ಶಿವಮೊಗ್ಗ: ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆಗೆ ಆಗ್ರಹಿಸಿ ಜಿಲ್ಲಾ ವಕೀಲರ ಸಂಘದ ನೇತೃತ್ವದಲ್ಲಿ ಕೋರ್ಟ್ ಆವರಣದಲ್ಲಿ ಕಳೆದ ಒಂದು ವಾರದಿಂದ ಧರಣಿ ಸತ್ಯಾಗ್ರಹ ನಡೆಯುತ್ತಿದೆ. ಈ ಹೋರಾಟಕ್ಕೆ ಸಂಸದ ಬಿ.ವೈ. ರಾಘವೇಂದ್ರ, ರಾಷ್ಟ್ರಭಕ್ತರ ಬಳಗ ಹಾಗೂ ಶಿವಮೊಗ್ಗ ಜವಳಿ ವರ್ತಕರ ಸಂಘದವರು ಪಾಲ್ಗೊಂಡು ಇಂದು ತಮ್ಮ ಬೆಂಬಲ ಸೂಚಿಸಿದರು.
ಪ್ರತಿಭಟನೆಯಲ್ಲಿ ಸಂಸದ ರಾಘವೇಂದ್ರ
ಪ್ರತಿಭಟನೆಗೆ ಸಂಸದ ಬಿ.ವೈ. ರಾಘವೇಂದ್ರ, ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್, ಡಾ.ಧನಂಜಯ ಸರ್ಜಿ, ಬಿಜೆಪಿ ಜಿಲ್ಲಾಧ್ಯಕ್ಷ ಜಗದೀಶ್ ಸೇರಿದಂತೆ ಬಿಜೆಪಿ ಮುಖಂಡರು ಬೆಂಬಲ ಸೂಚಿಸಿದರು. ಇದೇ ವೇಳೆ ಮಾತನಾಡಿದ ಸಂಸದ ಬಿ.ವೈ.ರಾಘವೇಂದ್ರ, ನ್ಯಾಯ ಎಲ್ಲರಿಗೂ ಸುಲಭವಾಗಿ ಸಿಗಬೇಕು ಎನ್ನುವುದು ಸಂವಿಧಾನದ ಆಶಯವಾಗಿದೆ. ಆದರು ಮಲೆನಾಡು ಮತ್ತು ಮಧ್ಯ ಕರ್ನಾಟಕದ ಜನರು ನ್ಯಾಯಕ್ಕಾಗಿ 300ಕ್ಕೂ ಹೆಚ್ಚು ಕಿಲೋಮೀಟರ್ ದೂರದ ಬೆಂಗಳೂರಿಗೆ ಅಲೆಯಬೇಕಾದ ಪರಿಸ್ಥಿತಿ ಇದೆ ಎಂದರು.

ಧಾರವಾಡ ಮತ್ತು ಕಲಬುರಗಿ ಹೈಕೋರ್ಟ್ ಪೀಠದ ಮಾದರಿಯಲ್ಲಿ, ಚಿತ್ರದುರ್ಗ, ದಾವಣಗೆರೆ, ಚಿಕ್ಕಮಗಳೂರು ಜಿಲ್ಲೆಗಳನ್ನು ಬೆಸೆಯಲು ಶಿವಮೊಗ್ಗದಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಯಾಗುವುದು ಭೌಗೋಳಿಕವಾಗಿ ಹಾಗೂ ನ್ಯಾಯದ ದೃಷ್ಟಿಯಿಂದ ಅತ್ಯಗತ್ಯವಾಗಿದೆ. ಜಸ್ವಂತ್ ಸಿಂಗ್ ಆಯೋಗ ನಿಗದಿಪಡಿಸಿರುವ ಎಲ್ಲಾ ಮಾನದಂಡಗಳನ್ನು ಶಿವಮೊಗ್ಗ ಪೂರ್ಣವಾಗಿ ಪೂರೈಸುತ್ತದೆ ಎಂದರು.
ಮಳೆಗಾಲದಲ್ಲಿ ತೀವ್ರ ಸಂಕಷ್ಟ
ಕೆಲವರು ಮಂಗಳೂರು ಪೀಠದ ವ್ಯಾಪ್ತಿಗೆ ಶಿವಮೊಗ್ಗವನ್ನು ಸೇರಿಸುವ ಮಾತನಾಡುತ್ತಿದ್ದಾರೆ. ಆದರೆ ಭೀಕರ ಮಳೆಗಾಲದಲ್ಲಿ ಶಿರಾಡಿ, ಚಾರ್ಮಾಡಿ ಅಥವಾ ಆಗುಂಬೆ ಘಾಟ್‌ಗಳಂತಹ ಅಪಾಯಕಾರಿ ರಸ್ತೆಗಳನ್ನು ದಾಟಿ ಜನರು ಮಂಗಳೂರಿಗೆ ಸಂಚರಿಸಿ ನ್ಯಾಯ ಪಡೆಯುವುದು ಪ್ರಾಯೋಗಿಕವಾಗಿ ಅಸಾಧ್ಯ. ಅದಕ್ಕಾಗಿಯೇ ವಕೀಲರ ಸಮುದಾಯ ಮತ್ತು ವಿವಿಧ ಬಾರ್ ಅಸೋಸಿಯೇಷನ್‌ಗಳು ಮಂಗಳೂರು ಪ್ರಸ್ತಾಪವನ್ನು ತಿರಸ್ಕರಿಸಿವೆ ಎಂದು ತಿಳಿಸಿದರು.

