ಎಲೆಕ್ಟ್ರಿಕ್‌ ಕಾರುಗಳ ಸೇಲ್‌ ಹೆಚ್ಚಳ, ಸಿಎನ್‌ಜಿ ಕಾರುಗಳತ್ತ ಮಧ್ಯಮ ವರ್ಗದ ಚಿತ್ತ, ಕಾರಣವೇನು?

ಆಟೋಮೊಬೈಲ್‌ ಸುದ್ದಿ: ಪೆಟ್ರೋಲ್ ಮತ್ತು ಡೀಸೆಲ್ ದರಗಳ ನಿರಂತರ ಏರಿಕೆಯು ವಾಹನ ಖರೀದಿದಾರರ ತೀರ್ಮಾನಗಳ ಮೇಲೆ ಭಾರಿ ಪ್ರಭಾವ ಬೀರುತ್ತಿದೆ. ಗ್ರಾಹಕರು ಈಗ ಎಲೆಕ್ಟ್ರಿಕ್ (EV) ಮತ್ತು ಸಿಎನ್‌ಜಿ (CNG) ಚಾಲಿತ ಕಾರುಗಳ ಖರೀದಿಯತ್ತ ಹೆಚ್ಚಿನ ಒಲವು ತೋರುತ್ತಿದ್ದಾರೆ ಎಂದು ವರದಿಯಾಗಿದೆ.

ಕಳೆದ ಎರಡು ವಾರಗಳ ಅವಧಿಯಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ದರಗಳು ನಾಲ್ಕು ಬಾರಿ ಪರಿಷ್ಕರಣೆಗೊಂಡಿದೆ. ಪ್ರತಿ ಲೀಟರ್‌ಗೆ ಸುಮಾರು ₹7.5 ಏರಿಕೆಯಾಗಿದೆ. ಇಂಧನ ದರ ಏರಿಕೆಯಿಂದಾಗಿ ವಾಹನ ಸವಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಲ್ಲದೆ ಇನ್ನಷ್ಟು ದರ ಹೆಚ್ಚಳದ ಆತಂಕದಲ್ಲಿದ್ದಾರೆ.

AUTOMOBILE-NEWS-THUMBNAIL.

ಇವಿ ಕಾರುಗಳ ಮಾರಾಟ ಹೆಚ್ಚಳ

ಫೆಡರೇಶನ್ ಆಫ್ ಆಟೋಮೊಬೈಲ್ ಡೀಲರ್ಸ್ ಅಸೋಸಿಯೇಷನ್ (FADA) ಬಿಡುಗಡೆ ಮಾಡಿರುವ ಇತ್ತೀಚಿನ ವರದಿಯ ಪ್ರಕಾರ, ದೇಶದ ಒಟ್ಟಾರೆ ಪ್ರಯಾಣಿಕ ವಾಹನಗಳ ರಿಟೇಲ್‌ ಮಾರಾಟದಲ್ಲಿ ಎಲೆಕ್ಟ್ರಿಕ್ ಕಾರುಗಳ ಪಾಲು ಗಣನೀಯವಾಗಿ ಹೆಚ್ಚಾಗಿದೆ ಎಂದು ತಿಳಿಸಲಾಗಿದೆ. 2025ರಲ್ಲಿ ಇವಿ ಕಾರುಗಳ ಮಾರಾಟದ ಪಾಲು ಶೇ.2.61 ರಷ್ಟಿತ್ತು. 2026ರ ಹಣಕಾಸು ವರ್ಷದ ವೇಳೆಗೆ ಇದು ಶೇ 4.25 ಕ್ಕೆ ಏರಿಕೆಯಾಗಿದೆ.

