ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ಘಟನೆ 1
ಎಂಪಿಎಂ ನಿವೃತ್ತ ಅಧಿಕಾರಿ ಶ್ರೀಕಂಠ ಮತ್ತು ಅವರ ಪತ್ನಿ ಉಮಾ ಎಂದಿನಂತೆ ತರಕಾರಿ ತರಲು ವಿನೋಬನಗರದ ಎಪಿಎಂಸಿ ಮಾರುಕಟ್ಟೆಗೆ ಹೋಗುತ್ತಿದ್ದರು. ಇನ್ನೇನು ಮಾರುಕಟ್ಟೆ ತಲುಪಿದೆವು ಅನ್ನುವಷ್ಟರಲ್ಲಿ ಇವರಿದ್ದ ಬೈಕ್ ಅಪಘಾತಕ್ಕೀಡಾಯಿತು. ಉಮಾ ಅವರ ತಲೆ, ಕಣ್ಣಿನ ಭಾಗ, ಮೈಕೈಗೆ ಪೆಟ್ಟಾಯಿತು. ಚಿಕಿತ್ಸೆ ಪಡೆದು ಮನೆಗೆ ಮರಳಿದರೂ ನೋವು ಕಡಿಮೆಯಾಗಿಲ್ಲ. (road humps)
ಘಟನೆ 2
ಷೋ ರೂಂನಲ್ಲಿ ರಾತ್ರಿ ಡ್ಯೂಟಿ ಮುಗಿಸಿ ಬೈಕಿನಲ್ಲಿ ಮನೆಗೆ ಮರಳುತ್ತಿದ್ದಾಗ ರೈಲ್ವೆ ನಿಲ್ದಾಣದ ಬಳಿ ಅಮೀರ್ ಅಹಮದ್ ಕಾಲೋನಿಯಲ್ಲಿ ಅಪಘಾತವಾಯಿತು. ಯುವಕ ಬಿದ್ದು ಗಾಯಗೊಂಡಿದ್ದ. ಕೂಡಲೆ ಸ್ಥಳೀಯರು ಆತನಿಗೆ ನೆರವಾದರು.
ಘಟನೆ 3
ಫುಡ್ ಕಾರ್ಟ್ ವ್ಯಾಪಾರ ಮುಗಿಸಿ ಮನೆಗೆ ಮರಳುವಾಗ ಶರವಾತಿ ನಗರದಲ್ಲಿ ದುರಂತ ಸಂಭವಿಸಿತು. ವ್ಯಾಪಾರಿಗೆ ಸಣ್ಣಪುಟ್ಟ ತರಚಿದ ಗಾಯವಾಯಿತು. ಜೀವನ ನಡೆಸಲು ಇದ್ದ ಫುಡ್ ಕಾರ್ಟ್ ಆಟೋ ಜಖಂ ಆಯಿತು. ವ್ಯಾಪಾರಿಗೆ ಆಕಾಶವೆ ಕಳಚಿ ಬಿದ್ದ ಅನುಭವವಾಗಿದೆ.
ಘಟನೆ 4
ಫೆಬ್ರವರಿ 7ರ ನಡುರಾತ್ರಿ ಬೈಕ್‌ನಲ್ಲಿ ಬೊಮ್ಮನಕಟ್ಟೆಗೆ ತೆರಳುತ್ತಿದ್ದಾಗ ಅಪಘಾತ ಸಂಭವಿಸಿತು. ಕೂಡಲೆ ಗಾಯಾಳುವನ್ನು 108 ಆಂಬುಲೆನ್ಸ್‌ನಲ್ಲಿ ಶಿವಮೊಗ್ಗದ ನಂಜಪ್ಪ ಆಸ್ಪತ್ರೆಗೆ ಕರೆತರಲಾಯಿತು. ಗಾಯಾಳುವಿನ ಸ್ನೇಹಿತರು, ಕುಟುಂಬದವರು ಆತಂಕದಲ್ಲೆ ಅಸ್ಪತ್ರೆಗೆ ಧಾವಿಸಿದರು.

