ಶಿವಮೊಗ್ಗ: ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ಅವಹೇಳನ ಮಾಡಿರುವ ಮಾಜಿ ಸಂಸದ ಪ್ರತಾಪ್ ಸಿಂಹಗೆ ಸೂಕ್ತ ಚಿಕಿತ್ಸೆ (treatment) ಕೊಡಿಸಬೇಕು ಎಂದು ಶಿವಮೊಗ್ಗ ಯುವ ಕಾಂಗ್ರೆಸ್ ಕಾರ್ಯಕರ್ತರು ಆಗ್ರಹಿಸಿದ್ದಾರೆ.ಸುದ್ದಿಯ ಮುಂದಿನ 12 ಪ್ಯಾರಾಗಳು ಕೆಳಗಿವೆ.
ಗೋಪಿ ವೃತ್ತದಲ್ಲಿರುವ ಅಂಚೆ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದ ಯುವ ಕಾಂಗ್ರೆಸ್ ಕಾರ್ಯಕರ್ತರು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಮತ್ತು ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ ಮನವಿ ಪತ್ರಗಳನ್ನು ಪೋಸ್ಟ್ ಮಾಡಿದರು.
ಮನವಿ ಪತ್ರದಲ್ಲಿ ಏನೇನಿದೆ? ಇಲ್ಲಿದೆ ಪಾಯಿಂಟ್ಸ್
ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರನ್ನು ಅನ್‌ಪಡ್ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಅವಹೇಳನ ಮಾಡಿದ್ದಾರೆ. ಪತ್ರಕರ್ತರಾಗಿ, ಸಂಸದರಾಗಿದ್ದವರಿಗೆ ಸಂವಿಧಾನ, ವ್ಯವಸ್ಥೆಯ ಅರಿವಿರಬೇಕಿತ್ತು. ಅವಹೇಳನಕಾರಿ ಹೇಳಿಕೆ ಮೂಲಕ ಸಂವಿಧಾನಕ್ಕೆ ಅಪಚಾರ ಮಾಡಿದ್ದಾರೆ.
ಮಧು ಬಂಗಾರಪ್ಪ ಶಿಕ್ಷಣ ಸಚಿವರಾದ ಮೇಲೆ ಎಸ್ಸೆಸ್ಸೆಲ್ಸಿ, ಪಿಯುಸಿ ಫಲಿತಾಂಶ ಗಣನೀಯ ಏರಿಕೆಯಾಗಿದೆ. ಶೈಕ್ಷಣಿಕ ವ್ಯವಸ್ಥೆ ಕೂಡ ಸುಧಾರಿಸಿದೆ.
ಸಂಸದರಾಗಿದ್ದಾಗ ಪ್ರತಾಪ್ ಸಿಂಹ ಕೇವಲ ಪಕ್ಷದ ನಾಯಕರ ಓಲೈಕೆ ಮಾಡುತ್ತ, ಟೀಕೆಗಳನ್ನು ಮಾಡುತ್ತಿದ್ದರು. ಮೈಸೂರು – ಕೊಡುಗು ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡಿಲ್ಲ. ಇದೇ ಕಾರಣಕ್ಕೆ ಅವರಿಗೆ ಪಕ್ಷ ಈ ಬಾರಿ ಲೋಕಸಭೆಗೆ ಟಿಕೆಟ್ ನೀಡಲಿಲ್ಲ.
ಚುನಾವಣೆಗೆ ಟಿಕೆಟ್ ಸಿಗದೆ ರಾಜಕೀಯ ನಿರಾಶ್ರಿತರಾಗಿರುವ ಪ್ರತಾಪ್ ಸಿಂಹಗೆ ಚಿಕಿತ್ಸೆಯ ಅಗತ್ಯವಿದೆ. ಯುವ ಕಾಂಗ್ರೆಸ್‌ನಿಂದಲೇ ಆಂಬುಲೆನ್ಸ್ ವ್ಯವಸ್ಥೆ ಮಾಡಲಾಗುತ್ತದೆ. ಬಿಜೆಪಿ ವರುಷ್ಠರು ಕೂಡಲೆ ಚಿಕಿತ್ಸೆ ಕೊಡಿಸಲಿ.
ಮಾಜಿ ಸಂಸದ ಪ್ರತಾಪ್ ಸಿಂಹ ಮುಖವಾಡ ಧರಿಸಿದ್ದ ಯುವ ಕಾಂಗ್ರೆಸ್ ಕಾರ್ಯಕರ್ತನೊಬ್ಬ ನಡುಬೀದಿಯಲ್ಲಿ ಕುಳಿತು ಅಣಕು ಪ್ರದರ್ಶನ ಮಾಡಿದರು.
ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರ್ಷಿತ್ ಗೌಡ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಹಾಪ್‌ಕಾಮ್ಸ್ ಅಧ್ಯಕ್ಷ ವಿಜಯಕುಮಾರ್, ಪ್ರಮುಖರಾದ ಆಸಿಫ್, ಮಧುಸೂದನ್, ಚೇತನ್, ಪ್ರವೀಣ್ ಕುಮಾರ್, ಸಕ್ಲೇನ್ ಸೇರಿ ಹಲವರು ಇದ್ದರು.