ಶಿವಮೊಗ್ಗದಲ್ಲಿ ಮಳೆ ಹಾನಿ: ರೈಲ್ವೆ ವಿದ್ಯುತ್‌ ಲೈನ್‌ನಲ್ಲಿ ಬೆಂಕಿ, ಮರ ಬಿದ್ದು ಕುರಿಗಳು ಸಾವು, ಎಲ್ಲೆಲ್ಲಿ ಏನೇನಾಗಿದೆ?

ಶಿವಮೊಗ್ಗ: ಜಿಲ್ಲೆಯಾದ್ಯಂತ ಗುರುವಾರ ಸಂಜೆ ಗುಡುಗು, ಸಿಡಿಲು ಸಹಿತ ಭಾರಿ ಮಳೆಯಾಗಿದೆ. ಹಲವೆಡೆ ಆಸ್ತಿಪಾಸ್ತಿ ನಷ್ಟ ಸಂಭವಿಸಿದೆ.

ಬಿಸಿಲಿನ ಬೇಗೆಯಿಂದ ಕಂಗೆಟ್ಟಿದ್ದ ಮಲೆನಾಡಿಗರಿಗೆ ಮಳೆಯು ತಂಪು ನೀಡಿದೆ. ಆದರೆ ಬಿರುಗಾಳಿಯ ಅಬ್ಬರ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ತೀರ್ಥಹಳ್ಳಿ, ಹೊಸನಗರ, ಸಾಗರ ಹಾಗೂ ರಿಪ್ಪನ್‌ಪೇಟೆ ಭಾಗದಲ್ಲಿಯೂ ಉತ್ತಮ ಮಳೆಯಾದ ವರದಿಯಾಗಿದೆ.

Rain-Effect-in-Shimoga-District.

ಎಲ್ಲೆಲ್ಲಿ ಏನೇನು ಹಾನಿಯಾಗಿದೆ?

  • ಶಿಕಾರಿಪುರ: ತಾಲೂಕಿನ ಕೊರಟಿಗೆರೆ ತಾಂಡಾದಲ್ಲಿ ರಾತ್ರಿ ಮಳೆ ಆರಂಭವಾದಾಗ ಮರದ ಕೆಳಗೆ ಆಶ್ರಯ ಪಡೆದಿದ್ದ ಕುರಿಗಳ ಮೇಲೆ ಮರ ಬಿದ್ದಿದೆ. ಈ ಘಟನೆಯಲ್ಲಿ ಎಂಟು ಕುರಿಗಳು ಸ್ಥಳದಲ್ಲೇ ಮೃತಪಟ್ಟಿವೆ. ಹಲವು ಕುರಿಗಳು ಗಾಯಗೊಂಡಿವೆ.
  • ಸೊರಬ: ಪಟ್ಟಣದ ಮುರಾಫ ಮಠದ ಹಿಂಭಾಗ ನಿರ್ಮಾಣ ಹಂತದಲ್ಲಿದ್ದ ಸಭಾ ಭವನದ ಮೇಲ್ಛಾವಣಿಯು ಗಾಳಿಗೆ ಹಾರಿಹೋಗಿದೆ. ತಹಶೀಲ್ದಾರ್ ಕೆ. ಪುರಂದರ್ ಹಾಗೂ ಅಧಿಕಾರಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪಟ್ಟಣದ ರಂಗಮಂದಿರದ ಮುಂದಿನ ಮರಗಳು ವಿದ್ಯುತ್ ಕಂಬಗಳ ಮೇಲೆ ಬಿದ್ದು ಹಾನಿಯಾಗಿದೆ.

ತಾಲ್ಲೂಕಿನ ರಾಜುನಗರ, ಸೀಗೆಹಳ್ಳಿ ಸೇರಿದಂತೆ ಹಲವೆಡೆ ಮರಗಳು ಬಿದ್ದು ಮನೆ ಹಾಗೂ ವಿದ್ಯುತ್ ಕಂಬಗಳಿಗೆ ಹಾನಿಯಾಗಿದೆ. ಹಾನಿಯ ಬಗ್ಗೆ ಸಮಗ್ರ ವರದಿ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಲಾಗುವುದು.

– ಕೆ. ಪುರಂದರ್, ತಹಶೀಲ್ದಾರ್, ಸೊರಬ
  • ಶಿವಮೊಗ್ಗ: ಗೋಪಾಲಗೌಡ ಬಡಾವಣೆಯ ‘ಡಿ’ ಬ್ಲಾಕ್‌ನಲ್ಲಿ ಸಿಡಿಲು ಬಡಿದು ತೆಂಗಿನ ಮರಕ್ಕೆ ಬೆಂಕಿ ಹತ್ತಿಕೊಂಡಿದೆ. ನಗರದ ಹಲವೆಡೆ ಸಾಧಾರಣ ಮಳೆಯಾಗಿದ್ದು ವಾತಾವರಣ ತಂಪಾಗಿದೆ.
  • ಆನಂದಪುರ: ಆನಂದಪುರ ಸುತ್ತಮುತ್ತ ಸುಮಾರು ಎರಡು ಗಂಟೆಗಳ ಕಾಲ ಸುರಿದ ಧಾರಾಕಾರ ಮಳೆಯಿಂದಾಗಿ ರಸ್ತೆ ಬದಿಯ ಚರಂಡಿಗಳು ತುಂಬಿ ಹರಿದಿವೆ. ಕೆರೆ-ಕಟ್ಟೆಗಳಿಗೆ ನೀರು ಹರಿದು ಬಂದಿರುವುದು ರೈತರಲ್ಲಿ ಹರ್ಷ ತಂದಿದೆ.
  • ತೀರ್ಥಹಳ್ಳಿ: ತಾಲೂಕಿನ ವಿವಿಧೆಡೆ ಆಲಿಕಲ್ಲು ಮಳೆಯಾಗಿದೆ. ಮಾರಿಕಾಂಬಾ ಜಾತ್ರೆ ಸಂದರ್ಭ ಅಳವಡಿಸಿದ್ದ ಮುಖ್ಯ ದ್ವಾರವು ರಾಷ್ಟ್ರೀಯ ಹೆದ್ದಾರಿ 169 ‘ಎ’ ಮಾರ್ಗದಲ್ಲಿ ಕುಸಿದು ಬಿದ್ದಿದೆ.
  • ಶಿವಮೊಗ್ಗ: ತಾಲೂಕಿನ ಬಾಳೆಕೊಪ್ಪ‌ ಭಾಗದಲ್ಲಿ ಭಾರಿ ಗಾಳಿ ಸಹಿತ ಮಳೆಯಾಯಿತು. ಈ ಸಂದರ್ಭ ರೈಲ್ವೆ ಗೇಟ್‌ನಲ್ಲಿ ಹಾದು ಹೋಗಿರುವ ರೈಲ್ವೆ ವಿದ್ಯುತ್‌ ಲೈನ್‌ (ಎಲ್‌ಸಿ 73) ಮೇಲೆ ಮರದ ರೆಂಬೆ ಬಿದ್ದಿದೆ. ಇದರಿಂದ ವಿದ್ಯುತ್‌ ಲೈನ್‌ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು.
ಹೆಚ್ಚಿನ Shimoga News, Shivamogga News ಮತ್ತು NEWS ಸುದ್ದಿಗಳಿಗಾಗಿ ಶಿವಮೊಗ್ಗ ಲೈವ್ ನೋಡಿ.

© ಶಿವಮೊಗ್ಗ ಲೈವ್‌ : ಮೇ 15, 2026