ಪ್ರಸಕ್ತ ಹಣಕಾಸು ವರ್ಷದ ಆರಂಭಿಕ ತಿಂಗಳಾದ 2026ರ ಏಪ್ರಿಲ್‌ನಲ್ಲಿ ಇವಿ ಕಾರುಗಳ ಮಾರುಕಟ್ಟೆ ಪಾಲು ಶೇ 5.77 ಕ್ಕೆ ತಲುಪಿದೆ. ಕಳೆದ ವರ್ಷದ ಏಪ್ರಿಲ್‌ನಲ್ಲಿ  13,421 ಕಾರುಗಳು ಮಾರಾಟವಾಗಿದ್ದವು. ಈ ವರ್ಷದ ಏಪ್ರಿಲ್‌ನಲ್ಲಿ ಇವಿ ಕಾರುಗಳ ಮಾರಾಟವು ಶೇ 75.14 ರಷ್ಟು ಪ್ರಗತಿ ಕಂಡಿದೆ. ಒಟ್ಟು 23,561 ಯುನಿಟ್‌ಗಳು ಮಾರಾಟವಾಗಿವೆ.

ಗ್ರಾಹಕರ ಆದ್ಯತೆ ಬದಲಾಗಲು ಕಾರಣವೇನು?

ಈ ಹಿಂದೆ ಕೇವಲ ಪರಿಸರ ಕಾಳಜಿ ಅಥವಾ ಸರ್ಕಾರದ ಸಬ್ಸಿಡಿಗಾಗಿ ಇವಿ ಕಾರುಗಳನ್ನು ಖರೀದಿಸಲಾಗುತ್ತಿತ್ತು. ಆದರೆ ಈಗ, ದೀರ್ಘಾವಧಿಯ ನಿರ್ವಹಣಾ ವೆಚ್ಚವನ್ನು ಉಳಿಸಲು ಗ್ರಾಹಕರು ಇವಿ ಮೊರೆ ಹೋಗುತ್ತಿದ್ದಾರೆ. ಹೆಚ್ಚುತ್ತಿರುವ ಇಂಧನ ಬೆಲೆಯೇ ಗ್ರಾಹಕರ ಈ ಬದಲಾವಣೆಗೆ ಪ್ರಮುಖ ಕಾರಣ ಎಂದು ಬಿಸ್ನೆಸ್‌ ಸ್ಟಾಂಡರ್ಡ್‌ ವರದಿ ಮಾಡಿದೆ.

ಸಿಎನ್‌ಜಿ ಕಾರುಗಳಿಗು ಡಿಮಾಂಡ್‌

ಇವಿ ಕಾರುಗಳಿಗೆ ಚಾರ್ಜಿಂಗ್ ಮೂಲಸೌಕರ್ಯ ಕೊರತೆ, ಬ್ಯಾಟರಿ ಬಾಳಿಕೆಯ ಆತಂಕ ಮತ್ತು ಮರುಮಾರಾಟದ ಮೌಲ್ಯದ (Resale value) ಅನಿಶ್ಚಿತತೆ ಇನ್ನೂ ಮುಂದುವರಿದಿದೆ. ಹೀಗಾಗಿ, ಯಾವುದೇ ಚಾರ್ಜಿಂಗ್ ತೊಂದರೆಯಿಲ್ಲದೆ ಕಡಿಮೆ ವೆಚ್ಚದಲ್ಲಿ ಪ್ರಯಾಣಿಸಲು ಬಯಸುವ ಮಧ್ಯಮ ವರ್ಗದ ಗ್ರಾಹಕರು ಸಿಎನ್‌ಜಿ ಕಾರುಗಳತ್ತಲು ವಾಲುತ್ತಿದ್ದಾರೆ. 2026ರ ಏಪ್ರಿಲ್‌ನಲ್ಲಿ ಮಾರಾಟವಾದ ಒಟ್ಟು ಕಾರುಗಳ ಪೈಕಿ ಸಿಎನ್‌ಜಿ ಕಾರುಗಳ ಪಾಲು ಶೇ 22.62 ರಷ್ಟಿದೆ. ಇಂಧನ ದರ ನಿರಂತರ ಏರಿಕೆಯು ಇವಿ ಮತ್ತು ಸಿಎನ್‌ಜಿ ಕಾರುಗಳ ಮಾರಾಟ ಹೆಚ್ಚಳ ಮಾಡಿದೆ.