ಶಿವಮೊಗ್ಗ: ಆನೆ ನಿಯಂತ್ರಣಕ್ಕೆ ಅರಣ್ಯ ಇಲಾಖೆ ತೆಗೆದಿದ್ದ ಟ್ರಂಚ್‌ಗೆ (Trench) ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ದೇವಸ್ಥಾನದಿಂದ ಮನೆ ಬಾರದ ಹಿನ್ನೆಲೆ ಹುಡುಕಾಟ ನಡೆಸಿದಾಗ ಗುಂಡಿಯಲ್ಲಿ ಮೃತದೇಹ ಪತ್ತೆಯಾಗಿದೆ.
ಶಿವಮೊಗ್ಗ ತಾಲೂಕು ತಮ್ಮಡಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಡಿನಕೊಟ್ಟಿಗೆ ಗ್ರಾಮದಲ್ಲಿ ಘಟನೆ ಸಂಭವಿಸಿದೆ. ನಾಗರಾಜ್ (32) ಎಂಬುವವರು ಮೃತಪಟ್ಟಿದ್ದಾರೆ. ಸುದ್ದಿಯ ಮುಂದಿನ 7 ಪ್ಯಾರಾಗಳು ಕೆಳಗಿವೆ.
ದೇವಸ್ಥಾನದಿಂದ ಮನೆಗೆ ಬಂದಿರಲಿಲ್ಲ

ಊರಿನಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗಣೇಶ ಮೂರ್ತಿಯ ವಿಸರ್ಜನೆ ಬಳಿಕ ಆಡಿಕೊಟ್ಟಿಗೆ ಗ್ರಾಮದ ದೇವಸ್ಥಾನದಲ್ಲಿ ಗ್ರಾಮಸ್ಥರು ಸಭೆ ನಡೆಸಿದರು. ಗಣೇಶೋತ್ಸವದ ಹಣಕಾಸು ವಿಚಾರವಾಗಿ ಚರ್ಚಿಸಿ ಮನೆಗೆ ತೆರಳಿದ್ದರು. ಇಂದು ಬೆಳಗ್ಗೆವರೆಗೆ ನಾಗರಾಜ್ ಮನೆಗೆ ಹೋಗಿರಲಿಲ್ಲ. ಹಾಗಾಗಿ ಕುಟುಂಬದವರು, ಗ್ರಾಮಸ್ಥರು ಹುಡುಕಾಟ ನಡೆಸಿದ್ದರು. ಸಂಜೆ ಹೊತ್ತಿಗೆ ದೇವಸ್ಥಾನದ ಪಕ್ಕದಲ್ಲಿ ಆನೆ ನಿಯಂತ್ರಣಕ್ಕೆ ತೆಗೆಯಲಾಗಿದ್ದ ಗುಂಡಿಯಲ್ಲಿ ನಾಗರಾಜ್ ಮೃತದೇಹ ಪತ್ತೆಯಾಗಿದೆ.
ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ
ಆಡಿನಕೊಟ್ಟಿಗೆ ವ್ಯಾಪ್ತಿಯಲ್ಲಿ ಆನೆ ನಿಯಂತ್ರಣ ಟ್ರಂಚ್ (ಇಪಿಟಿ) ತೆಗೆಯುವಾಗ ಗ್ರಾಮಸ್ಥರು ವಿರೋಧಿಸಿದ್ದರು. ಮನೆಗಳ ಸಮೀಪ ಟ್ರಂಚ್ ತೆಗೆಯದಂತೆ ಆಗ್ರಹಿಸಿದ್ದರು. ಈಗ ಟ್ರಾಂಚ್‌ಗೆ ಬಿದ್ದು ನಾಗರಾಜ್ ಮೃತಪಟ್ಟಿದ್ದು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಬರಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಕುಂಸಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಇದನ್ನೂ ಓದಿ » ಶಿವಮೊಗ್ಗ ಸಿಟಿ, ಆಯನೂರು, ಹಾರನಹಳ್ಳಿ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ನಿಷೇಧ, ಯಾವ್ಯಾವ ದಿನ ಎಲ್ಲೆಲ್ಲಿ ಡ್ರೈ ಡೇ?