ಶಿವಮೊಗ್ಗ: ಕೊಡಗಿನ ದುಬಾರೆ ಆನೆ ಬಿಡಾರದಲ್ಲಿ (Dubare Elephant Camp) ಇತ್ತೀಚೆಗೆ ನಡೆದ ಅವಘಡದ (accident) ಹಿನ್ನೆಲೆ, ಶಿವಮೊಗ್ಗದ ಸಕ್ರೆಬೈಲು ಆನೆ ಬಿಡಾರಕ್ಕೂ (Sakrebyle Elephant Camp) ಬಿಸಿ ತಟ್ಟಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಮೇ 22ರಿಂದ ಸಕ್ರೆಬೈಲು ಬಿಡಾರಕ್ಕೆ ಪ್ರವಾಸಿಗರ (tourists) ಪ್ರವೇಶ ತಾತ್ಕಾಲಿಕವಾಗಿ ನಿರ್ಬಂಧಿಸಿ (temporary ban) ಅರಣ್ಯ ಇಲಾಖೆ ಆದೇಶಿಸಿದೆ.
ಆನೆ ಬಿಡಾರಗಳಲ್ಲಿ ಪ್ರವಾಸಿಗರ ಸುರಕ್ಷತೆ ಹಾಗೂ ಅಹಿತಕರ ಘಟನೆಗಳು ಮರುಕಳಿಸದಂತೆ ತಡೆಯಲು ಕಟ್ಟುನಿಟ್ಟಿನ ಮಾರ್ಗಸೂಚಿ (Standard Operating Procedure) ನಿಯಮಗಳನ್ನು ಜಾರಿಗೆ ತರಲು ಇಲಾಖೆ ನಿರ್ಧರಿಸಿದೆ. ಈ ನಿಯಮಗಳು ಅಧಿಕೃತವಾಗಿ ಜಾರಿಗೆ ಬರುವವರೆಗೂ ಸಕ್ರೆಬೈಲು ಬಿಡಾರಕ್ಕೆ ಸಾರ್ವಜನಿಕರ ಪ್ರವೇಶ ಇರುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆನೆ ನೋಡಲು ಬಂದ ಪ್ರವಾಸಿಗರಿಗೆ ನಿರಾಸೆ
ಸಕ್ರೆಬೈಲು ಬಿಡಾರದಲ್ಲಿ ಪ್ರಸ್ತುತ 24 ಆನೆಗಳಿವೆ. ಇವುಗಳಲ್ಲಿ 19 ಗಂಡು ಹಾಗೂ 5 ಹೆಣ್ಣು ಆನೆಗಳಿವೆ. ಪ್ರತಿದಿನ ಬೆಳಿಗ್ಗೆ ತುಂಗಾ ಜಲಾಶಯದ (Tunga Reservoir) ಹಿನ್ನೀರಿನಲ್ಲಿ ಆನೆಗಳಿಗೆ ಸ್ನಾನ ಮಾಡಿಸಲಾಗುತ್ತಿತ್ತು (elephant bathing). ಈ ದೃಶ್ಯವನ್ನು ಕಣ್ಣುಂಬಿಕೊಳ್ಳಲು ಮತ್ತು ಆನೆಗಳಿಗೆ ಸ್ನಾನ ಮಾಡಿಸಲು ನೂರಾರು ಸಂಖ್ಯೆಯಲ್ಲಿ ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಿದ್ದರು. ಅರಣ್ಯ ಇಲಾಖೆಯ ನಿರ್ಧಾರದಿಂದಾಗಿ ಪ್ರವಾಸಿಗರಿಗೆ ನಿರಾಸೆಯಾಗಲಿದೆ.
