ಶಿವಮೊಗ್ಗ: ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ (KSRTC Bus Stand) ಕಳ್ಳರ ಹಾವಳಿ ಮುಂದುವರೆದಿದೆ. ಬಸ್ ಹತ್ತುವಾಗ ಮಹಿಳೆಯೊಬ್ಬರ ವ್ಯಾನಿಟಿ ಬ್ಯಾಗನ್ನೇ (Vanity bag) ಕಳ್ಳರು ಕಸಿದುಕೊಂಡು ಪರಾರಿಯಾಗಿದ್ದಾರೆ. ಘಟನೆಯಲ್ಲಿ ವ್ಯಾನಿಟಿ ಬ್ಯಾಗಿನಲ್ಲಿದ್ದ ₹2.86 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ (Gold ornaments) ಕಳ್ಳತನವಾಗಿದೆ.
ಹೇಗಾಯ್ತು ಘಟನೆ?
ಗಾಂಧಿ ಬಜಾರ್ ನಿವಾಸಿ ಜಯಲಕ್ಷ್ಮಿ (53) ಅವರು ತಮ್ಮ ಮಗನೊಂದಿಗೆ ಸಾಗರದಲ್ಲಿರುವ ಸಂಬಂಧಿಕರ ಮದುವೆಗೆ ಹೋಗಲು ಬಸ್ ನಿಲ್ದಾಣಕ್ಕೆ ಬಂದಿದ್ದರು. ಸಾಗರಕ್ಕೆ ತೆರಳುವ ಬಸ್ ಬಂದಾಗ ಹತ್ತಲು ಹೋದ ವೇಳೆ ಜನದಟ್ಟಣೆ (Crowded) ಇತ್ತು. ಈ ಸಂದರ್ಭ ಅವರು ತಮ್ಮ ಎಡತೋಳಿಗೆ ಹಾಕಿಕೊಂಡಿದ್ದ ವ್ಯಾನಿಟಿ ಬ್ಯಾಗ್ ಅನ್ನು ಯಾರೋ ಕಳ್ಳತನ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ವ್ಯಾನಿಟಿ ಬ್ಯಾಗ್‌ನಲ್ಲಿ ಏನೇನಿತ್ತು?
ವ್ಯಾನಿಟಿ ಬ್ಯಾಗ್‌ನಲ್ಲಿ ಸುಮಾರು ₹1,55,000 ಬೆಲೆಯ 50 ಗ್ರಾಂ ತೂಕದ ಹವಳದ ಸರ (Coral necklace), ₹78,000 ಬೆಲೆಯ 20 ಗ್ರಾಂನ ಮಣಿಸರ ಮತ್ತು ಡಾಲರ್, ₹22,800 ಮೌಲ್ಯದ 6 ಗ್ರಾಂ ತೂಕದ ಎರಡು ಚಿನ್ನದ ಉಂಗುರಗಳು (Gold rings), ಚಿನ್ನದ ಕಿವಿ ಓಲೆ, ಕೈ ಗಡಿಯಾರ (Wristwatch) ಹಾಗೂ ₹1,000 ನಗದು ಇತ್ತು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಘಟನೆ ಸಂಬಂಧ ದೊಡ್ಡಪೇಟೆ ಠಾಣೆಯಲ್ಲಿ (Doddapete Police Station) ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ (Investigation) ಕೈಗೊಂಡಿದ್ದಾರೆ.
ಇದೇನು ಮೊದಲಲ್ಲ
ಶಿವಮೊಗ್ಗ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಮಹಿಳೆಯರ ವ್ಯಾನಿಟಿ ಬ್ಯಾಗ್ ಟಾರ್ಗೆಟ್ (Target) ಆಗುತ್ತಿರುವುದು ಇದೇನು ಮೊದಲಲ್ಲ. ಈ ಹಿಂದೆ ಬಸ್ ಹತ್ತುವಾಗ ಮಹಿಳೆಯರ ವ್ಯಾನಿಟಿ ಬ್ಯಾಗಿನೊಳಗೆ ಕೈ ಹಾಕಿ ಸಿಕ್ಕಿದ್ದನ್ನೆಲ್ಲ ದೋಚುತ್ತಿದ್ದರು. ಹಲವು ಮಹಿಳೆಯರು ಚಿನ್ನಾಭರಣ, ನಗದು (Cash), ಮೊಬೈಲ್ ಫೋನ್, ಪ್ರಮುಖ ದಾಖಲೆಗಳನ್ನು ಕಳೆದುಕೊಂಡಿದ್ದಾರೆ. ಈಗ ವ್ಯಾನಿಟಿ ಬ್ಯಾಗ್ ಅನ್ನೇ ಕಳ್ಳತನ ಮಾಡಿದ್ದಾರೆ.