ಮೇಲಿನ ಎಲ್ಲ ಅಪಘಾತಗಳಿಗೆ ಕಾರಣ, ಶಿವಮೊಗ್ಗದ ರಸ್ತೆಗಳಲ್ಲಿ ನಿರ್ಮಿಸಲಾಗಿರುವ ಅವೈಜ್ಞಾನಿಕ ಹಂಪುಗಳು. ರಸ್ತೆಗಳಲ್ಲಿ ವಾಹನಗಳ ವೇಗಕ್ಕೆ ಮಿತಿ ಹೇರಿ, ಅಪಘಾತ ತಪ್ಪಿಸುವುದು ಹಂಪ್‌ಗಳ ಪ್ರಮುಖ ಉದ್ದೇಶ. ಆದರೆ ಶಿವಮೊಗ್ಗ ಸಿಟಿಯಲ್ಲಿ ಹಂಪ್‌ಗಳೇ ಅಪಘಾತದ ಸಂಖ್ಯೆ ಹೆಚ್ಚಳ ಮಾಡಿವೆ.

ದಿಢೀರ್ ಹಂಪ್‌ಗಳಿಂದ ನಾನಾ ಸಮಸ್ಯೆ
ಕಳೆದ ಮೂರ್ನಾಲ್ಕು ತಿಂಗಳಿಂದ ಶಿವಮೊಗ್ಗ ನಗರದ ವಿವಿಧೆಡೆ ಹಂಪ್‌ಗಳನ್ನು ಹಾಕಲಾಗುತ್ತಿದೆ. ಮುಖ್ಯರಸ್ತೆಗಳು, ಅಡ್ಡರಸ್ತೆಗಳು, ಕಿರುದಾರಿಗಳಲ್ಲಿಯು ಹಂಪ್‌ಗಳು ಪ್ರತ್ಯಕ್ಷವಾಗಿವೆ. ಆದರೆ ಇಷ್ಟು ವರ್ಷ ಇಲ್ಲದ ಹಂಪ್‌ಗಳು ದಿಢೀರ್ ಪ್ರತ್ಯಕ್ಷವಾಗುತ್ತಿರುವುದರಿಂದ ವಾಹನ ಸವಾರರು ಗೊಂದಲಕ್ಕೀಡಾಗುತ್ತಿದ್ದಾರೆ.
1 ದಿಢೀರ್ ಹಂಪ್‌ಗಳಿಂದಾಗಿ ದ್ವಿಚಕ್ರ ವಾಹನ ಸವಾರರು ನಿಯಂತ್ರಣ ತಪ್ಪಿ ಬಿದ್ದು ಗಾಯಗೊಳ್ಳುತ್ತಿದ್ದಾರೆ. ರಾತ್ರಿ ಹೊತ್ತಿನಲ್ಲಿಯೆ ಹೆಚ್ಚು ಅಪಘಾತಗಳು ಸಂಭವಿಸುತ್ತಿವೆ.2 ಹಲವೆಡೆ ವಿದ್ಯುತ್ ಬೀದಿ ದೀಪಗಳು ಸರಿಯಾಗಿ ಕಾರ್ಯನಿರ್ವಹಿಸದ ಹಿನ್ನೆಲೆ ಹಂಪ್‌ಗಳು ಇರುವುದೇ ಗೊತ್ತಾಗುತ್ತಿಲ್ಲ. ಇದು ಕೂಡ ಅಪಘಾತಕ್ಕೆ ಕಾರಣವಾಗಿವೆ.3 ಹಂಪ್‌ಗಳನ್ನು ಸ್ಥಾಪಿಸಿ ಅದರ ಮೇಲೆ ಬಿಳಿ ಬಣ್ಣದಿಂದ ಪೇಂಟ್ ಬಳಿಯಬೇಕು. ಇದು ಸಮರ್ಪಕವಾಗಿ ಆಗದ ಹಿನ್ನೆಲೆ ಅಪಘಾತಗಳಾಗುತ್ತಿವೆ. ಹೊಸ ಹಂಪ್‌ಗಳು ಇರುವೆಡೆ ಬ್ಯಾರಿಕೇಡ್‌ಗಳನ್ನು ಅಳವಡಿಸುತ್ತಿಲ್ಲ. 4 ಹಂಪ್‌ಗಳ ಎತ್ತರ ಹೆಚ್ಚಾಗಿದೆ. ಕಾರುಗಳ ಕೆಳಭಾಗ ಹಂಪ್‌ಗೆ ತಾಗಿ ಹಾನಿಯಾಗುತ್ತಿವೆ. ನಗರದ ಹಲವು ಹಂಪ್‌ಗಳ ಮೇಲಿನ ಗೀರುಗಳೇ ಇದಕ್ಕೆ ಸಾಕ್ಷಿ. ವಾಹನಗಳ ಸಸ್ಪೆನ್ಷನ್ ಹಾನಿಯಾಗಿವೆ.ಹಂಪ್‌ಗಳ ಅವಾಂತರ ಒಂದೆರಡಲ್ಲ
ಉಷಾ ನರ್ಸಿಂಗ್ ಹೋಂ ಸರ್ಕಲ್‌ನಿಂದ ರೈಲ್ವೆ ನಿಲ್ದಾಣ ರಸ್ತೆಯಲ್ಲಿ ಹಂಪ್‌ಗಳನ್ನು ಹಾಕಿದಾಗ ಹಲವರು ಬಿದ್ದು ಗಾಯಗೊಂಡಿದ್ದರು. ವಿಡಿಯೋಗಳು ವೈರಲ್ ಆದ ನಂತರ ಟ್ರಾಫಿಕ್ ಪೊಲೀಸರು ಹಂಪ್‌ಗಳಿಗೆ ಬಣ್ಣ ಬಳಿದಿದ್ದರು. ಇಷ್ಟಾದರು ಅಧಿಕಾರಿಗಳು ಎಚ್ಚೆತ್ತುಕೊಂಡಿಲ್ಲ. ನಗರದಾದ್ಯಂತ ಹಂಪ್‌ಗಳನ್ನು ಹಾಕುತ್ತಿದ್ದಾರೆ. ಆದರೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುತ್ತಿಲ್ಲ.

