ಹೋಂ ಸ್ಟೇ ಮಾಲೀಕ, ರೂಂ ಬಾಯ್‌ ಸೇರಿ ಮೂವರಿಗೆ 20 ವರ್ಷ ಜೈಲು, ದಂಡ, ಕಾರಣವೇನು?

 ಶಿವಮೊಗ್ಗ  LIVE 

ಶಿವಮೊಗ್ಗ: ಬಾಲಕಿಯನ್ನು ಅನಧಿಕೃತ ಹೋಂ ಸ್ಟೇಗೆ (homestay) ಕರೆದೊಯ್ದು ಅಲ್ಲಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರಿಗೆ ಇಲ್ಲಿನ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಪೋಕ್ಸೊ ಕಾಯ್ದೆಯಡಿ 20 ವರ್ಷ ಜೈಲು ಶಿಕ್ಷೆ ವಿಧಿಸಿದೆ.

2023ರ ಸೆಪ್ಟೆಂಬರ್ 11ರಂದು 26 ವರ್ಷದ ವ್ಯಕ್ತಿಯೊಬ್ಬ 16 ವರ್ಷದ ಬಾಲಕಿಯನ್ನು ಬಲವಂತವಾಗಿ ಕಾರಿನಲ್ಲಿ ಹೋಂಸ್ಟೇಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ ನಡೆಸಿದ್ದನು. ಈ ಬಗ್ಗೆ ನೊಂದ ಬಾಲಕಿ ನೀಡಿದ ದೂರು ಆಧರಿಸಿ ಸಾಗರದ ಟೌನ್ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ತನಿಖೆ ನಡೆಸಿದ್ದ ಗೋಪಾಲಕೃಷ್ಣ ಟಿ.ನಾಯಕ್, ಮೂವರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಲೈಂಗಿಕ ದೌರ್ಜನ್ಯ ಎಸಗಿದ್ದ ವ್ಯಕ್ತಿಗೆ, ಬಾಲಕಿಗೆ ಸಂಬಂಧಿಸಿದಂತೆ ಸೂಕ್ತ ದಾಖಲೆಗಳನ್ನು ಪಡೆಯದೇ ಹಾಗೂ ವಯಸ್ಸು ಪರಿಶೀಲಿಸದೇ ಉಳಿದುಕೊಳ್ಳಲು ಅವಕಾಶ ನೀಡಿದ್ದ 58 ವರ್ಷದ ಹೋಂ ಸ್ಟೇ ಮಾಲೀಕ ಹಾಗೂ 24 ವರ್ಷದ ರೂಂ ಬಾಯ್ ದೌರ್ಜನ್ಯಕ್ಕೆ ಸಹಕಾರ ನೀಡಿದ್ದು, ತನಿಖೆಯಿಂದ ದೃಢಪಟ್ಟಿದೆ ಎಂದು ಆರೋಪ ಪಟ್ಟಿಯಲ್ಲಿ ವಿವರಿಸಿದ್ದರು.

Shivamogga-Court-Balaraja-Urs-Road

ಇದನ್ನೂ ಓದಿ » ಬೊಲೇರೋ ವಾಹನ ಪಲ್ಟಿ, ಮಹಿಳೆ ಸಾವು, ಎಲ್ಲಿ? ಹೇಗಾಯ್ತು ಘಟನೆ?

ಪ್ರಕರಣದ ವಿಚಾರಣೆ ನಡೆಸಿದ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ನಿಂಗನಗೌಡ ಬಿ.ಪಾಟೀಲ, ಮೂವರಿಗೂ 20 ವರ್ಷ ಸಾದಾ ಕಾರಾಗೃಹ ಶಿಕ್ಷೆ, ಮೊದಲ ಆರೋಪಿಗೆ ₹71,000, ಎರಡನೇ ಹಾಗೂ ಮೂರನೇ ಆರೋಪಿಗೆ ತಲಾ ₹10,000 ದಂಡ ವಿಧಿಸಿ ಆದೇಶಿಸಿದ್ದಾರೆ. ಸರ್ಕಾರಿ ವಕೀಲ ಶ್ರೀಧರ್ ವಾದ ಮಂಡಿಸಿದ್ದರು.

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment