ಭತ್ತದ ಬೆಳೆಗೆ ಕೀಟ, ರೋಗ ಬಾಧೆ, ರೈತರಿಗೆ ಕೃಷಿ ಇಲಾಖೆಯಿಂದ ಮಹತ್ವದ ಸೂಚನೆ, ಏನದು?

ಶಿವಮೊಗ್ಗ: ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ನಾಟಿ ಮಾಡಿದ ಭತ್ತದ ಬೆಳೆಯು ಸದ್ಯ ಹಾಲು ತುಂಬುವ ಮತ್ತು ಕಾಳು ಕಟ್ಟುವ ಹಂತದಲ್ಲಿದೆ. ಈ ಸಂದರ್ಭ ಬೆಳೆಗೆ ಕೆಲವು ಕೀಟ ಹಾಗೂ ರೋಗಗಳ ಬಾಧೆ ಕಾಣಿಸಿಕೊಂಡಿದ್ದು, ಬೆಳೆ ರಕ್ಷಣೆಗೆ ರೈತರು ತಕ್ಷಣವೇ ಸೂಕ್ತ ನಿರ್ವಹಣಾ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾ ಜಂಟಿ ಕೃಷಿ ನಿರ್ದೇಶಕರು ಸಲಹೆ ನೀಡಿದ್ದಾರೆ. (ಈ ಸುದ್ದಿಯನ್ನು ಇನ್ನು 91 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

ಏನೆಲ್ಲ ಸಲಹೆ ನೀಡಿದ್ದಾರೆ? ಇಲ್ಲಿದೆ ಪಾಯಿಂಟ್ಸ್‌

ತೆನೆ ತಿಗಣೆ ಬಾಧೆ ಹಾಗೂ ಹತೋಟಿ

  • ಹಾಲು ತುಂಬುವ ಸಮಯದಲ್ಲಿ ಈ ಕೀಟಗಳು ಕಾಳಿನಿಂದ ರಸ ಹೀರುವುದರಿಂದ ಕಾಳುಗಳು ಜೋಳ್ಳಾಗುತ್ತವೆ.
  • ಪ್ರತಿ ಲೀಟರ್ ನೀರಿಗೆ 2 ಎಂ.ಎಲ್. ಮಾಲಾಥಿಯಾನ್ 50 ಇಸಿ ಬೆರೆಸಿ ತೆನೆಗಳಿಗೆ ಸಿಂಪಡಿಸಬೇಕು ಅಥವಾ ಒಂದು ಎಕರೆಗೆ 8 ಕೆ.ಜಿ. ಮಾಲಾಥಿಯಾನ್ ಶೇ. 5 ಡಿ ಪುಡಿಯನ್ನು ತೆನೆಗಳ ಮೇಲೆ ಧೂಳೀಕರಿಸಬೇಕು.

ಕಂದು ಜಿಗಿಹುಳು ಬಾಧೆ

  • ವಾತಾವರಣದ ಉಷ್ಣಾಂಶ ಮತ್ತು ಆರ್ದ್ರತೆಯ ಬದಲಾವಣೆಯಿಂದ ಈ ಹುಳು ಕಾಣಿಸಿಕೊಳ್ಳಲಿದ್ದು, ರೈತರು ಗದ್ದೆಯ ಒಳಗೆ ಹೋಗಿ ಬೆಳೆಯ ಬುಡ ಭಾಗವನ್ನು ಪರೀಕ್ಷಿಸಬೇಕು.
  • ಕೀಟ ಬಾಧೆ ಕಂಡುಬಂದ ತಕ್ಷಣ ಗದ್ದೆಯಿಂದ ನೀರನ್ನು ಬಸಿದು ತೆಗೆಯಬೇಕು. ಪ್ರತಿ 5 ರಿಂದ 6 ದಿನಗಳಿಗೊಮ್ಮೆ ಗದ್ದೆಯ ನೀರನ್ನು ಸಂಪೂರ್ಣವಾಗಿ ಬಸಿದು ಮತ್ತೆ ಹಾಯಿಸಬೇಕು.
  • ಗಾಳಿ ಮತ್ತು ಬೆಳಕು ಆಡುವಂತೆ ಪ್ರತಿ 8 ರಿಂದ 10 ಸಾಲುಗಳ ನಡುವೆ ‘ಪಾತ’ (ದಾರಿ) ಮಾಡುವುದು ಸೂಕ್ತ.
  • ಕೀಟ ಬಾಧೆ ಹೆಚ್ಚಿದ್ದರೆ, ಪ್ರತಿ ಲೀಟರ್ ನೀರಿಗೆ 0.5 ಎಂ.ಎಲ್. ಇಮಿಡಾಕ್ಲೋಪ್ರಿಡ್ 200 ಎಸ್‌ಎಲ್ ಬೆರೆಸಿ ಬೆಳೆಯ ಬುಡ ಭಾಗಕ್ಕೆ ಸಿಂಪಡಿಸಬೇಕು. ಅಥವಾ ಎಕರೆಗೆ 8 ಕೆ.ಜಿ. ಕಾರ್ಬೋಫ್ಯುರಾನ್ 3 ಜಿ ಅಥವಾ 5 ಕೆ.ಜಿ. ಫೋರೇಟ್ 10 ಜಿ ಹರಳು ರೂಪದ ಕೀಟನಾಶಕ ಬಳಸಬಹುದು.

ರೋಗಗಳ ನಿಯಂತ್ರಣ ಕ್ರಮಗಳು

  • ಗದ್ದೆಯಲ್ಲಿ ತೆನೆ ಕವಚದ ಮೇಲೆ ಕಂದು ಅಥವಾ ಕಪ್ಪು ಕಲೆಗಳು ಕಾಣಿಸಿಕೊಂಡು ಕಾಳುಗಳು ಜೋಳ್ಳಾಗುತ್ತಿದ್ದರೆ, ಪ್ರತಿ ಲೀಟರ್ ನೀರಿಗೆ 2 ಎಂ.ಎಲ್. ಹೆಕ್ಸಾ ಕೊನಾಜೋಲ್ ಅಥವಾ 1 ಎಂ.ಎಲ್. ಪ್ರೊಪಿಕೋನಾಜೋಲ್ ಶಿಲೀಂಧ್ರ ನಾಶಕ ಬೆರೆಸಿ ಸಿಂಪಡಿಸಬೇಕು.
  • ಈ ರೋಗದ ನಿಯಂತ್ರಣಕ್ಕಾಗಿ ಪ್ರತಿ ಲೀಟರ್ ನೀರಿಗೆ 0.6 ಗ್ರಾಂ ಟ್ರೈಸೈಕ್ಲಾಜೋಲ್ 75 ಡಬ್ಲ್ಯೂಪಿ ಬೆರೆಸಿ ಸಿಂಪಡಿಸಬೇಕು.

ಹೆಚ್ಚಿನ ಮಾಹಿತಿಗಾಗಿ ರೈತರು ತಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

Agriculture-News-Farmer