ಹಂಪ್ ಕಿತ್ತು ಹಾಕಿಸಿದ ಜನ
ರೈಲ್ವೆ ನಿಲ್ದಾಣದ ರಸ್ತೆಯ ರೋಟರಿ ಬ್ಲಡ್ ಬ್ಯಾಂಕ್‌ನಿಂದ ಮುಂದೆ ದಿಢೀರ್ ಹಂಪ್ ಹಾಕಲಾಗಿತ್ತು. ಎರಡೇ ದಿನಕ್ಕೆ ಈ ಹಿಂಪ್‌ನಿಂದ ಹಾರಿ ಬಿದ್ದು ಬೈಕ್ ಸವಾರರು, ಆಟೋ ಚಾಲಕರು ಗಾಯಗೊಂಡಿದ್ದರು. ಆಕ್ರೋಶಗೊಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿ, ಹಂಪ್‌ನ ಎತ್ತರ ಕಡಿಮೆ ಮಾಡಿಸಿದ್ದಾರೆ.
ರೇಡಿಯಂ ಸ್ಟಿಕರ್ ಅಂಟಿಸಿದ ವ್ಯಕ್ತಿ
ಅಮೀರ್ ಅಹಮದ್ ಕಾಲೋನಿಯಲ್ಲಿ ರಾತ್ರಿ ಹಂಪ್ ಹಾರಿ ದ್ವಿಚಕ್ರ ವಾಹನ ಸವಾರನೊಬ್ಬ ಬಿದ್ದು ತೀವ್ರ ಗಾಯಗೊಂಡಿದ್ದ. ಸ್ಥಳೀಯರು ಕೂಡಲೆ ಆತನಿಗೆ ನೆರವಾದರು. ಆದರೆ ಮತ್ತಷ್ಟು ಅಪಾಯ ಸಂಭವಿಸುವ ಸಾಧ್ಯತೆ ಇದ್ದಿದ್ದರಿಂದ ಸ್ಥಳೀಯರೊಬ್ಬರು ಹಂಪ್‌ಗಳ ಮೇಲೆ ರೇಡಿಯಂ ಸ್ಟಿಕ್ಕರ್ ಅಂಟಿಸಿ ವಾಹನ ಸವಾರರನ್ನು ಎಚ್ಚರಿಸುವ ಕೆಲಸ ಮಾಡಿದರು.

