ಶಿವಮೊಗ್ಗ ಲೈವ್.ಕಾಂ | SHIMOGA NEWS | 25 APRIL 2021
ವೀಕೆಂಡ್ ಕರ್ಫ್ಯೂಗೆ ಜಿಲ್ಲೆಯಾದ್ಯಂತ ಉತ್ತಮ ಸ್ಪಂದನೆ ಸಿಕ್ಕಿದೆ. ಬಹುತೇಕ ಜನರು ಮನೆಯಿಂದ ಹೊರಬಾರದೆ ಮೊದಲ ದಿನ ಕರ್ಫ್ಯೂಗೆ ಸ್ಪಂದಿಸಿದ್ದಾರೆ.
ಯಾವ್ಯಾವ ತಾಲೂಕಿನಲ್ಲಿ ಹೇಗಿತ್ತು ಕರ್ಫ್ಯೂ?
ಶಿವಮೊಗ್ಗ ತಾಲೂಕು
ಶಿವಮೊಗ್ಗ ನಗರ ಮತ್ತು ಹೊರ ವಲಯದಲ್ಲಿ ಪೊಲೀಸರು ಬ್ಯಾರಿಕೇಡ್ ಹಾಕಿ, ವಾಹನ ಸಂಚಾರಕ್ಕೆ ಬ್ರೇಕ್ ಹಾಕಿದ್ದರು. ಗಸ್ತು ಹೆಚ್ಚಿಸಿದ್ದರು. ಅಗತ್ಯ ವಸ್ತುಗಳ ಖರೀದಿಗೆ ಆಗಮಿಸಿದ್ದ ಜನರು ಬಳಿಕ ಮನೆ ಸೇರಿದ್ದರು. ನಡುವೆ ಹೊರ ಬರುತ್ತಿದ್ದವರಿಗೆ ಪೊಲೀಸರು ಅಲ್ಲಲ್ಲಿ ವಿಚಾರಿಸಿ ಬಿಡುತ್ತಿದ್ದರು. ಅನಗತ್ಯವಾಗಿ ಓಡಾಡುತ್ತಿದ್ದವರಿಗೆ ಬಿಸಿ ಮುಟ್ಟಿಸಿದ್ದಾರೆ.
ಭದ್ರಾವತಿ ತಾಲೂಕು
ವಾರಾಂತ್ಯದ ಕರ್ಫ್ಯೂಗೆ ಭದ್ರಾವತಿ ತಾಲುಕಿನಲ್ಲೂ ಜನರು ಪೂರಕವಾಗಿ ಸ್ಪಂದಿಸಿದ್ದಾರೆ. ಅಂಬೇಡ್ಕರ್ ಸರ್ಕಲ್, ಮಾಧವಾಚಾರ್ ಸರ್ಕಲ್, ರಂಗಪ್ಪ ಸರ್ಕಲ್, ಹಾಲಪ್ಪ ವೃತ್ತದಲ್ಲಿ ಜನ ಸಂಚಾರ ಇರಲಿಲ್ಲ. ಇನ್ನು, ಬಿ.ಹೆಚ್.ರಸ್ತೆ, ತರೀಕೆರೆ ರೋಡ್, ಚನ್ನಗಿರಿ ರಸ್ತೆಯಲ್ಲಿ ವಾಹನಗಳು ಇರಲಿಲ್ಲ. ಪ್ರಮುಖ ಕಡೆ ಪೊಲೀಸರು ಬ್ಯಾರಿಕೇಡ್ ಹಾಕಿ, ವಾಹನಗಳ ತಪಾಸಣೆ ನಡೆಸುತ್ತಿದ್ದರು. ಬಸ್ಸು ಮತ್ತು ರೈಲು ಸಂಚಾರವಿದ್ದರೂ ಕೆಎಸ್ಆರ್ಟಿಸಿ ಬಸ್ ನಿಲ್ದಾಣ ಮತ್ತು ರೈಲ್ವೆ ನಿಲ್ದಾಣದಲ್ಲಿ ಜನರು ಕಾಣಿಸಲಿಲ್ಲ.
