ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA | 30 ಏಪ್ರಿಲ್ 2020
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಎಲ್ಲೆಂದರಲ್ಲಿ ಉಗಿಯುವವರು, ಮಾಸ್ಕ್ ಹಾಕದೆ ನಗರದಾದ್ಯಂತ ಓಡಾಡುತ್ತಿರುವವರಿಗೆ ಈಗ ಮಹಾನಗರ ಪಾಲಿಕೆ ಬಿಸಿ ಮುಟ್ಟಿಸುತಿದೆ. ದಿಢೀರ್ ಕಾರ್ಯಾಚರಣೆ ನಡೆಸಿದ ಪಾಲಿಕೆ ಅಧಿಕಾರಿಗಳು ರಸ್ತೆಯಲ್ಲಿ ಉಗುಳಿದವರಿಗೆ ದಂಡ ಹಾಕಿದೆ.
ಪಾಲಿಕೆ ಆರೋಗ್ಯ ವಿಭಾಗದ ಅಧಿಕಾರಿಗಳು ಬೆಳಗ್ಗೆಯಿಂದ ಶಿವಮೊಗ್ಗ ನಗರದಾದ್ಯಂತ ಕಾರ್ಯಾಚರಣೆ ನಡೆಸಿದ್ದಾರೆ. ಕಂಡಕಂಡಲ್ಲಿ ಉಗಿಯುವವರನ್ನು ಹಿಡಿದು, ಸ್ಥಳದಲ್ಲೇ ದಂಡ ಕಟ್ಟಸಿಕೊಂಡು, ಎಚ್ಚರಿಕೆ ನೀಡಿ ಕಳುಹಿಸಲಾಗುತ್ತಿದೆ.
ಉಗಿದರೆ 500 ರೂ. ಫೈನ್
ಶಿವಮೊಗ್ಗ ನಗರದಲ್ಲಿ ಬೆಳಗ್ಗೆಯಿಂದ ಈತನಕ 12 ಕೇಸುಗಳನ್ನು ಹಾಕಲಾಗಿದೆ. ಎರಡು ಸಾವಿರ ರೂ. ದಂಡವನ್ನು ವಸೂಲಿ ಮಾಡಲಾಗಿದೆ. ಸಾರ್ವಜನಿಕ ಸ್ಥಳದಲ್ಲಿ ತಂಬಾಕು ಉತ್ಪನ್ನ ಬಳಕೆಗೆ 500 ರೂ., ರಸ್ತೆ ಮೇಲೆ ಉಗುಳಿದ್ದಕ್ಕೆ 500 ರೂ., ಮಾಸ್ಕ್ ತೊಡದೆ ಓಡುತ್ತಿದ್ದದ್ದಕ್ಕೆ ಹತ್ತು ಕೇಸುಗಳನ್ನು ಹಾಕಿ ಒಂದು ಸಾವಿರ ರೂ. ದಂಡ ವಸೂಲಿ ಮಾಡಲಾಗಿದೆ.
ಮತ್ತದೆ ತಪ್ಪು ಮಾಡಿದರೆ ದಂಡ ಡಬಲ್
ಪದೇ ಪದೇ ಅದೇ ತಪ್ಪು ಮಾಡುವವರಿಗೆ ಇನ್ನಷ್ಟು ಚುರುಕು ಮುಟ್ಟಿಸುವ ಸಲುವಾಗಿ ದಂಡವನ್ನು ಡಬಲ್ ಮಾಡಲು ಮಹಾನಗರ ಪಾಲಿಕೆ ತೀರ್ಮಾನಿಸಿದೆ. ಒಮ್ಮೆ ದಂಡ ಕಟ್ಟಿ ಮತ್ತೊಮ್ಮೆ ರಸ್ತೆ ಮೇಲೆ ಉಗುಳಿ ಸಿಕ್ಕಿಬಿದ್ದರೆ, ಡಬಲ್ ದಂಡ ಪಾವತಿಸಬೇಕಾಗುತ್ತದೆ. ಇದೇ ಕಾರಣಕ್ಕೆ ಮೊದಲ ಬಾರಿಗೆ ದಂಡ ಕಟ್ಟಿದವರ ಹೆಸರು, ವಿಳಾಸ, ಮೊಬೈಲ್ ನಂಬರ್‍ಗಳನ್ನು ಪಾಲಿಕೆ ಸಿಬ್ಬಂದಿ ಪಡೆದುಕೊಳ್ಳುತ್ತಾರೆ. ಸ್ಥಳದಲ್ಲೇ ದಂಡ ಕಟ್ಟಿದ್ದಕ್ಕೆ ಡಿಜಿಟಲ್ ರಶೀದಿ ಕೊಡುತ್ತಿದ್ದಾರೆ.
