ಶಿವಮೊಗ್ಗ ಲೈವ್.ಕಾಂ | SHIMOGA NEWS | 8 ಜೂನ್ 2020
ಲಾಕ್‍ಡೌನ್ ಸಡಿಲಿಕೆ ಬೆನ್ನಿಗೆ ಸರ್ವಧರ್ಮ ಪ್ರಾರ್ಥನಾ ಮಂದಿರಗಳ ಬಾಗಿಲನ್ನು ಇವತ್ತಿನಿಂದ ತೆಗೆಯಲಾಗುತ್ತಿದೆ. ಶಿವಮೊಗ್ಗ ಜಿಲ್ಲೆಯ ಯಾವೆಲ್ಲ ಪ್ರಮುಖ ದೇವಾಲಯಗಳ ಬಾಗಿಲು ತೆಗೆಯಲಾಗುತ್ತದೆ. ಯಾವುದು ಸದ್ಯಕ್ಕೆ ಓಪನ್ ಇರಲ್ಲ. ಅವುಗಳ ಕಂಪ್ಲೀಟ್ ಮಾಹಿತಿ ಇಲ್ಲಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಶಿವಮೊಗ್ಗ ಸಿಟಿಯಲ್ಲಿ ಗುಡಿ, ಚರ್ಚು, ಮಸೀದಿ ಓಪನ್
ಶಿವಮೊಗ್ಗ ನಗರದ ಎಲ್ಲ ಪ್ರಮುಖ ದೇವಾಲಯಗಳು, ಚರ್ಚು, ಮಸೀದಿಗಳು ಓಪನ್ ಆಗಲಿವೆ. ಈಗಾಗಲೇ ಎಲ್ಲೆಡೆ ಪೂರ್ವ ಸಿದ್ಧತೆ ಕೈಗೊಳ್ಳಲಾಗಿದೆ. ಎರಡೂವರೆ ತಿಂಗಳ ಬಳಿಕ ಇವತ್ತು ಪ್ರಮುಖ ದೇವಾಲಯಗಳಲ್ಲಿ ಸಾರ್ವಜನಿಕ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ.
ನಗರದ ಕೋಟೆ ಸೀತಾರಾಮಾಂಜನೇಯ, ಕೋಟೆ ಮಾರಿಕಾಂಬ, ಹರಕೆರೆಯ ಶಿವಾಲಯ ಸೇರಿದಂತೆ ಎಲ್ಲ ದೇವಾಸ್ಥಾನಗಳ ಬಾಗಿಲು ತೆಗೆಯಲಾಗಿದ್ದು, ಹಲವೆಡೆ ಬ್ರಾಹ್ಮಿ ಮುಹೂರ್ತದ ಪೂಜೆಗಳು ಮುಗಿದಿವೆ. ಭಕ್ತರು ಬೆಳಗ್ಗೆಯಿಂದಲೇ ದೇವಸ್ಥಾನಕ್ಕೆ ಆಗಮಿಸುತ್ತಿದ್ದಾರೆ.
ಇನ್ನು, ನಗರದ ಸೇಕ್ರೆಡ್ ಹಾರ್ಟ್ ಚರ್ಚ್, ಸಂತ ಥಾಮಸ್ ಚರ್ಚ್‍ಗಳಲ್ಲೂ ಪ್ರಾರ್ಥನೆಗೆ ಸಿದ್ಧತೆ ನಡೆಸಲಾಗುತ್ತಿದೆ. ಕೋಟೆ ರಸ್ತೆಯ ಬಲೀನ್ ಮಸೀದಿ, ಗಾಂಧಿ ಬಜಾರ್‍ನ ಸುನ್ನಿ ಜಾಮೀಯಾ ಮಸೀದಿ, ಎಂಕೆಕೆ ರಸ್ತೆಯ ಶಾಫಿ ಮಸೀದಿ, ಕೆ.ಆರ್.ಪುರಂನ ರಿಜ್ವಾನ್ ಮಸೀದಿಗಳ ಬಾಗಿಲು ಇವತ್ತು ತೆಗೆಯಲಾಗುತ್ತದೆ.
ಜಿಲ್ಲೆಯಾದ್ಯಂತ ಸಿದ್ಧತೆ ಜೋರು
ಭದ್ರಾವತಿಯ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಸ್ಥಾನ, ರಾಘವೇಂದ್ರ ಸ್ವಾಮಿ ಮಠ, ಹಳದಮ್ಮ ದೇವಿ, ಚಂಡಿಕಾದುರ್ಗ, ಶೃಂಗೇರಿ ಶಂಕರ ಮಠ, ಉದ್ದಾಮ ಆಂಜನೇಯ ದೇವಸ್ಥಾನದಲ್ಲಿ ಇವತ್ತಿನಿಂದ ಪೂಜೆ ಆರಂಭವಾಗಿದೆ. ಸಾಗರದ ಶ್ರೀ ಮಹಾಗಣಪತಿ ದೇವಸ್ಥಾನ ಮತ್ತು ಸಿ ಶ್ರೇಣಿಗೆ ಒಳಪಟ್ಟ 47 ದೇಗುಲಗಳಲ್ಲೂ ಇವತ್ತು ಪೂಜೆ ನಡೆಯಲಿದೆ.
ಹಣಗೆರೆ ಕಟ್ಟೆಯಲ್ಲಿ ದರ್ಶನಕ್ಕಷ್ಟೇ ಅವಕಾಶ
ತೀರ್ಥಹಳ್ಳಿ ತಾಲೂಕಿನಲ್ಲಿ 179 ಮುಜರಾಯಿ ದೇವಸ್ಥಾನಗಳು ಸೇರಿ ದೇಗುಲಗಳ ಬಾಗಿಲು ತೆಗೆಯಲಾಗುತ್ತದೆ. ಇನ್ನು ಹಣಗೆರೆ ಕಟ್ಟೆಯ ಚೌಡಮ್ಮ, ಭೂತರಾಯಸ್ವಾಮಿ ಮತ್ತು ಸಯ್ಯದ್ ಸಾದತ್ ದರ್ಗಾದಲ್ಲಿ ದರ್ಶನಕ್ಕಷ್ಟೇ ಅವಕಾಶ ನೀಡಲಾಗಿದೆ.
ಶಿಕಾರಿಪುರದ ಶ್ರೀ ಹುಚ್ಚರಾಯಸ್ವಾಮಿ ದೇವಾಲಯಕ್ಕೆ ಸುಣ್ಣ, ಬಣ್ಣ ಬಳಿಯಲಾಗಿದೆ. ತೊಗರ್ಸಿ ಶ್ರೀ ಮಲ್ಲಿಕಾರ್ಜುನಸ್ವಾಮಿ ದೇವಸ್ಥಾನವು ಇಂದು ಬಾಗಿಲು ತೆಗೆಯಲಾಗುತ್ತಿದೆ.
ಹೊಂಬುಜಕ್ಕೆ ಪೂಜಾ ಸಾಮಗ್ರಿ ತರುವಂತಿಲ್ಲ
ರಿಪ್ಪನ್‍ಪೇಟೆ ಸಮೀಪದ ಹೊಂಬುಜ ಜೈನಮಠದ ಆವರಣದಲ್ಲಿರುವ ಶ್ರೀ ಪದ್ಮಾವತಿದೇವಿ ಮತ್ತು ಬಸದಿಗಳ ದರ್ಶನಕ್ಕಷ್ಟೇ ಅವಕಾಶ ಕಲ್ಪಿಸಲಾಗಿದೆ. ಬೆಳಗ್ಗೆ 10.30ರಿಂದ ಮಧ್ಯಾಹ್ನ 12 ಗಂಟೆವರೆಗೆ ದರ್ಶನಕ್ಕೆ ಅವಕಾಶವಿದೆ. ಭಕ್ತರು ಪೂಜಾ ಸಾಮಗ್ರಿ ತರುವಂತಿಲ್ಲ. ಒಬ್ಬರಿಗೆ ಹತ್ತು ನಿಮಿಷವಷ್ಟೇ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.
ಸಿಗಂದೂರು ದೇವಿ ದರ್ಶನ ಸದ್ಯಕ್ಕಿಲ್ಲ
ದೊಡ್ಡ ಸಂಖ್ಯೆಯಲ್ಲಿ ಭಕ್ತರನ್ನು ಸೆಳೆಯುವ ಸಿಗಂದೂರು ಶ್ರೀ ಚೌಡೇಶ್ವರಿ ದೇವಸ್ಥಾನ ಸದ್ಯಕ್ಕೆ ಓಪನ್ ಆಗುವುದಿಲ್ಲ. ಸ್ಥಳೀಯರ ಮನವಿ ಮೇರೆಗೆ ಮತ್ತು ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ದೃಷ್ಟಿಯಿಂದ ಸದ್ಯಕ್ಕೆ ದೇಗುಲದ ಬಾಗಿಲು ತೆಗೆಯದಿರಲು ನಿರ್ಧರಿಸಲಾಗಿದೆ. ಜೂ.15ರ ಬಳಿಕ ಈ ಬಗ್ಗೆ ತೀರ್ಮಾನಿಸಲಾಗುತ್ತದೆ ಎಂದು ತಿಳಿದು ಬಂದಿದೆ.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]