“ಕೇಂದ್ರ ಕಾನೂನು ಸಚಿವಾಲಯದ ಮಟ್ಟದಲ್ಲಿ ಈ ಪ್ರಸ್ತಾಪಕ್ಕೆ ಧ್ವನಿಯಾಗಲು ನಾನು ಬದ್ಧ. ರಾಜ್ಯ ಸರ್ಕಾರ ಮೂಲಸೌಕರ್ಯ ಒದಗಿಸಿ, ಮುಖ್ಯ ನ್ಯಾಯಮೂರ್ತಿಗಳ ಸಹಮತಿಯೊಂದಿಗೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಬೇಕಿದೆ. ಶಿವಮೊಗ್ಗ ಹೈಕೋರ್ಟ್ ಪೀಠ ಸ್ಥಾಪನೆಯಾಗುವವರೆಗೆ ನಾವೆಲ್ಲರೂ ಪಕ್ಷಾತೀತ ಹೋರಾಟ ನಡೆಸೋಣ.”
– ಬಿ.ವೈ. ರಾಘವೇಂದ್ರ, ಸಂಸದ
ರಾಷ್ಟ್ರಭಕ್ತರ ಬಳಗದ ಬೆಂಬಲ
ಶಿವಮೊಗ್ಗದ ಕೋರ್ಟ್ ಆವರಣದಲ್ಲಿ ಹೈಕೋರ್ಟ್ ಸಂಚಾರಿ ಪೀಠವನ್ನು ಶಿವಮೊಗ್ಗಕ್ಕೆ ನೀಡುವಂತೆ ಆಗ್ರಹಿಸಿ ನಡೆಯುತ್ತಿರುವ ಹೋರಾಟದಲ್ಲಿ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅವರು ಭಾಗಿಯಾಗಿ ಬೆಂಬಲ ಸೂಚಿಸಿದರು.
“ಜೂನ್ 1ರಂದು ಮುಖ್ಯಮಂತ್ರಿ ಅವರು ಶಿವಮೊಗ್ಗಕ್ಕೆ ಭೇಟಿ ನೀಡಲಿದ್ದಾರೆ. ಅಂದೇ ಹೈಕೋರ್ಟ” ಪೀಠ ಘೋಷಣೆ ಮಾಡಬೇಕು” –
– ಕೆ.ಎಸ್. ಈಶ್ವರಪ್ಪ, ಮಾಜಿ ಉಪಮುಖ್ಯಮಂತ್ರಿ

ಶಿವಮೊಗ್ಗದ ವರ್ತಕರ ಬೆಂಬಲ
ಜಿಲ್ಲಾ ವಕೀಲರ ಸಂಘ ನಡೆಸುತ್ತಿರುವ ಧರಣಿ ಸತ್ಯಾಗ್ರಹಕ್ಕೆ ಶಿವಮೊಗ್ಗ ಜವಳಿ ವರ್ತಕರ ಸಂಘ ಬೆಂಬಲ ವ್ಯಕ್ತಪಡಿಸಿ ಧರಣಿಯಲ್ಲಿ ಪಾಲ್ಗೊಂಡಿತು. ಈ ವೇಳೆ ಮಾತನಾಡಿದ ಜವಳಿ ವರ್ತಕರ ಸಂಘದ ಅಧ್ಯಕ್ಷ ಸುರೇಶ್ ಕುಮಾರ್ ಬೇದ್ರೆ, ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಯಾದರೆ, ಮಧ್ಯ ಕರ್ನಾಟಕ ಭಾಗದ ಜನರಿಗೆ ಅಲ್ಲಿಗೆ ತಲುಪಲು, ಅಲ್ಲಿ ತಂಗಲು ಜೊತೆಗೆ ಆಹಾರ ಪದ್ಧತಿ ಎಲ್ಲವೂ ಸಮಸ್ಯೆಯಾಗಲಿದೆ ಎಂದರು.

ಈ ಸಂದರ್ಭ ಹೋರಾಟ ಸಮಿತಿ ಅಧ್ಯಕ್ಷ ಕೆ.ಬಸಪ್ಪಗೌಡ, ವಕೀಲರ ಸಂಘದ ಜಿಲ್ಲಾಧ್ಯಕ್ಷ ರಾಘವೇಂದ್ರ ಸ್ವಾಮಿ, ಹಿರಿಯ ವಕೀಲರಾದ ಕೆ.ಪಿ.ಶ್ರೀಪಾಲ್ ಸೇರಿ ಹಲವರು ಇದ್ದರು.
