ರಾಜ್ಯವನ್ನೇ ಬೆಚ್ಚಿಬೀಳಿಸಿದ ಶಿವಮೊಗ್ಗದ ಡ್ರೈವರ್‌, 19 ಅಕೌಂಟ್, 25 ATM ಕಾರ್ಡ್‌, ₹55 ಕೋಟಿ ನಷ್ಟ, ಏನಿದು ಕೇಸ್?

ಶಿವಮೊಗ್ಗ: ಹಣದ ಆಮಿಷವೊಡ್ಡಿ ಸಾರ್ವಜನಿಕರ ಬ್ಯಾಂಕ್‌ ಖಾತೆಯ (Bank Account) ಸಂಪೂರ್ಣ ವಿವರ ಪಡೆದು ಸೈಬರ್‌ ವಂಚಕರಿಗೆ ನೀಡುತ್ತಿದ್ದ ಪ್ರಕರಣ ಸಂಬಂಧ ಶಿವಮೊಗ್ಗದ ಶರತ್‌ ಕುಮಾರ್‌ ಎಂಬಾತನನ್ನು ಬಂಧಿಸಲಾಗಿದೆ. ಈತನಿಂದ ಹಲವು ಬ್ಯಾಂಕ್‌ ಪಾಸ್‌ಬುಕ್‌ಗಳು, ಎಟಿಎಂ ಕಾರ್ಡ್‌ಗಳು, ಚೆಕ್‌ ಪುಸ್ತಕಗಳನ್ನು ವಶಕ್ಕೆ ಪಡೆಯಲಾಗಿದೆ.

ಬಂಧಿತ ಕೆ.ಶರತ್‌ ಕುಮಾರ್‌ ಅಲಿಯಾಸ್‌ ಗುಂಡ ಶಿವಮೊಗ್ಗದ ತುಂಗಾ ನಗರ ನಿವಾಸಿ. ಈತನ ವಿರುದ್ಧ ಈಚೆಗೆ ಶಿವಮೊಗ್ಗ ಸಿ.ಇ.ಎನ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

Shivamogga-CEN-police-nab-Driver-Sharath-Kumar.

ಸ್ನೇಹಿತನ ಬ್ಯಾಂಕ್‌ ವಿವರ ವಂಚಕರಿಗೆ ಕೊಟ್ಟಿದ್ದ

ಚಾಲಕ ವೃತ್ತಿ ಮಾಡುತ್ತಿದ್ದ ಶರತ್‌ ಕುಮಾರ್‌, ಟೀ ಅಂಗಡಿ ನಡೆಸುತ್ತಿದ್ದ ಆತನ ಸ್ನೇಹಿತ ಅಮಿತ್‌ ಎಂಬುವವರ ಬ್ಯಾಂಕ್‌ ಖಾತೆಯ ವಿವರ ಪಡೆದಿದ್ದ. ಜೊತೆಗೆ ಪಾಸ್‌ ಬುಕ್‌, ಎಟಿಎಂ ಕಾರ್ಡ್‌ ಮೊಬೈಲ್‌ ನಂಬರ್‌ಗಳನ್ನು ಕೂಡ ಪಡೆದುಕೊಂಡಿದ್ದ. ಇದಕ್ಕೆ ಪ್ರತಿಯಾಗಿ 15 ದಿನಕ್ಕೊಮ್ಮೆ ಕಮಿಷನ್‌ ಕೊಡುವುದಾಗಿ ನಂಬಿಸಿದ್ದ. ಕಮಿಷನ್‌ ಆಸೆಗೆ ಅಮಿತ್‌ ಎಲ್ಲ ವಿವರ ಒದಗಿಸಿದ್ದರು.

ಸ್ವಲ್ಪ ಸಮಯದ ಬಳಿಕ ಶರತ್‌ ಕುಮಾರ್‌, ಸ್ನೇಹಿತ ಅಮಿತ್‌ನ ಬ್ಯಾಂಕ್‌ ಖಾತೆ ಫ್ರೀಜ್‌ ಆಗಿದೆ ಎಂದು ತಿಳಿಸಿದ್ದ. ಅನುಮಾನಗೊಂಡ ಅಮಿತ್‌ ಇಂಡಿಯನ್‌ ಓವರ್‌ಸೀಸ್‌ ಬ್ಯಾಂಕ್‌ಗೆ ಹೋಗಿ ತಮ್ಮ ಖಾತೆಯ ಕುರಿತು ವಿಚಾರಿಸಿದ್ದರು. ಈ ಬ್ಯಾಂಕ್‌ ಖಾತೆಯ ವಿರುದ್ಧ 51 ಸೈಬರ್‌ ಕ್ರೈಮ್‌ ಪ್ರಕರಣ ದಾಖಲಾಗಿದೆ ಎಂದು ಬ್ಯಾಂಕ್‌ ಸಿಬ್ಬಂದಿ ತಿಳಿಸಿದ್ದರು. ಆತಂಕಗೊಂಡ ಅಮಿತ್‌ ದೂರು ನೀಡಿದ್ದರು.