ಶಿವಮೊಗ್ಗದ ಹಂಪ್‌ಗಳು ಅವೈಜ್ಞಾನಿಕ
ಇನ್ನು, ನಗರದಲ್ಲಿ ಸ್ಥಾಪನೆ ಆಗಿರುವ ಹಂಪ್‌ಗಳು ಅವೈಜ್ಞಾನಿಕ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಹಂಪ್‌ಗಳ ಎತ್ತರ, ಅಗಲ ನಿಯಮ ಬಾಹಿರವಾಗಿದೆ ಎಂದು ಕಿಡಿಕಾರಿದ್ದಾರೆ.

ವಾಸ್ತವದಲ್ಲಿ ಹಂಪ್‌ಗಳು 3.7 ಮೀಟರ್ ಅಗಲ, 10 ಸೆಂಟಿಮೀಟರ್ ಎತ್ತರ ಇರಬೇಕು. ಹಂಪ್‌ಗಳ ಮೇಲೆ ಬಿಳಿ ಬಣ್ಣದ ಪಟ್ಟಿ ಬಳಿಯಬೇಕು. 40 ಮೀಟರ್ ಮುಂಚೆಯೇ ಸೂಚನಾ ಫಲಕ ಅಳವಡಿಸಬೇಕು ಎಂಬ ನಿಯಮಗಳಿವೆ.
ಇದನ್ನೂ ಓದಿ – ರಾಜ್ಯವನ್ನೇ ಬೆಚ್ಚಿಬೀಳಿಸಿದ ಶಿವಮೊಗ್ಗದ ಡ್ರೈವರ್, 19 ಅಕೌಂಟ್, 25 ATM ಕಾರ್ಡ್, ₹55 ಕೋಟಿ ನಷ್ಟ, ಏನಿದು ಕೇಸ್?
ಶಿವಮೊಗ್ಗದ ಹಂಪ್‌ಗಳು ಈ ನಿಯಮಗಳ ವ್ಯಾಪ್ತಿಯಿಂದಲೇ ಹೊರಗಿದ್ದಾವೆ. ಕೂಡಲೆ ಇದನ್ನು ಸರಿಪಡಿಸಬೇಕಿದೆ. ಇಲ್ಲವಾದಲ್ಲಿ ವೇಗ ನಿಯಂತ್ರಿಸಬೇಕಿರುವ ಹಂಪ್‌ಗಳು ಜನರ ಜೀವ ತೆಗೆಯಲು ಕಾರಣವಾಗಲಿವೆ.
LATEST NEWS
- ಭದ್ರಾವತಿ ವ್ಯಕ್ತಿಗೆ 2 ವರ್ಷ ಜೈಲು, ₹10,000 ದಂಡ, ಕಾರಣ ಹೂವಿನ ಗಿಡ

- ಶಿವಮೊಗ್ಗದ ಸವಾರರೆ ಹುಷಾರ್, ಬೈಕ್‌ನಿಂದ ಬಿದ್ದರು, ಆಟೋ ಜಖಂ, ಕಾರ್ ಕೆಳಗೆ ಡ್ಯಾಮೇಜ್, ಏನಿದು?

- ಭದ್ರಾವತಿ ಹೊಸ ಸಿದ್ಧಾಪುರದಲ್ಲಿ ಮನೆಗೆ ನುಗ್ಗಿದ ಕಳ್ಳರು, ಲಕ್ಷ ಲಕ್ಷ ಮೌಲ್ಯದ ವಸ್ತುಗಳು ಕಳವು

- ಇವತ್ತಿನ ₹98,140ಕ್ಕೆ ತಲುಪಿದೆ ಅಡಿಕೆ | 12 ಫೆಬ್ರವರಿ 2026 | ಅಡಿಕೆ ಧಾರಣೆ

- ಸಾರ್ವಜನಿಕರೆ ಎಚ್ಚರ, ಹೊಸನಗರದಲ್ಲಿ ಮೆಸ್ಕಾಂ ಅಲರ್ಟ್ ಪ್ರಕಟ, ಏನಿದು?

About The Editor
ನಿತಿನ್ ಆರ್.ಕೈದೊಟ್ಲು