ಸಾಗರ ತಾಲೂಕು
ವಾರಾಂತ್ಯದ ಕರ್ಫ್ಯೂಗೆ ಸಾಗರ ತಾಲೂಕಿನಲ್ಲೂ ಉತ್ತಮ ಸ್ಪಂದನೆ ಸಿಕ್ಕಿದೆ. ಪ್ರಮುಖ ರಸ್ತೆಗಳಲ್ಲಿ ಜನ ಮತ್ತು ವಾಹನ ತಗ್ಗಿತ್ತು. ಹೊಟೇಲ್ ಸರ್ಕಲ್ನಲ್ಲಿ ಪೊಲೀಸರು ವಾಹನ ತಪಾಸಣೆ ನಡೆಸಿದರು. ಡಿವೈಎಸ್ಪಿ ವಿನಾಯಕ್ ಶೆಟ್ಗೆರಿ, ಸಾಗರ ನಗರ ಸಿಪಿಐ ಅಶೋಕ್ ಕುಮಾರ್, ಗ್ರಾಮಾಂತರ ಸಿಪಿಐ ಗಿರೀಶ್ ನೇತೃತ್ವದಲ್ಲಿ ವಾಹನ ತಪಾಸಣೆ ನಡೆಸಲಾಯಿತು. ಅನಗತ್ಯವಾಗಿ ಓಡಾಡುವವರ ವಾಹನ ಸೀಜ್ ಮಾಡುವ ಎಚ್ಚರಿಕೆ ನೀಡಿದರು. ಆನಂದಪುರದಲ್ಲೂ ಕರ್ಫ್ಯೂ ಹಿನ್ನೆಲೆ ಜನರು ಮನೆಯಿಂದ ಹೊರಬರಲಿಲ್ಲ.
ಸೊರಬ ತಾಲೂಕು
ಸೊರಬ ಪಟ್ಟಣದಲ್ಲಿ ವಾರಾಂತ್ಯ ಕರ್ಫ್ಯೂ ಹಿನ್ನೆಲೆ ಜನ, ವಾಹನ ಸಂಚಾರ ಇರಲಿಲ್ಲ. ಪ್ರಮುಖ ರಸ್ತೆಗಳು ಬಿಕೋ ಅನ್ನುತ್ತಿದ್ದವು. ಬಸ್ ಸಂಚಾರವಿಲ್ಲದೆ ಖಾಸಗಿ ಬಸ್ ನಿಲ್ದಾಣ ಖಾಲಿ ಖಾಲಿಯಾಗಿತ್ತು. ಪಟ್ಟಣದಾದ್ಯಂತ ಪೊಲೀಸರು ಗಸ್ತು ತಿರುಗಿ, ಕರ್ಫ್ಯೂ ಕುರಿತು ಮೈಕ್ ಮೂಲಕ ಆನೌನ್ಸ್ ಮಾಡುತ್ತಿದ್ದರು. ಇನ್ನು, ಆನವಟ್ಟಿ, ಜಡೆ ಭಾಗದಲ್ಲೂ ಕರ್ಫ್ಯೂ ಹಿನ್ನೆಲೆ ಜನರು ಮನೆಯಿಂದ ಹೊರಗೆ ಕಾಣಿಸಲಿಲ್ಲ.
ತೀರ್ಥಹಳ್ಳಿ ತಾಲೂಕು
ತಾಲೂಕಿನಾದ್ಯಂತ ವೀಕೆಂಡ್ ಕರ್ಫ್ಯೂ ಹಿನ್ನೆಲೆ ಪೊಲೀಸರು ಬೆಳಗ್ಗೆಯಿಂದಲೇ ಗಸ್ತು ಆರಂಭಿಸಲಾಗಿತ್ತು. ಪ್ರಮುಖ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿತ್ತು. ಅನಗತ್ಯವಾಗಿ ಓಡಾಡುವವರಿಗೆ ಪೊಲೀಸರು ತಿಳಿ ಹೇಳಿದರು. ಆಗುಂಬೆ, ಕಮ್ಮರಡಿ, ಕನ್ನಂಗಿ, ಬೆಜ್ಜವಳ್ಳಿ, ಕೋಣಂದೂರು ಭಾಗದಲ್ಲಿಯೂ ವೀಕೆಂಡ್ ಕರ್ಫ್ಯೂಗೆ ಉತ್ತಮ ಸ್ಪಂದನೆ ಸಿಕ್ಕಿದೆ.