Shivamogga-CEN-police-nab-Driver-Sharath-Kumar.

55 ಕೋಟಿ ನಷ್ಟದ ಆರೋಪ

ಶಿವಮೊಗ್ಗದ ಸಿ.ಇ.ಎನ್‌ ಪೊಲೀಸರು ಆರೋಪಿ ಶರತ್‌ ಕುಮಾರ್‌ನನ್ನು ಬಂಧಿಸಿದ್ದಾರೆ. ಆತನಿಂದ ವಿವಿಧ ಬ್ಯಾಂಕ್‌ ಖಾತೆಗಳ 18 ಪಾಸ್‌ಬುಕ್‌ಗಳು, 25 ಎಟಿಎಂ ಕಾರ್ಡ್‌, 7 ಚೆಕ್‌ ಬುಕ್‌ಗಳು, 2 ಮೊಬೈಲ್‌ ಫೋನ್‌ಗಳು, 2 ಕ್ಯೂ ಆರ್‌ ಕೋಡ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಈತನ ಬಳಿ ಇದ್ದ 19 ಬಾಡಿಗೆ ಬ್ಯಾಂಕ್ ಖಾತೆಗಳ ವಿರುದ್ಧ ದೇಶಾದ್ಯಂತ 96ಕ್ಕೂ ಹೆಚ್ಚು ವಂಚನೆ ಪ್ರಕರಣ ದಾಖಲಾಗಿವೆ.

ಈ ಖಾತೆಗಳನ್ನು ಬಳಸಿಕೊಂಡು ಸಾರ್ವಜನಿಕರಿಗೆ ಸುಮಾರು ₹55,43,56,248 ಮೊತ್ತದ ವಂಚನೆ ಎಸಗಲಾಗಿದೆ. ಅಲ್ಲದೆ ಈ 19 ಖಾತೆಗಳಲಿಂದ ₹11,48,42,898 ಹಣ ವರ್ಗಾವಣೆ ಆಗಿರುವುದು ಬೆಳಕಿಗೆ ಬಂದಿದೆ. ಜಿಲ್ಲಾ ರಕ್ಷಣಾಧಿಕಾರಿ ಬಿ.ನಿಖಿಲ್ ಮಾರ್ಗದರ್ಶನದಲ್ಲಿ, ಹೆಚ್ಚುವರಿ ರಕ್ಷಣಾಧಿಕಾರಿಗಳಾದ ಕಾರಿಯಪ್ಪ, ರಮೇಶ್, ಶಿವಮೊಗ್ಗದ ಸೈಬರ್‌ ಕ್ರೈಮ್‌ ಡಿವೈಎಸ್‌ಪಿ ಕೃಷ್ಣಮೂರ್ತಿ, ಇನ್ಸ್‌ಪೆಕ್ಟರ್‌ ಮಂಜುನಾಥ್‌ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಶರತ್‌ ಕುಮಾರ್‌ನನ್ನು ಬಂಧಿಸಲಾಗಿದೆ. ಈತನಿಗೆ ನ್ಯಾಯಾಂಗ ಬಂಧನವಾಗಿದೆ.

SMS-Fraud-Shimoga-CEN-Police-Station.

ಶರತ್‌ ಕುಮಾರ್‌ ಒಬ್ಬನೆ ಅಲ್ಲ

ಸಾರ್ವಜನಿಕರ ಬ್ಯಾಂಕ್‌ ಖಾತೆಯ ವಿವರಗಳನ್ನು ಸೈಬರ್‌ ವಂಚಕರ ಕೈಗೆ ಒಪ್ಪಿಸುತ್ತಿರುವ ಜಾಲ ದೇಶಾದ್ಯಂತ ಹಬ್ಬಿಕೊಂಡಿದೆ. ಸೈಬರ್ ಕಮಾಂಡ್‌ ಘಟಕ ರಾಜ್ಯದಲ್ಲಿ 14 ಮಂದಿಯನ್ನು ಬಂಧಿಸಿದೆ.

