಗೆ, ಕಾರ್ಮಿಕರಿಗೆ ಸಂಬಳ ಕೊಡಲು ಆಗುತ್ತದೆಯೇ.
ಸವಾಲು 5 : ಬೈಕು, ಕಾರುಗಳು
ಲಾಕ್ ಡೌನ್‍ನಿಂದಾಗಿ ಬಸ್ ಸಂಚಾರ ಸ್ಥಗಿತವಾಯಿತು. ಬಹುತೇಕ ಜನರು ಸ್ವಂತ ವಾಹನಗಳ್ನು ಅವಲಂಬಿಸಿದ್ದಾರೆ. ಹಾಗಾಗಿ ಬಸ್ ಸಂಚಾರ ಆರಂಭವಾದರೂ ಈಗ ಸ್ವಂತ ವಾಹನಗಳನ್ನು ಬಳಕೆ ಮಾಡುತ್ತಿರುವವರನ್ನು ಬಸ್‍ಗಳತ್ತ ಕರೆತರಲು ಸಮಯವಕಾಶ ಬೇಕಾಗಲಿದೆ.
ಜುಲೈ ಮೊದಲ ವಾರದಿಂದ ಆರಂಭ
ಇಷ್ಟೆಲ್ಲ ಸವಾಲುಗಳ ನಡುವೆಯು ಖಾಸಗಿ ಬಸ್ ಸಂಚಾರ ಆರಂಭಿಸಲಾಗುತ್ತಿದೆ ಎಂದು ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ರಂಗಪ್ಪ ತಿಳಿಸಿದ್ದಾರೆ. ಜುಲೈ ಮೊದಲ ವಾರದಿಂದ ಕೆಲವೆ ಕೆಲವು ಖಾಸಗಿ ಬಸ್‍ಗಳು ಸಂಚಾರ ಶುರು ಮಾಡಲಿವೆ. ಇವುಗಳ ಕಲೆಕ್ಷನ್ ನೋಡಿಕೊಂಡು ಉಳಿದ ಬಸ್ಸುಗಳ ಸಂಚಾರ ಆರಂಭಿಸಲು ಯೋಜಿಸಲಾಗಿದೆ ಎಂದರು.
ಕಾರ್ಮಿಕರ ಪರಿಸ್ಥಿತಿ ಕೇಳುವವರಿಲ್ಲ
ಶಿವಮೊಗ್ಗ ಜಿಲ್ಲೆಯ ಹೊಳಲೂರು ರಸ್ತೆ ಮತ್ತು ಭದ್ರವಾತಿ ರಸ್ತೆಗಳು ಮಾತ್ರ ರಾಷ್ಟ್ರೀಕರಣವಾಗಿವೆ. ಈ ರಸ್ತೆಗಳನ್ನು ಹೊರತುಪಡಿಸಿ ಉಳಿದೆಲ್ಲ ಮಾರ್ಗದಲ್ಲೂ ಖಾಸಗಿ ಬಸ್ ಸಂಚರಿಸುತ್ತವೆ. ಸುಮಾರು 600 ಖಾಸಗಿ ಬಸ್ಸುಗಳು ಶಿವಮೊಗ್ಗ ಜಿಲ್ಲೆಯಿಂದ ಕಾರ್ಯಾಚರಿಸುತ್ತವೆ. ಈ ಬಸ್ಸುಗಳನ್ನು ನಂಬಿಕೊಂಡು ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಎರಡದಿಂದ ಮೂರು ಸಾವಿರ ಕಾರ್ಮಿಕರಿದ್ದಾರೆ. ಇವರಾರಿಗೂ ಕೋವಿಡ್ ಸಂಕಷ್ಟ ಕಾಲದಲ್ಲಿ ನೆರವು ಸಿಕ್ಕಿಲ್ಲ. ಈ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ, ಸಂಸದ ರಾಘವೇಂದ್ರ, ಸಚಿವ ಈಶ್ವರಪ್ಪ ಅವರು ಗಮನ ಹರಿಸಬೇಕು ಎಂದು ರಂಗಪ್ಪ ಮನವಿ ಮಾಡಿದ್ದಾರೆ.
ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]