ಯಾವ್ಯಾವುದಕ್ಕೆ ಎಷ್ಟೆಷ್ಟು ದಂಡವಿದೆ?
ಕರೋನ ಸೋಂಕು ಹರಡದಂತೆ ತಡೆಯಲು ಉಗುಳುವುದಕ್ಕೆ ನಿಷೇಧವಿದೆ. ಮಾಸ್ಕ್ ತೊಡುವುದು ಕಡ್ಡಾಯವಾಗಿದೆ. ಇನ್ನು, ತಂಬಾಕು ಉತ್ಪನ್ನ ಮಾರಾಟ ಮಾಡುವಂತಿಲ್ಲ.
- ಸಾರ್ವಜನಿಕ ಸ್ಥಳ ಮತ್ತು ಕೆಲಸ ಮಾಡುವ ಸ್ಥಳದಲ್ಲಿ ಉಗುಳಿದರೆ ಮೊದಲ ಬಾರಿಗೆ 500 ರೂ. ದಂಡ. ಎರಡನೇ ಬಾರಿಗೆ 1000 ರೂ. ದಂಡ
- ತಂಬಾಕು, ಗುಟ್ಕಾ ಮತ್ತು ಮದ್ಯ ಮಾರಾಟ ಮಾಡಿದರೆ 500 ರೂ. ದಂಡ, ಎರಡನೇ ಬಾರಿಗೆ 1000 ರೂ. ದಂಡ
- ಸಾರ್ವಜನಿಕ ಸ್ಥಳ ಮತ್ತು ಕೆಲಸ ಮಾಡುವ ಸ್ಥಳದಲ್ಲಿ ಮಾಸ್ಕ್ ಧರಿಸದೆ ಇದ್ದರೆ ಮೊದಲ ಬಾರಿಗೆ 100 ರೂ. ದಂಡ, ಎರಡನೇ ಬಾರಿಗೆ 200 ರೂ. ದಂಡ ಕಟ್ಟಬೇಕಾಗುತ್ತದೆ ಅಂತಾ ಮಹಾನಗರ ಪಾಲಿಕೆ ಕಮಿಷನರ್ ಚಿದಾನಂದ ವಟಾರೆ ಆದೇಶ ಹೊರಡಿಸಿದ್ದಾರೆ.
ವಾಟ್ಸಪ್, ಫೇಸ್‍ಬುಕ್‍ನಲ್ಲಿ ಬಿಲ್ ವೈರಲ್
ಉಗುಳಿದ್ದಕ್ಕೆ, ತಂಬಾಕು ಉತ್ಪನ್ನ ಮಾರಾಟಕ್ಕೆ, ಮಾಸ್ಕ್ ತೊಡದೆ ಇದ್ದಿದ್ದಕ್ಕೆ ದಂಡ ಹಾಕಿದ್ದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದೆ. ದಂಡದ ರಶೀದಿಯ ಫೋಟೊಗಳು ವೈರಲ್ ಆಗಿದೆ. ರಶೀದಿಯಲ್ಲಿರುವ ಮೊಬೈಲ್ ನಂಬರ್‍ಗಳಿಗೆ ಸಾರ್ವಜನಿಕರು ಕರೆ ಮಾಡಿ, ನಿಜವೇ ಎಂದು ಜನರು ಪರೀಕ್ಷಿಸಿಕೊಳ್ಳುತ್ತಿದ್ದಾರೆ. ಇದರ ಆಡಿಯೋ ಕೂಡ ವೈರಲ್ ಆಗಿದೆ.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]