ಭದ್ರಾವತಿಯ ಮಹಿಳೆ ಸೇರಿ ಇಬ್ಬರಿಗೆ 3 ವರ್ಷ ಕಠಿಣ ಜೈಲು ಶಿಕ್ಷೆ, ₹40,000 ದಂಡ, ಏನಿದು ಕೇಸ್‌?

 ಶಿವಮೊಗ್ಗ  LIVE 

ಭದ್ರಾವತಿ: ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ, ಮರಕ್ಕೆ ಕಟ್ಟಿ ಹಾಕಿದ್ದ ಆರೋಪಿಗಳಿಗೆ ಭದ್ರಾವತಿಯ ನ್ಯಾಯಾಲಯವು 3 ವರ್ಷಗಳ ಕಠಿಣ ಸಜೆ (Jail) ಹಾಗೂ ದಂಡ ವಿಧಿಸಿ ತೀರ್ಪು ನೀಡಿದೆ.

ಘಟನೆಯ ವಿವರ

2021ರ ನವೆಂಬರ್ 30ರಂದು ಭದ್ರಾವತಿ ತಾಲೂಕು ಹಿರಿಯೂರು ಗ್ರಾಮದ ಬಸವರಾಜ್ ಎಂಬುವವರು ತಮ್ಮ ಜಮೀನಿಗೆ ನೀರು ಹಾಯಿಸಲು ಹೋದಾಗ, ನಾಗರಾಜ್, ಚಿದಾನಂದ ಮತ್ತು ಶೀಲಾ ಎಂಬುವವರು ಮೆಷಿನ್ ಮೂಲಕ ಭತ್ತ ಕಟಾವು ಮಾಡುತ್ತಿದ್ದರು. ಈ ವೇಳೆ ಜಮೀನಿನ ವಿಚಾರವಾಗಿ ಗಲಾಟೆ ಆರಂಭವಾಗಿದ್ದು, ಬಸವರಾಜ್ ಅವರಿಗೆ ದೊಣ್ಣೆಯಿಂದ ಮನಬಂದಂತೆ ಹೊಡೆದಿದ್ದಾರೆ. ಅಷ್ಟೇ ಅಲ್ಲದೆ, ಅವರನ್ನು ಹಗ್ಗದಿಂದ ಅಡಿಕೆ ಮರಕ್ಕೆ ಕಟ್ಟಿ ಹಾಕಿ, ಮಚ್ಚಿನಿಂದ ತಲೆ ಮತ್ತು ಮುಖಕ್ಕೆ ಹೊಡೆದು ತೀವ್ರವಾಗಿ ಗಾಯಗೊಳಿಸಿ ಜೀವ ಬೆದರಿಕೆ ಹಾಕಿದ್ದರು ಎಂದು ಪೊಲೀಸ್‌ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಆರೋಪ ಸಾಬೀತು, ಶಿಕ್ಷೆ ಪ್ರಕಟ

ಭದ್ರಾವತಿ ಪೇಪರ್ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಂದಿನ ಪೊಲೀಸ್ ಉಪ ನಿರೀಕ್ಷಕಿ ಶಿಲ್ಪಾ ನಾಯನೇಗಲಿ ಅವರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣ ಪತ್ರ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಭದ್ರಾವತಿಯ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಇಂದಿರಾ ಮೈಲಸ್ವಾಮಿ ಚೆಟ್ಟಿಯಾರ್ ಅವರು, ನಾಗರಾಜ್.ಹೆಚ್ (48) ಮತ್ತು ಶೀಲಾ (32) ಎಂಬುವವರ ಮೇಲೆ ಅಪರಾಧ ದೃಢಪಟ್ಟ ಹಿನ್ನೆಲೆಯಲ್ಲಿ ಶಿಕ್ಷೆ ಪ್ರಕಟಿಸಿದ್ದಾರೆ.

Jail-for-two-persons-including-a-lady-at-Bhadravathi

ಆರೋಪಿಗಳಿಗೆ 3 ವರ್ಷಗಳ ಕಠಿಣ ಜೈಲು ಶಿಕ್ಷೆ, ತಲಾ ₹40,000 ದಂಡ ವಿಧಿಸಿದ್ದಾರೆ. ದಂಡ ಪಾವತಿಸಲು ತಪ್ಪಿದಲ್ಲಿ ಹೆಚ್ಚುವರಿ 3 ತಿಂಗಳ ಸಾದಾ ಶಿಕ್ಷೆ ಅನುಭವಿಸಬೇಕು ಎಂದು ಆದೇಶಿಸಲಾಗಿದೆ. ಸರ್ಕಾರದ ಪರವಾಗಿ ರತ್ನಮ್ಮ.ಪಿ ಅವರು ವಾದ ಮಂಡಿಸಿದ್ದರು ಎಂದು ಪೊಲೀಸ್‌ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ » ಇನ್‌ಸ್ಟಾಗ್ರಾಂನಲ್ಲಿ ಮಹಿಳೆಯ ಖಾಸಗಿ ಫೋಟೊ ಅಪ್‌ಲೋಡ್, ಡಿಲೀಟ್‌ ಮಾಡಲು ಹಣಕ್ಕೆ ಡಿಮಾಂಡ್‌

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment