ಸಾಗರ: ತಾಲೂಕಿನ ಮಾಲ್ವೆ ಗ್ರಾಮದ ಪರಿಹಾರಾತ್ಮಕ ಅರಣ್ಯ ಪ್ರದೇಶ (Compensatory Afforestation) ಹಾಗೂ ಸೊಪ್ಪಿನಬೆಟ್ಟದಲ್ಲಿ ನೂರಾರು ಅಕೇಶಿಯಾ ಮರ ಕಡಿತಲೆ ಪ್ರಕರಣಕ್ಕೆ ಸಂಬಂಧಿಸಿ ವಲಯ ಅರಣ್ಯಾಧಿಕಾರಿ (RFO), ಉಪ ವಲಯ ಅರಣ್ಯಾಧಿಕಾರಿ (DRFO) ಮತ್ತು ಗಸ್ತು ಸಿಬ್ಬಂದಿಯನ್ನು ಅಮಾನತುಗೊಳಿಸುವಂತೆ ಅರಣ್ಯ ಸಚಿವ ಈಶ್ವರ ಬಿ. ಖಂಡ್ರೆ ಆದೇಶಿಸಿದ್ದಾರೆ.
ಈ ಸಂಬಂಧ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗೆ (PCCF) ಲಿಖಿತ ಸೂಚನೆ ನೀಡಿರುವ ಅವರು, ಸ್ವಂತ ಉಪಯೋಗಕ್ಕೆ ಸೊಪ್ಪು ಸಂಗ್ರಹಿಸಬಹುದೇ ಹೊರತು ಮರ ಕಡಿಯಲು ಅವಕಾಶ ಇರುವುದಿಲ್ಲ. ಆದರೆ ಅಕ್ರಮವಾಗಿ ನೂರಾರು ಮರ ಕಡಿದಿದ್ದರೂ ತಡೆಯದೆ ಕರ್ತವ್ಯಲೋಪ ಎಸಗಿರುವುದರಿಂದ ಅರಣ್ಯ ಅಧಿಕಾರಿ ಹಾಗೂ ಸಿಬ್ಬಂದಿ ಅಮಾನತಿಗೆ (Suspension order) ಆದೇಶಿಸಲಾಗಿದೆ.

ಕರ್ನಾಟಕ ಉಚ್ಚ ನ್ಯಾಯಾಲಯವು (Karnataka High Court) ಅರಣ್ಯ ಸಂರಕ್ಷಣಾ ಕಾಯಿದೆಯಡಿ ಪರಿಹಾರಾತ್ಮಕ ಅರಣ್ಯಕ್ಕೆ ಗುರುತಿಸಲಾದ ಮತ್ತು ಬಳಸಲಾದ ಜಮೀನು ಅರಣ್ಯ ಭೂಮಿಯ ಕಾನೂನಾತ್ಮಕ ಸ್ವರೂಪ ಪಡೆಯುತ್ತದೆ ಎಂದು ಹೇಳಿದೆ. ಆದರೆ ಅಕ್ರಮ ಮರ ಕಡಿತಲೆ ಆಗಿರುವ ಭೂಮಿ ಸರ್ಕಾರಿ ಭೂಮಿ ಮತ್ತು ಅರಣ್ಯವಾಗಿದ್ದರೂ, ಎಫ್ಐಆರ್ನಲ್ಲಿ (FIR) ಅರಣ್ಯದ ಹೊರಗೆ ಎಂದು ನಮೂದಿಸುವ ಮೂಲಕ ಆರೋಪಿಗಳಿಗೆ ಅನುಕೂಲ ಮಾಡಿಕೊಡುವ ಪ್ರಯತ್ನ ನಡೆದಿರುವುದು ಮೇಲ್ನೋಟಕ್ಕೆ ಗೋಚರಿಸುತ್ತದೆ ಎಂದು ತಿಳಿಸಲಾಗಿದೆ.
ಸೂಕ್ತ ಕ್ರಮ ವಹಿಸದೆ, ಗಸ್ತು ಹೆಚ್ಚಿಸುವಲ್ಲಿ ವಿಫಲವಾಗಿರುವ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ (DCF) ಕಾರಣ ಕೇಳಿ ನೋಟಿಸ್ (Show cause notice) ನೀಡಿ, ಎಪಿಸಿಸಿಎಫ್ (APCCF) ನೇತೃತ್ವದ ತಂಡದಿಂದ ಈ ವಲಯದಲ್ಲಿ ಕಳೆದ 3 ವರ್ಷಗಳಲ್ಲಿ ಆಗಿರುವ ಎಲ್ಲಾ ಅಕ್ರಮ ಮರ ಕಡಿತಲೆ, ಒತ್ತುವರಿ (Encroachment) ಮತ್ತು ಅಕ್ರಮ ಮರ ಸಾಗಾಟ ಪ್ರಕರಣಗಳ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸಲು ಸಚಿವರು ಸೂಚನೆ ನೀಡಿದ್ದಾರೆ.