ಹೊಸನಗರ ತಾಲೂಕು
ತಾಲೂಕಿನಲ್ಲಿ ಮೆಡಿಕಲ್ ಶಾಪ್, ಆಸ್ಪತ್ರೆ ಹೊರತು ಬೇರೆಲ್ಲ ಅಂಗಡಿ ಬಂದ್ ಆಗಿದ್ದವು. ಹಾಗಾಗಿ ಸದಾ ಗಿಜಿಗುಡುತ್ತಿದ್ದ ಆರ್.ಕೆ.ರಸ್ತೆ, ಶಿವಪ್ಪನಾಯಕ ರಸ್ತೆಗಳಲ್ಲಿ ಮೌನ ಆವರಿಸಿತ್ತು. ವೀಕೆಂಡ್ ಕರ್ಫ್ಯೂ ಹಿನ್ನೆಲೆ ಜನರು ಪಟ್ಟಣದ ಕಡೆಗೆ ಬಾರದೆ ಗದ್ದೆಗೆ ಕಡೆ ತೆರಳಿದ್ದರಿಂದ, ಜನರಿಲ್ಲದೆ ರಸ್ತೆಗಳೆಲ್ಲ ಬಿಕೋ ಅನ್ನುತ್ತಿದ್ದವು.
ಶಿಕಾರಿಪುರ ತಾಲೂಕು
ತಾಲೂಕಿನಲ್ಲಿ ಉತ್ತಮ ಸ್ಪಂದನೆ ಸಿಕ್ಕಿದೆ. ಪೊಲೀಸರು ಗಸ್ತು ಮತ್ತು ವಾಹನ ತಪಾಸಣೆ ನಡೆಸುತ್ತಿದ್ದ ಹಿನ್ನೆಲೆ, ಪಟ್ಟಣದಲ್ಲಿ ಜನ ಸಂಚಾರ ಕಡಿಮೆಯಾಗಿತ್ತು. ಆದರೆ ಹೆಚ್ಚಿನ ಜನರು ಗದ್ದೆ, ಕೃಷಿ ಚಟುವಟಿಕೆ ನೆಪ ಹೇಳಿ ಓಡಾಡುತ್ತಿದ್ದರು. ಕುಂಟು ನೆಪ ಹೇಳಿಕೊಂಡು ಓಡಾಡುತ್ತಿದ್ದವರಿಗೆ ಪೊಲೀಸರು ದಂಡ ವಿಧಿಸಿದ್ದಾರೆ. ಇನ್ಸ್‍ಪೆಕ್ಟರ್ ರಾಜು ರೆಡ್ಡಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಯಿತು.
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ shivamoggalive@gmail.com
- ಶಿವಮೊಗ್ಗದ ಫ್ರೀಡಂ ಪಾರ್ಕ್ನಲ್ಲಿ 3 ದಿನ ಫಲಪುಷ್ಪ ಪ್ರದರ್ಶನ, ಈ ವರ್ಷದ ವಿಶೇಷತೆ ಏನು?
- 2022ರಲ್ಲಿ ಅಪ್ಲೋಡ್ ಆಗಿದ್ದ ವಿಡಿಯೋ, ಶಿವಮೊಗ್ಗದ ಯುವಕನಿಗೆ ಈಗ ಶುರು ಸಂಕಷ್ಟ
- ಅಡಿಕೆ ಧಾರಣೆ | 22 ಜನವರಿ 2025 | ಇವತ್ತು ಯಾವ್ಯಾವ ಅಡಿಕೆ ಎಷ್ಟಿದೆ ರೇಟ್?
- ಸೈನ್ಸ್ ಮೈದಾನ, ಸಂಜೆ ಪಾರ್ಕಿಂಗ್ ಸ್ಥಳಕ್ಕೆ ಬಂದ ವ್ಯಕ್ತಿಗೆ ಕಾದಿತ್ತು ಆಘಾತ
- ಇನ್ಮುಂದೆ ಕಾಗೋಡು ತಿಮ್ಮಪ್ಪ, ಡಾಕ್ಟರ್ ಕಾಗೋಡು ತಿಮ್ಮಪ್ಪ
- ಕುವೆಂಪು ವಿವಿ, 84 ವಿದ್ಯಾರ್ಥಿಗಳಿಗೆ ಚಿನ್ನದ ಪದಕ, ಹೇಗಿತ್ತು 34ನೇ ಘಟಿಕೋತ್ಸವ?