ನಕಲಿ ಖಾತೆಗಳನ್ನು ಸೃಷ್ಟಿಸುತ್ತಿದ್ದವರ ವಿರುದ್ಧ ವಿರುದ್ಧ ಕಾರ್ಯಾಚರಣೆ ತೀವ್ರಗೊಳಿಸಲಾಗಿದೆ. ಬಂಧಿತರನ್ನು ವಿಚಾರಣೆ ನಡೆಸಲಾಗುತ್ತಿದೆ. ಒಂದು ವೇಳೆ ಆರೋಪಿಗಳ ಜತೆಗೆ ಬ್ಯಾಂಕ್‌ ಅಧಿಕಾರಿಗಳು ಶಾಮೀಲಾಗಿರುವುದು ಕಂಡುಬಂದರೆ, ಅಂತಹ ಅಧಿಕಾರಿಗಳ ವಿರುದ್ಧವೂ ಕ್ರಮ ತೆಗೆದುಕೊಳ್ಳಲಾಗುವುದು. ಪ್ರಣವ್‌ ಮೊಹಂತಿ, ಎಡಿಜಿಪಿ, ಕರ್ನಾಟಕ ಸೈಬರ್ ಕಮಾಂಡ್ ಸೆಂಟರ್‌

ದಂಧೆಕೋರರಿಗೆ ಸಿಗುತ್ತಿದ್ದ ಕಮಿಷನ್‌ ಎಷ್ಟು?

2021ರಿಂದ ಇದುವರೆಗೆ ನಡೆಸಿದ ತನಿಖೆಯಲ್ಲಿ ಸುಮಾರು 48,000 ಬಾಡಿಗೆ ಬ್ಯಾಂಕ್ ಖಾತೆಗಳು (ಮ್ಯೂಲ್ ಅಕೌಂಟ್ಸ್‌) ಅಕ್ರಮ ಚಟುವಟಿಕೆಗೆ ಬಳಕೆಯಾಗಿರುವುದು ಪತ್ತೆಯಾಗಿದೆ. ಈ ಖಾತೆಗಳ ಮೂಲಕ ಅಂದಾಜು 100 ಕೋಟಿ ರೂಪಾಯಿಗೂ ಹೆಚ್ಚು ಮೊತ್ತದ ಅಕ್ರಮ ಹಣಕಾಸು ವಹಿವಾಟು ನಡೆಸಲಾಗಿದೆ.

Online-Fraud-In-Shimoga

ಖಾತೆ ನೀಡಿಕೆಗೆ ಭಾರಿ ಹಣ: ಒಂದು ನಕಲಿ ಖಾತೆಯನ್ನು ವಂಚಕರಿಗೆ ಹಸ್ತಾಂತರಿಸಲು ಆರೋಪಿಗಳು ಪ್ರತ್ಯೇಕವಾಗಿ ₹10,000 ರಿಂದ ₹20,000 ಪಡೆಯುತ್ತಿದ್ದರು.

ಕಮಿಷನ್ ದಂಧೆ: ಮಾರಾಟ ಮಾಡಿದ ಖಾತೆಯಲ್ಲಿ ಪ್ರತಿ 1 ಲಕ್ಷ ರೂಪಾಯಿ ವರ್ಗಾವಣೆಯಾದಾಗ, ಇವರಿಗೆ 3 ರಿಂದ 5 ಸಾವಿರ ರೂಪಾಯಿ ಕಮಿಷನ್ ರೂಪದಲ್ಲಿ ಸಿಗುತ್ತಿತ್ತು.ವೃತ್ತಿಪರ ಅಕ್ರಮ: ಕೆಲವರು ಇದನ್ನೇ ಒಂದು ಲಾಭದಾಯಕ ವೃತ್ತಿಯನ್ನಾಗಿಸಿಕೊಂಡು ವ್ಯವಸ್ಥಿತವಾಗಿ ದಂಧೆ ನಡೆಸುತ್ತಿರುವುದು ತನಿಖೆಯಿಂದ ಬಯಲಾಗಿದೆ.

ಇದನ್ನೂ ಓದಿ – ಭದ್ರಾವತಿಯಲ್ಲಿ ಸಬ್‌ ಇನ್ಸ್‌ಪೆಕ್ಟರ್‌ಗಳ ಕಾಲಿನ ಮೂಳೆ, ಕೈ ಬೆರಳು ಕಟ್‌, ಆರೋಪಿ ಕಾಲಿಗೆ ಗುಂಡೇಟು

Leave a Comment