ಶಿವಮೊಗ್ಗ: ನಗರದ ಹಲವು ಬಡಾವಣೆಗಳಲ್ಲಿ ರಸ್ತೆ ಮತ್ತು ಚರಂಡಿ ಕಾಮಗಾರಿಗಳು ನಡೆಯುತ್ತಿವೆ. ಅವೆಲ್ಲವುಗಳನ್ನು ಮಳೆಗಾಲದ ಒಳಗೆ ಪೂರ್ಣಗೊಳಿಸಬೇಕೆಂದು (strict orders) ಶಾಸಕ ಎಸ್.ಎನ್. ಚನ್ನಬಸಪ್ಪ ಸೂಚನೆ ನೀಡಿದರು.
ಶಾಸಕರ ಕಚೇರಿಯಲ್ಲಿ ನಡೆದ ಮಹಾನಗರ ಪಾಲಿಕೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಆಮೆ ವೇಗದಲ್ಲಿ ನಡೆಯುತ್ತಿರುವ ಕಾಮಗಾರಿಗಳಿಂದಾಗಿ ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ. ಕುಂಟು ನೆಪ ಹೇಳುವುದನ್ನು ಬಿಟ್ಟು ಕೂಡಲೇ ಕಾಮಗಾರಿಗಳನ್ನು ಚುರುಕುಗೊಳಿಸಬೇಕು ಎಂದು ಸೂಚಿಸಿದರು.
ಇದನ್ನೂ ಓದಿ : ಶಿವಮೊಗ್ಗದ ಐಎಎಸ್ ಅಧಿಕಾರಿ ಹೆಸರಿನಲ್ಲಿ ವಂಚಿಸಲು ಯತ್ನ, ದಾಖಲಾಯ್ತು ಪ್ರಕರಣ
ಬಡಾವಣೆಗಳಲ್ಲಿ ನೀರು ನಿಲ್ಲಬಾರದು
ಯಾವುದೇ ಬಡಾವಣೆಯಲ್ಲಿ ಮಳೆಗಾಲದಲ್ಲಿ ನೀರು ನಿಲ್ಲಬಾರದು. ಮ್ಯಾನ್ಹೋಲ್ಗಳಿಂದ ತೊಂದರೆಯಾಗದಂತೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮೇಲ್ವಿಚಾರಣೆ ನಡೆಸಬೇಕು. ಕಾಮಗಾರಿಗಳಲ್ಲಿ ಗುಣಮಟ್ಟ ಕಾಯ್ದುಕೊಳ್ಳದಿದ್ದರೆ ಅಥವಾ ವಿಳಂಬ ಮುಂದುವರಿಸಿದರೆ ಕಾನೂನು ಕ್ರಮ ಜರುಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಪಾರ್ವತಮ್ಮ ಬಡಾವಣೆಗೆ ಭೇಟಿ
ವಾರ್ಡ್ ನಂಬರ್ 1ರ ಪಾರ್ವತಮ್ಮ ಬಡಾವಣೆಗೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಡಾವಣೆಯಲ್ಲಿ ಸಂಚರಿಸಿದ ಶಾಸಕ ಚನ್ನಬಸಪ್ಪ, ನಿವಾಸಿಗಳ ಅಹವಾಲುಗಳನ್ನು ಆಲಿಸಿದರು. ಒಳಚರಂಡಿ ವ್ಯವಸ್ಥೆಯಲ್ಲಿ ಉಂಟಾಗಿರುವ ತಾಂತ್ರಿಕ ತೊಂದರೆ ಹಾಗೂ ರಸ್ತೆಗಳ ದುರಸ್ತಿಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಮಾಹಿತಿ ಪಡೆದರು. ಸ್ಥಳೀಯ ಪ್ರಮುಖರಾದ ಚಂದ್ರಪ್ಪ, ರಾಜು, ಪಾಲಿಕೆಯ ಎಂಜಿನಿಯರ್ಗಳು, ಬಡಾವಣೆಯ ನಾಗರಿಕರು ಉಪಸ್ಥಿತರಿದ್ದರು.






