ಸಾಗರ: ತಾಲ್ಲೂಕಿನ ತಾಳಗುಪ್ಪ ಹೋಬಳಿಯ ಕೆ.ಜಿ. ಕೊಪ್ಪದಲ್ಲಿ ತಹಶೀಲ್ದಾರ್ ನೇತೃತ್ವದಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ದಿಢೀರ್ ಕಾರ್ಯಾಚರಣೆ ನಡೆಸಿ, ಸರ್ಕಾರಿ ಜಮೀನು ಒತ್ತುವರಿಯನ್ನು ತೆರವುಗೊಳಿಸಿದರು.
ಕೆ.ಜಿ. ಕೊಪ್ಪದ ಸರ್ವೆ ನಂಬರ್ 24ರಲ್ಲಿ ಕೆಲವರು ಸರ್ಕಾರಿ ಜಮೀನನ್ನು ಒತ್ತುವರಿ ಮಾಡಿಕೊಂಡು ಬೇಲಿ ಅಳವಡಿಸುತ್ತಿರುವ ಬಗ್ಗೆ ಕಂದಾಯ ಇಲಾಖೆಗೆ ದೂರು ಬಂದಿದ್ದವು. ಈ ಹಿನ್ನೆಲೆ ಸ್ಥಳಕ್ಕೆ ಭೇಟಿ ನೀಡಿದ ತಹಶೀಲ್ದಾರ್ ಡಾ. ಪ್ರತಿಭಾ.ಆರ್ ನೇತೃತ್ವದ ಅಧಿಕಾರಿಗಳ ತಂಡ ಬೇಲಿ ತೆರವುಗೊಳಿಸಿ, ಜಮೀನನ್ನು ಇಲಾಖೆಯ ವಶಕ್ಕೆ ಪಡೆಯಿತು.

ಬಳಿಕ ಮಾತನಾಡಿದ ತಹಶೀಲ್ದಾರ್, ‘ತಾಲ್ಲೂಕಿನಲ್ಲಿ ಸರ್ಕಾರಿ ಭೂಮಿ ಕಬಳಿಸಲು ಯತ್ನಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು. ದಂಡಾಧಿಕಾರಿಯಾಗಿ ಸರ್ಕಾರಿ ಆಸ್ತಿ ರಕ್ಷಿಸುವುದು ನನ್ನ ಕರ್ತವ್ಯವಾಗಿದ್ದು, ಯಾವುದೇ ಕಾರಣಕ್ಕೂ ಒತ್ತುವರಿ ಸಹಿಸುವುದಿಲ್ಲ’ ಎಂದು ಎಚ್ಚರಿಕೆ ನೀಡಿದರು. ಕಾರ್ಯಾಚರಣೆಯಲ್ಲಿ ಕಂದಾಯ ನಿರೀಕ್ಷಕ ವಿನಾಯಕ್, ಗ್ರಾಮ ಸಹಾಯಕರಾದ ಸುರೇಂದ್ರ, ಜಯಂತ್ ಪಾಲ್ಗೊಂಡಿದ್ದರು.